ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಸಂಶೋಧನೆಗೆ ಮೆದುಳು ಬೇಕು

Parashurama
Updated On : 30 Jan 2013, 12:42 pm

ಬೆಂಗಳೂರು: ದಾನಗಳಲ್ಲಿ ಶ್ರೇಷ್ಠದಾನ ಯಾವುದು ಎಂದರೆ ಅನ್ನದಾನ, ವಿದ್ಯಾದಾನ, ನೇತ್ರದಾನ, ರಕ್ತದಾನ ಎಂದು ಹಲವು ದಾನಗಳನ್ನು ಹೆಸರಿಸಬಹುದು. ಆದರೆ, ಇವೆಲ್ಲಕ್ಕೂ ಮೀರಿದ ದಾನವೊಂದಿದೆ. ಅದೇ ಮೆದುಳು ದಾನ..!
ಅಂಥದ್ದೊಂದು ದಾನಕ್ಕೂ ನಗರದಲ್ಲಿ ಅವಕಾಶ ಲಭ್ಯವಾಗಿದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ(ನಿಮ್ಹಾನ್ಸ್), ಸಿಂಡಿಕೇಟ್ ಬ್ಯಾಂಕ್ ಹಾಗೂ ಹೆಬ್ಬಾಳದ ಕೇಂದ್ರೀಯ ವಿದ್ಯಾಲಯದ ಸಹಯೋಗದಲ್ಲಿ ಸಂಜಯನಗರದ ಶ್ರೀದುರ್ಗಾಪರಮೇಶ್ವರಿ ಚಾರಿಟೆಬಲ್ ಟ್ರಸ್ಟ್ ಈ ಮೆದುಳು ದಾನ ಆಯೋಜಿಸಿದ್ದು, ಇದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಬುಧವಾರ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ತಜ್ಞ ಡಾ.ಎಸ್.ಕೆ. ಶಂಕರ್ ನೇತೃತ್ವದ ತಂಡ ಮೆದುಳು ದಾನ, ಅದರ ಅಗತ್ಯ, ಮೆದುಳು ಪಡೆಯುವ ಪ್ರಕ್ರಿಯೆ, ಅದರ ಉಪಯೋಗ, ಉದ್ದೇಶ ಇತ್ಯಾದಿಗಳ ಬಗ್ಗೆ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡಲಿದೆ. ವಿಶ್ವದಾದ್ಯಂತ ಮೆದುಳು ಸಂಬಂಧಿತ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ನೆರವಾಗುವಲ್ಲಿ ಸಾರ್ವಜನಿಕರಿಗೆ ಆಸಕ್ತಿಯಿದ್ದಲ್ಲಿ ಪ್ರಾತ್ಯಕ್ಷಿಕೆ ಬಳಿಕ ಮೆದುಳು ದಾನಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೃಷ್ಣಾ ಚಂದ್ರಶೇಖರ್ (080-23410134) ತಿಳಿಸಿದ್ದಾರೆ.
ಪತ್ರಿಕೆಯೊಂದರಲ್ಲಿ 6 ತಿಂಗಳ ಹಿಂದೆ ಓದಿದ ಲೇಖನದಿಂದ ಪ್ರಭಾವಿತಗೊಂಡ ತಾವು ಇಂತಹ ಕೆಲಸಕ್ಕೆ ಮುಂದಾಗಿದ್ದು, ತಮ್ಮನ್ನೂ ಸೇರಿದಂತೆ ಹತ್ತಕ್ಕೂ ಅಧಿಕ ಸ್ನೇಹಿತರು ಈಗಾಗಲೇ ಮೆದುಳುದಾನ ಮಾಡಿದ್ದೇವೆ. ಇದೇ ಜ.16ರಂದು ತಮ್ಮ ಟ್ರಸ್ಟ್ ವತಿಯಿಂದ ಪ್ರಥಮ ಮೆದುಳು ದಾನ ಕಾರ್ಯಕ್ರಮ ನಡೆಸಿದ್ದು, ಅಂದು 115 ಜನ ಹೆಸರು ನೋಂದಾಯಿಸಿಕೊಂಡಿದ್ದರು. ಮೆದುಳುದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ಬುಧವಾರ ಮತ್ತೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮೆದುಳಿಗೆ ಮೆದುಳೇ ಸಾಟಿ: ಸಾಮಾನ್ಯವಾಗಿ ಯಾವುದೇ ಕಾಯಿಲೆ, ಅದರಿಂದ ಯಾವುದೇ ಅಂಗಾಂಗದ ಮೇಲಾಗುವ ಪರಿಣಾಮ ಇತ್ಯಾದಿಗಳ ಬಗ್ಗೆ ಪ್ರಾಣಿಗಳ ದೇಹದಲ್ಲಿರುವ ಅಂಥದ್ದೇ ಅಂಗದ ಮೇಲೆ ಪ್ರಯೋಗ ನಡೆಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ.
ಆದರೆ, ಡಿಮೆನ್ಷಿಯಾ, ಪಾರ್ಕಿನ್‌ಸನ್, ಅಲ್ಝೀಮರ್ಸ್, ಸ್ಕಿಜೋಫ್ರೀನಿಯಾ ಮುಂತಾದ ಮೆದುಳು ಸಂಬಂಧಿತ ಕಾಯಿಲೆಗಳ ಬಗ್ಗೆ ಪ್ರಾಣಿಗಳ ಮೆದುಳಿನ ಮೇಲೆ ಪ್ರಯೋಗ ನಡೆಸಿ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ. ಅದಕ್ಕೆ ಮತ್ತೊಂದು ಮನುಷ್ಯನ ಮೆದುಳು ಅಗತ್ಯ. ಹಾಗಾಗಿ ಮೆದುಳುದಾನದ ಮೂಲಕ ಆಸಕ್ತರಿಂದ ಅವರ ಮರಣದ ಬಳಿಕ ಮೆದುಳು ಪಡೆದು ಸಂಗ್ರಹಿಸಿಡಲಾಗುತ್ತದೆ ಎಂದು ನಿಮ್ಹಾನ್ಸ್ ತಜ್ಞ ಡಾ.ಎಸ್.ಕೆ. ಶಂಕರ್ ತಿಳಿಸಿದ್ದಾರೆ.
ಯಾವುದೇ ವ್ಯಕ್ತಿ ಸತ್ತ 24 ಗಂಟೆಯವರೆಗೆ ಆತನ ಮೆದುಳು ದಾನಕ್ಕೆ ಯೋಗ್ಯವಾಗಿರುತ್ತದೆ. ಹಾಗೆ ಸಂಗ್ರಹಿಸಿದ ಮೆದುಳನ್ನು ತೆಳ್ಳಗಿನ ಹೋಳುಗಳನ್ನಾಗಿಸಿ ಬ್ರೈನ್‌ಬ್ಯಾಂಕ್‌ನಲ್ಲಿರುವ '-80' ಡಿಗ್ರಿಯಷ್ಟು ತಂಪಗಿನ ವಾತಾವರಣದಲ್ಲಿ ವರ್ಷಗಟ್ಟಲೆ ಸಂಗ್ರಹಿಸಿಡಲಾಗುತ್ತದೆ. ಯಾವುದೇ ವ್ಯಕ್ತಿ ಮೆದುಳು ಸಂಬಂಧಿತ ರೋಗಕ್ಕೀಡಾದಲ್ಲಿ ತೊಂದರೆಗೊಳಗಾದ ಆತನ ಮೆದುಳಿನ ಭಾಗಕ್ಕೆ ಸರಿಹೊಂದುವ ಮತ್ತೊಂದು ಮೆದುಳಿನ ಭಾಗವನ್ನು ಪಡೆದು ಸಂಶೋಧನೆ ನಡೆಸಿ ಪರಿಹಾರ ಕಂಡುಹಿಡಿಯಲಾಗುತ್ತದೆ ಎಂದು ನಿಮ್ಹಾನ್ಸ್ ತಜ್ಞೆ ಡಾ. ಅನಿತಾ ಮಹದೇವನ್ ವಿವರಿಸಿದ್ದಾರೆ.
ಏನಿದು ಮೆದುಳು ದಾನ?: ನೇತ್ರದಾನದ ರೀತಿಯಲ್ಲೇ ಇದೂ ಒಂದು ಅಂಗ ದಾನ. ಯಾವುದೇ ವ್ಯಕ್ತಿ ಜೀವಿತಾವಧಿಯಲ್ಲಿ ತಾನು ಮೆದುಳು ದಾನ ಮಾಡುವುದಾಗಿ ಹೆಸರು ನೋಂದಾಯಿಸಿಕೊಂಡಿದ್ದಲ್ಲಿ ಆ ವ್ಯಕ್ತಿ ಸತ್ತ ಬಳಿಕ ಸಂಬಂಧಿಕರ ಸಮ್ಮತಿ ಮೇರೆಗೆ ಮೆದುಳು ಪಡೆಯಲಾಗುತ್ತದೆ.
ಆದರೆ, ಕಣ್ಣಿನಂತೆ ಮೆದುಳನ್ನು ಇನ್ನೊಂದು ವ್ಯಕ್ತಿಗೆ ಕಸಿ ಮಾಡಲು ಸಾಧ್ಯವಿಲ್ಲ. ದಾನ ಪಡೆದ ಮೆದುಳು ಕೇವಲ ಅಧ್ಯಯನಕ್ಕೆ ಬಳಕೆ ಆಗುತ್ತದೆ. ಮೆದುಳಿಗೆ ಸಂಬಂಧಿತ ಕಾಯಿಲೆಗಳ ಅಧ್ಯಯನಕ್ಕೆ ದಾನ ಮಾಡಲ್ಪಟ್ಟ ಮೆದುಳಿನ ಭಾಗಗಳನ್ನು ಸಂಶೋಧನೆಗೊಳಪಡಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ.
ಯಾಕಿಷ್ಟು ಮಹತ್ವ?: ಅತಿ ಅಪರೂಪದ ಈ ದಾನಕ್ಕೆ ಭಾರಿ ಬೇಡಿಕೆ ಇದೆ. ಏಕೆಂದರೆ, ಪ್ರತಿಯೊಬ್ಬರ ಮೆದುಳಿನ ಸಾಮರ್ಥ್ಯವೂ ಭಿನ್ನ. ಅಂತೆಯೇ ಮೆದುಳಿಗೆ ಸಂಬಂಧಿತ ಕಾಯಿಲೆ ಕೂಡ. ಅಂಥ ಕಾಯಿಲೆಗಳ ಕುರಿತ ಅಧ್ಯಯನಕ್ಕೆ 'ಬುದ್ಧಿ' ಇದ್ದರೆ ಸಾಲದು, ಮತ್ತೊಂದು ಮೆದುಳೇ ಬೇಕು.
ಅಂದರೆ, ಮೆದುಳು ಸಂಬಂಧಿತ ಕಾಯಿಲೆಗಳ ಅಧ್ಯಯನಕ್ಕೆ ಮತ್ತೊಂದು ಮೆದುಳಿನ ಭಾಗ ಅತ್ಯಗತ್ಯ. ಅದಕ್ಕಾಗಿ ವಿಶ್ವದಾದ್ಯಂತ ಬೇಡಿಕೆ ಇದೆ. ಆದರೆ ಅಂತಹ ಮೆದುಳುಗಳ ಪೂರೈಕೆಗೆ ಅಮೆರಿಕದಲ್ಲಿ 46 ಹಾಗೂ ಯುಕೆನಲ್ಲಿ 16 ಬ್ರೈನ್‌ಬ್ಯಾಂಕ್‌ಗಳಿವೆ. ಆದರೆ ಅತಿಹೆಚ್ಚು ಜನಸಂಖ್ಯೆ ಇರುವ ಭಾರತ ಹಾಗೂ ಚೀನಾದಲ್ಲಿರುವುದು ತಲಾ ಒಂದು ಬ್ರೈನ್‌ಬ್ಯಾಂಕ್ ಎನ್ನುತ್ತಾರೆ ಕೃಷ್ಣಾ ಚಂದ್ರಶೇಖರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments