ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಸಿಕ್ಕ ಸಿಕ್ಕಲ್ಲಿ ಸಿಗ್ನಲ್ ಸಮಸ್ಯೆ

Parashurama
Updated On : 30 Jan 2013, 12:52 pm

ಬೆಂಗಳೂರು: ಬೆಂಗಳೂರು ಅಂದರೆ ಟ್ರಾಫಿಕ್. ಟ್ರಾಫಿಕ್ ಅಂದರೆ ಬೆಂಗಳೂರು ಎಂಬಂತಾಗಿದೆ. ದಂಡಿಗೆ, ದಾಳಿಗೆ ಹೆದರದ ಜನ ಟ್ರಾಫಿಕ್‌ಗೆ ಹೆದರುವಂತಾಗಿದೆ.
ನಗರದಲ್ಲಿ ರಸ್ತೆ ಅಗಲೀಕರಣ, ಮೆಟ್ರೋ ಕಾಮಗಾರಿ ಸಂಬಂಧಿಸಿದಂತೆ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದ್ದು ನಗರದ ಸಂಚಾರದಲ್ಲಿ ಟ್ರಾಫಿಕ್ ಜಾಮ್ ಒಂದು ಭಾಗವಾಗಿಬಿಟ್ಟಿದೆ.
ಆದರೆ, ಅದರಲ್ಲಿ ವಿವಿಐಪಿಗಳ ಆಗಮನ ನಿರ್ಗಮನಕ್ಕೆ ಬಳಕೆಯಾಗುತ್ತಿರುವ ಸಿಗ್ನಲ್‌ಗಳು ಅಲ್ಲದೇ, ದಿನಕ್ಕೆ ಕ್ಷುಲ್ಲಕ ಕಾರಣಗಳಿಗೆ ಆಫ್ ಆಗುತ್ತಿರುವುದರಿಂದ ಅವಧಿಗೂ ಮೀರಿ ವಾಹನ ಚಾಲಕರು ಟ್ರಾಫಿಕ್‌ನಲ್ಲೇ ಹೆಚ್ಚು ಸಮಯ ನಿಲ್ಲಬೇಕಾದ ಪರಿಸ್ಥಿತಿ ಒದಗಿದೆ. ದಿನಕ್ಕೆ ಕನಿಷ್ಠ 5- 6 ಬಾರಿ ಆಫ್ ಆಗುವ ಸಿಗ್ನಲ್‌ಗಳಿಂದ ಪ್ರಯಾಣಿಕರು ಸಂಚಾರ ವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ.
ಸಮಸ್ಯೆಗೆ ಕಾರಣವೇನು?: ಈಗಾಗಲೇ ನಗರದಲ್ಲಿ 383 ಸಿಗ್ನಲ್‌ಗಳನ್ನು ಅಳವಡಿಸಲಾಗಿದ್ದು, ಇನ್ನೂ ಹೆಚ್ಚಿನ ಸಿಗ್ನಲ್‌ಗಳನ್ನು ಅಳವಡಿಸುವ ಯೋಜನೆಯಿದೆ. ಆದರೆ, ಇರುವ ಸಿಗ್ನಲ್‌ಗಳೇ ಸರಿಯಾಗಿ ಕಾರ್ಯನಿರ್ವಹಿಸದೆ, ಪ್ರಯಾಣಿಕರ ಜತೆ- ಜತೆಗೆ ಪೊಲೀಸರನ್ನು ಕಂಗೆಡಿಸುತ್ತಿವೆ. ಸಿಗ್ನಲ್‌ಗಳನ್ನೇ ನಿಯಮಕ್ಕನುಗುಣವಾಗಿ ಸರಿಪಡಿಸಬೇಕೆಂಬುದು ಸಾರ್ವಜನಿಕರ ಕೋರಿಕೆ. ಸಮೀಪ ಇರುವ ಸಿಗ್ನಲ್‌ಗಳು ಒಂದಕ್ಕೊಂದು ಹೊಂದಾಣಿಕೆಯಿಲ್ಲದೆ, ಒಂದು ಸಿಗ್ನಲ್ ದಾಟಿ ಮತ್ತೆ 100- 200ಮೀ.ನಲ್ಲೇ ಇನ್ನೊಂದು ಸಿಗ್ನಲ್‌ನಲ್ಲಿ ಕಾಯಬೇಕು. ಸಾಕಷ್ಟು ಸಿಗ್ನಲ್‌ಗಳಲ್ಲಿ ಎಡಗಡೆಗೆ ಹೋಗುವ ವಾಹನಗಳಿಗೆ ಹೋಗಲು ಅವಕಾಶ ನೀಡಬಹುದು. ಆದರೆ ಸಾಕಷ್ಟು ಕಡೆ ಈ ಸೌಲಭ್ಯ ಇಲ್ಲದೇ ವಾಹನಗಳು ಅನಗತ್ಯವಾಗಿ ಕಾಯುವಂತಾಗಿದೆ.
ಎಲ್ಲೆಲ್ಲಿ ಸಮಸ್ಯೆ?: ನಗರದ ಪ್ರಮುಖ ಭಾಗವಾಗಿರುವ ವಿಧಾನಸೌಧ, ರಾಜಭವನ ಆಸು- ಪಾಸು, ರೇಸ್‌ಕೋರ್ಸ್ ರಸ್ತೆ, ಏರ್‌ಪೋರ್ಟ್ ರಸ್ತೆ, ಅರಮನೆ ರಸ್ತೆ, ಜೆ.ಸಿ.ರಸ್ತೆ, ಕಾರ್ಪೋರೇಷನ್, ಈ ವ್ಯಾಪ್ತಿಯಲ್ಲಿ ಹೆಚ್ಚಾಗಿ ಸಿಗ್ನಲ್‌ಗಳು ಆಫ್ ಇರುತ್ತವೆ.
ಹೀಗಾಗಿ ಕೆಲವೊಮ್ಮೆ ಸಂಚಾರಿ ಪೊಲೀಸರ ನಿಯೋಜನೆಯೂ ಇಲ್ಲದೇ (ಮಧ್ಯಾಹ್ನ 1ರಿಂದ 3ರವರೆಗೆ) ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿರುತ್ತದೆ.
ಅಲ್ಲದೇ, ಹೋಗುವ ಧಾವಂತಕ್ಕೆ ಬಿದ್ದ ಚಾಲಕರು, ಸ್ಪರ್ಧೆಗಿಳಿಯುತ್ತಾರೆ. ಇಂಥ ಸಂಚಾರದಟ್ಟಣೆಯ ಮಧ್ಯದಲ್ಲಿ ಸಿಲುಕಿಕೊಂಡ ಆ್ಯಂಬುಲೆನ್ಸ್‌ಗಳು ಸಹ ದಾರಿಗಾಗಿ ಹರಸಾಹಸ ಪಡಬೇಕಾಗಿದೆ.
ಹೈರಾಣಾಗುತ್ತಿರುವ ಸಂಚಾರಿ ಪೊಲೀಸರು: ಸಾರ್ವಜನಿಕರಷ್ಟೇ ಅಲ್ಲ ನಗರದ ಸಂಚಾರಿ ಪೊಲೀಸರು ಸಹ ವ್ಯವಸ್ಥೆಗೆ ಸುಸ್ತಾಗುತ್ತಿದ್ದಾರೆ. ನಗರದಲ್ಲಿ ಒಟ್ಟು 2900 ಸಂಚಾರಿ ಪೊಲೀಸರು ನಿಯೋಜನೆಗೊಂಡಿದ್ದು, 9ಮಂದಿ ಎಸಿಪಿಗಳು, 47 ಇನ್ಸ್‌ಪೆಕ್ಟರ್‌ಗಳು, 273 ಸಬ್ ಇನ್ಸ್‌ಪೆಕ್ಟರ್, 320 ಎಎಸ್‌ಐ, 2,251ಮುಖ್ಯ ಪೇದೆ ಮತ್ತು ಸಾಮಾನ್ಯ ಪೇದೆಗಳಿದ್ದಾರೆ.
ಆದರೂ ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾದ ಸ್ಥಿತಿ. ಸಿಗ್ನಲ್‌ಗಳು ಸರಿಯಾಗಿ ಕಾರ್ಯನಿರ್ವಹಣೆ ಇಲ್ಲದಿರುವುದರಿಂದ ಪ್ರಯಾಣಿಕರನ್ನು ಹಿಡಿದು ನಿಲ್ಲಿಸುವುದು ಸಂಚಾರಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕಳೆದ 10 ವರ್ಷಕ್ಕೆ ಹೋಲಿಸಿದರೆ ಅಪಘಾತಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕಡಿಮೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.
- ಭಾಗ್ಯಗೌಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments