ಪೂರ್ವಾಂಕರ ಸಂಸ್ಥೆ ಮುಂದೆ ತಮಟೆ ಚಳವಳಿ
ಬೆಂಗಳೂರು: ಬೃಹತ್ ಕಟ್ಟಡಗಳು ಬಿಬಿಎಂಪಿಗೆ ತೆರಿಗೆ ಪಾವತಿಸಲಾರದಕ್ಕೆ ಆ ಸಿಟ್ಟನ್ನು ಮಾಧ್ಯಮಗಳ ಮೇಲೆ ಹರಿ ಬಿಡುತ್ತಿವೆ.
ತೆರಿಗೆ ಬಾಕಿ ವಸೂಲಿಗೆ ಬಿಬಿಎಂಪಿ ನಡೆಸಿದ ತಮಟೆ ಚಳವಳಿಯಿಂದ ಸಿಟ್ಟಿಗೆದ್ದ ಪೂರ್ವಾಂಕರ ಪ್ರಾಜೆಕ್ಟ್ ಸಂಸ್ಥೆ ಸಿಬ್ಬಂದಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಲು ಮುಂದಾದರು.
ಇದರಿಂದ ಕೂಡ್ಲುಗೇಟ್ ಬಳಿಯ ಪೂರ್ವಾಂಕರ ಸಂಸ್ಥೆ ಪ್ರಾಜೆಕ್ಟ್ ಕಚೇರಿ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆಸ್ತಿ ತೆರಿಗೆ ವಸೂಲಿ ಕಾರ್ಯ ತೀವ್ರಗೊಳಿಸಿರುವ ಪಾಲಿಕೆ ಸಿಬ್ಬಂದಿ ಬೊಮ್ಮನಹಳ್ಳಿ ವಲಯದ ಅನೇಕ ಕಡೆ ತಮಟೆ ಚಳವಳಿ ಮೂಲಕ ತೆರಿಗೆ ಬಾಕಿ ವಸೂಲಿ ನಡೆಸುತ್ತಿದ್ದರು. ಈ ವಲಯದಲ್ಲಿ ಬೃಹತ್ ಹಾಗೂ ವಾಣಿಜ್ಯ ಕಟ್ಟಡಗಳು 5ವರ್ಷಗಳಿಂದ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದರಿಂದ ಪಾಲಿಕೆ ಆಯುಕ್ತ ಸಿದ್ದಯ್ಯ ಅವರ ಆದೇಶದಂತೆ ಸ್ಥಳೀಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಪಾಲಿಕೆ ಸಿಬ್ಬಂದಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪೂರ್ವಾಂಕರ ಸಂಸ್ಥೆ ಕಚೇರಿ ಬಳಿ ತಮಟೆ ಬಾರಿಸಲಾರಂಭಿಸಿದರು. ಈ ಸಂಸ್ಥೆ ನಿರ್ಮಿಸಿರುವ ವಸತಿ ಸಮುಚ್ಚಯಗಳು ಪಾಲಿಕೆಗೆ 2.5ಕೋಟಿ ಸುಧಾರಣಾ ವೆಚ್ಚ ಪಾವತಿಸಬೇಕಿದ್ದು, ಕೂಡಲೇ ಪಾವತಿಸುವಂತೆ ಒತ್ತಾಯಿಸಿ ತಮಟೆ ಸದ್ದು ಮಾಡಲಾಗಿತ್ತು. ಇದರಿಂದ ಸಂಸ್ಥೆ ಮಾನ ಹರಾಜಾಗುತ್ತದೆ ಎಂದು ಸಿಟ್ಟಿಗೆದ್ದ ಸಂಸ್ಥೆ ಭದ್ರತಾ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಅಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಎರಗಿದರು. ಸುದ್ದಿ ಚಾನಲ್ಗಳ ಪ್ರತಿನಿಧಿಗಳಿಂದ ಕ್ಯಾಮೆರಾ ಕಸಿದುಕೊಂಡು ಹಲ್ಲೆ ನಡೆಸಲು ಯತ್ನಿಸಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಪರ ನಿಂತ ಬಿಬಿಎಂಪಿ ಅಧಿಕಾರಿಗಳಿಗೆ ಬೆದರಿಸಿ ಪೂರ್ವಾಂಕರ ಸಂಸ್ಥೆ ಅಧಿಕಾರಿಗಳು, ಸಂಸ್ಥೆ ಮುಂದೆ ತಮಟೆ ಬಾರಿಸಿದರೆ ನ್ಯಾಯಾಲಯದಲ್ಲಿ ಕೇಸು ಹಾಕುವುದಾಗಿಯೂ ಎಚ್ಚರಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಮತ್ತು ಪೂರ್ವಾಂಕರ ಸಂಸ್ಥೆ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಇದರಿಂದ ತಮಟೆ ಚಳವಳಿ ಇನ್ನೂ ತೀವ್ರವಾಗಿ ಸುಮಾರು 2ಗಂಟೆಗಳ ವರೆಗೂ ಪೂರ್ವಾಂಕರ ಸಂಸ್ಥೆ ವಿರುದ್ಧ ಪ್ರತಿಭಟಿಸಲಾಯಿತು.
ನಂತರ ಪೂರ್ವಾಂಕರ ಸಂಸ್ಥೆ ಹಿರಿಯ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರಿಂದ ಪ್ರತಿಭಟನೆ ಅಂತ್ಯವಾಗಿ, ತಮಟೆ ಸದ್ದು ನಿಂತಿತ್ತು. ಬೇಗೂರು ಕಂದಾಯಾಧಿಕಾರಿ ಶಮನಾ, ಸಹ ಕಂದಾಯಾಧಿಕಾರಿ ನಾಗರಾಜ್, ತೆರಿಗೆ ಅಧಿಕಾರಿಗಳಾದ ಅಂಜನಪ್ಪ, ಪ್ರಕಾಶ್, ಜಯದೇವ ಹಾಗೂ ಕೃಷ್ಣೇಗೌಡ ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.