ಸಂಶೋಧನೆಗಳಿಗೆ ಅತಿ ನಿರ್ಬಂಧ
ಬೆಂಗಳೂರು: ದೇಶದ ಜೈವಿಕ ತಂತ್ರಜ್ಞಾನ ಸಂಶೋಧನೆಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ದಾಖಲೆ (ಸಿಟಿಆರ್ಐ) ನಿಯಂತ್ರಣಗಳು ಅತಿಯಾಗಿ ನಿರ್ಬಂಧ ಹೇರುತ್ತಿವೆ ಎಂದು ಬಯೋಕಾನ್ ಮುಖ್ಯಸ್ಥೆ ಡಾ. ಕಿರಣ್ ಮಜುಮ್ದಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೆ.4 ರಿಂದ 6 ರವರೆಗೆ ನಡೆಯಲಿರುವ 'ಬೆಂಗಳೂರು ಇಂಡಿಯಾ ಬಯೋ-2013' ಸಮಾವೇಶ ಸಂಬಂಧ ಪೂರ್ವಭಾವಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೈದ್ಯಕೀಯ, ಕೃಷಿ, ಕೃಷಿ ಭೂಮಿ ಅಭಿವೃದ್ಧಿಗೆ ಪೂರಕವಾಗುವ ಮಹತ್ವದ ಸಂಶೋಧನೆಗಳಿಗೆ ಸಿಟಿಐರ್ಐ ಅತಿಯಾದ ನಿರ್ಬಂಧಗಳನ್ನು ಹೇರುತ್ತಿದೆ. ಇದು ಪ್ರಾಮಾಣಿಕ ಸಂಶೋಧನಾ ಸಂಸ್ಥೆಗಳ ಟ್ರಯಲ್ಗಳಿಗೂ ಅಡ್ಡಿಯುಂಟು ಮಾಡುತ್ತಿದೆ ಎಂದು ಮಜುಮ್ದಾರ್ ಬೇಸರ ವ್ಯಕ್ತಪಡಿಸಿದರು.
ಜೀವ ಉಳಿಸುವ ಔಷಧಗಳು, ಕೃಷಿ ಉತ್ಪಾದನೆ ಹೆಚ್ಚಳ ಮಾಡುವ ಕೃಷಿ ಭೂಮಿಯ ಫಲವತ್ತತೆ ಸಂಬಂಧ ಇಂದು ಹೆಚ್ಚು ಸಂಶೋಧನೆಗಳ ಅಗತ್ಯತೆ ಇದೆ. ಅದಕ್ಕೆ ಪೂರಕವಾದ ವಾತಾವರಣವೂ ಭಾರತದಲ್ಲಿದೆ. ಆದರೆ ಅದಕ್ಕೆ ಬೆಂಬಲವಾಗಿ ನಿಲ್ಲಬಲ್ಲ ವಾತಾವರಣ ಮಾತ್ರ ಇಲ್ಲ. ಕೆಲವು ದುಷ್ಟರು ಮಾಡುವ ಸಂಶೋಧನಾ ಯಡವಟ್ಟುಗಳಿಂದ ಪ್ರಾಮಾಣಿಕ ಸಂಶೋಧನಾ ಸಂಸ್ಥೆಗಳಿಗೆ ಅಡ್ಡಿ ಸಲ್ಲ ಎಂದು ಅಭಿಪ್ರಾಯಪಟ್ಟರು.
ಸಂಶೋಧನೆಗಳ ಫಲ: ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಅತಿ ಹಿಂದುಳಿದಿದೆ. ನಮ್ಮ ದೇಶದಲ್ಲಿ ಹತ್ತು ಎಕರೆಯಲ್ಲಿ ಬೆಳೆಯುವ ಫಸಲನ್ನು ಅಲ್ಲಿ ಒಂದು ಎಕರೆಯಲ್ಲಿ ಬೆಳೆಯುತ್ತಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜೈವಿಕ ಸಂಶೋಧನೆಗಳ ಫಲವಾಗಿ ಅದು ಸಾಧ್ಯವಾಗಿದೆ.
ಜೈವಿಕ ಸಂಶೋಧನೆಯಲ್ಲಿ ಎಲ್ಲಾ ಪ್ರಕಾರಗಳಲ್ಲೂ ಒಟ್ಟಾರೆಯಾಗಿ ನೋಡಿದಾಗ ನಮ್ಮ ದೇಶ ಅತಿ ಹಿಂದುಳಿದಿದೆ ಎಂದು ಮಜುಮ್ದಾರ್ ಹೇಳಿದರು.
ಫೆಬ್ರವರಿಯಲ್ಲಿ ಆರಂಭವಾಗುವ ಸಮಾವೇಶದಲ್ಲಿ ಒಟ್ಟು 20ಕ್ಕೂ ಹೆಚ್ಚು ರಾಷ್ಟ್ರಗಳು ಹಾಗೂ ಜೈವಿಕ ತಂತ್ರಜ್ಞಾನ ವಲಯದಲ್ಲಿ ಗುರುತಿಸಿಕೊಂಡಿರುವ ದೇಶದ ಹಲವು ರಾಜ್ಯಗಳ ಕಂಪನಿಗಳು ಭಾಗವಹಿಸಲಿವೆ. 2025ರ ವೇಳೆಗೆ ಭಾರತದ ಬಯೋಟೆಕ್ ವಲಯ 100 ಶತಕೋಟಿ ಡಾಲರ್ ವಹಿವಾಟು ಸಾಧನೆ ಮಾಡಬಲ್ಲದೇ ಎಂಬ ವಿಷಯ ಪ್ರಮುಖವಾಗಿ ಸಮ್ಮೇಳನದಲ್ಲಿ ಚರ್ಚೆಗೆ ಬರಲಿದೆ.
ಸಮ್ಮೇಳನದಲ್ಲಿ ಬಯೋಸಿವುಲರ್ಸ್, ಪುನರುತ್ಪಾದಕ ಔಷಧಗಳು, ಅಣು ಜೈವಿಕ ತಂತ್ರಜ್ಞಾನ, ವೈದ್ಯಕೀಯ ಸಂಶೋಧನೆ, ಗುತ್ತಿಗೆ ಸಂಶೋಧನೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ. ಪಾಲುದಾರಿಕೆ ಮತ್ತು ಮಾರುಕಟ್ಟೆಯಲ್ಲಿನ ಸ್ಥಿತಿಗತಿ ಆಧರಿಸಿ ಒಪ್ಪಂದಗಳು ಮಾಡಿಕೊಳ್ಳಲಾಗುತ್ತದೆ. ಈ ವೇಳೆ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನದ ಪ್ರದಾನ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.