ರಾಜ್ಯದ ಒಳಚರಂಡಿ ಸ್ವಚ್ಛತಾ ಕಾರ್ಮಿಕರ ಸುರಕ್ಷೆಗೆ ಕೈಪಿಡಿ
ಬೆಂಗಳೂರು: ರಾಜ್ಯದ ಒಳಚರಂಡಿ ಸ್ವಚ್ಛತಾ ಕಾರ್ಮಿಕರ ಸುರಕ್ಷೆ ದೃಷ್ಟಿಯಿಂದ ಸುರಕ್ಷತಾ ಕೈಪಿಡಿ ಪ್ರಕಟಿಸಲಿರುವುದಾಗಿ ಸಚಿವ ಸುರೇಶ್ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ನೈರ್ಮಲ್ಯ ಕಾರ್ಯನಿರ್ವಹಣೆ ಸುರಕ್ಷತಾ ಕ್ರಮ ಕುರಿತು ರೂಪಿಸುತ್ತಿರುವ ಕೈಪಿಡಿಗೆ ಅಂತಿಮ ರೂಪ ನೀಡುವ ಸಲುವಾಗಿ ಮಂಗಳವಾರ ಜಲಮಂಡಳಿಯಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರಾಜ್ಯದ ಸ್ಥಳೀಯ ನಗರಾಡಳಿತಗಳಲ್ಲಿ ಆಧುನಿಕ ವ್ಯವಸ್ಥೆಗಳಿದ್ದರೂ ಪೌರಕಾರ್ಮಿಕರು ಮ್ಯಾನ್ಹೋಲ್ಗಳಿಗೆ ಇಳಿಯುತ್ತಿರುವ, ಮಲ ಹೊರುತ್ತಿರುವ ಪ್ರಕರಣಗಳು ಮರುಕಳಿಸುತ್ತಿವೆ. ಇವು ಹುಬ್ಬಳ್ಳಿ, ಮಂಗಳೂರು, ಮೈಸೂರು, ಸವಣೂರು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಹಾಗಾಗಿ ಸ್ವಚ್ಛತಾ ಕಾರ್ಮಿಕರ ಹಿತದೃಷ್ಟಿಯಿಂದ ದೇಶದಲ್ಲೇ ಮೊದಲ ಬಾರಿಗೆ ಇಂತಹ ಕೈಪಿಡಿ ಪ್ರಕಟಿಸಲು ನಿರ್ಧರಿಸಿದ್ದು, ಸದ್ಯದಲ್ಲೇ ಕೈಪಿಡಿ ಕರಡನ್ನು ಅಂತಿಮಗೊಳಿಸಲಾಗುವುದು ಎಂದರು.
ರಾಜ್ಯದಲ್ಲಿ ಕಳೆದ 5 ರಿಂದ 8 ವರ್ಷಗಳಲ್ಲಿ ಶೇ.35ರಷ್ಟು ನಗರೀಕರಣ ಹೆಚ್ಚಾಗಿದೆ. ನಗರವೊಂದರಲ್ಲೇ 3600 ಕಿ.ಮೀ. ದೂರದ ಕೊಳವೆ ಮಾರ್ಗ ಅಳವಡಿಸಲಾಗಿದ್ದು, 1.25 ಲಕ್ಷ ಮ್ಯಾನ್ಹೋಲ್ ನಿರ್ಮಾಣಗೊಂಡಿದ್ದು ಸ್ವಚ್ಛತಾ ಕಾರ್ಮಿಕರಿಗೆ ನಿರ್ವಹಣೆ ಕಷ್ಟವಾಗುತ್ತಿದೆ. ಜತೆಗೆ ಬಿಬಿಎಂಪಿಗೆ ನೂತನವಾಗಿ ಸೇರ್ಪಡೆಗೊಂಡಿರುವ ನಗರಸಭೆ, ಪುರಸಭೆಗಳಿಗೆ ಕೆಎಂಆರ್ಪಿ ಸಹಯೋಗದಲ್ಲಿ ಒಳಚರಂಡಿ ಮಾರ್ಗ ಅಳವಡಿಕೆ ನಡೆಯುತ್ತಿರುವುದರಿಂದ 2300 ಕಿ.ಮೀ. ಕೊಳವೆ ಮಾರ್ಗ ಹೆಚ್ಚಾಗಲಿದ್ದು, 2 ಲಕ್ಷಕ್ಕೂ ಅಧಿಕ ಮ್ಯಾನ್ಹೋಲ್ಗಳು ನಿರ್ಮಾಣಗೊಳ್ಳಲಿವೆ. ಆದ್ದರಿಂದ ಸಮಸ್ಯೆಯಾಗಲಿರುವ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚು ಜೆಟ್ಟಿಂಗ್, ಸಕ್ಕಿಂಗ್ ಯಂತ್ರ ಖರೀದಿಸುವ ಜತೆಗೆ ಸ್ವಚ್ಛತಾ ಸುರಕ್ಷಾ ಅರಿವು ಮೂಡಿಸುವ ಅಗತ್ಯವಿದೆ. ಅದಕ್ಕಾಗಿ ಕೈಪಿಡಿ ರಚಿಸಲಾಗುತ್ತಿದೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.