ಟಿಪ್ಪು ಫಿರಂಗಿ; ಪುರಾತತ್ವ ಇಲಾಖೆ ನಿರ್ಲಕ್ಷ್ಯ
ಬೆಂಗಳೂರು: ಎರಡು ತಿಂಗಳಾದರೂ ಸ್ವಚ್ಛಗೊಳ್ಳದ ಟಿಪ್ಪು ಫಿರಂಗಿಗಳು..!
ಕೆ.ಆರ್. ಮಾರುಕಟ್ಟೆ ಬಳಿ ಮೆಟ್ರೋ ಕಾಮಗಾರಿಗಾಗಿ ನೆಲ ಅಗೆಯುವ ವೇಳೆ ಪತ್ತೆಯಾದ ಫಿರಂಗಿಗಳನ್ನು ವಿವಿಧ ಸ್ಥಳಗಳಲ್ಲಿ ಪ್ರದರ್ಶನಕ್ಕೆ ಇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಪುರಾತತ್ವ ಇಲಾಖೆ ಮಾತ್ರ ಫಿರಂಗಿಗಳನ್ನು ತನ್ನ ಬಳಿ ಇರಿಸಿಕೊಂಡು ತಣ್ಣಗೆ ಕುಳಿತಿದೆ. ಫಿರಂಗಿಗಳು ಬಳಕೆಯಾದ ವರ್ಷ ಪತ್ತೆ ಮಾಡಲು ಹಾಗೂ ಅವುಗಳನ್ನು ಸಂರಕ್ಷಿಸಲು ಸ್ವಚ್ಛಗೊಳಿಸಬೇಕು ಎಂದು ಹೇಳುತ್ತದೆ. ಆದರೆ ಅವುಗಳು ಯಾವಾಗ ಸ್ವಚ್ಛಗೊಳ್ಳುತ್ತವೆ ಎನ್ನುವ ಸ್ಪಷ್ಟತೆ ಮಾತ್ರ ಪುರಾತತ್ವ ಇಲಾಖೆಯ ಬಳಿ ಇಲ್ಲ.
ಈ ನಡುವೆ ಫಿರಂಗಿಗಳು ಹಾಗೂ ಗುಂಡನ್ನು ಅರಮನೆ ಆವರಣದಲ್ಲಿ ಪ್ರದರ್ಶನಕ್ಕೆ ಇರಿಸಲು ಅವಕಾಶ ನೀಡಬೇಕೆಂದು ಬೆಂಗಳೂರು ಟಿಪ್ಪು ಅರಮನೆ ಆಡಳಿತ ಮಂಡಳಿ ಕೇಳಿದೆ. ಆದರೆ ಪುರಾತತ್ವ ಇಲಾಖೆಯ ಜಾಗದಲ್ಲೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇದೆಲ್ಲದರ ಮಧ್ಯೆ ಟಿಪ್ಪು ಫಿರಂಗಿಗಳು ಸ್ವಾತಂತ್ರ್ಯ ಪೂರ್ವ ಭಾರತದ ರಾಜರ ಸೇನೆಯ ಶಕ್ತಿ ಹಾಗೂ ತಂತ್ರಜ್ಞಾನ ತೋರಿಸುವ ಕಾರಣ ಅದನ್ನು ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಪ್ರದರ್ಶನಕ್ಕೆ ಇರಿಸಬೇಕು ಎನ್ನುವ ಅಭಿಪ್ರಾಯವೂ ಕೇಳಿ ಬಂದಿದೆ.
ಸೈನಿಕ ಸ್ಮಾರಕದಲ್ಲೇ ಏಕೆ?: ಟಿಪ್ಪು ಸುಲ್ತಾನ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಹೋರಾಟಗಾರ. ರಾಜ್ಯದ ಹಲವೆಡೆ ಟಿಪ್ಪು ಕಾಲದ ಫಿರಂಗಿಗಳು ದೊರೆತಿವೆ. ಅವುಗಳ ಪೈಕಿ ಕೆಲವನ್ನು ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯಗಳಲ್ಲಿ ಇರಿಸಲಾಗಿದೆ. ಇನ್ನು ಕೆಲವು ಫಿರಂಗಿಗಳನ್ನು ಟಿಪ್ಪು ಸುಲ್ತಾನ ಅರಮನೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಕೆಲವು ಸೂಕ್ತ ವೇದಿಕೆ ಇಲ್ಲದ ಪುರತಾತ್ವ ಇಲಾಖೆಯಲ್ಲಿ ಯಾರಿಗೂ ಕಾಣದಂತಿವೆ. ಹೀಗಾಗಿ ಕೆ.ಆರ್. ಮಾರುಕಟ್ಟೆ ಸಮೀಪ ಮೆಟ್ರೋ ಕಾಮಗಾರಿ ವೇಳೆ ದೊರೆತಿರುವ ಫಿರಂಗಿಗಳನ್ನು ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಪ್ರರ್ದಶನಕ್ಕೆ ಇರಿಸಲು ಪ್ರಯತ್ನಿಸಿ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಏರ್ ಕಮೋಡರ್ ಚಂದ್ರಶೇಖರ್ ಮನವಿ ಮಾಡಿದ್ದಾರೆ. ಮನವಿ ಸಂಬಂಧ ಇದುವರೆಗೂ ಪುರಾತತ್ವ ಇಲಾಖೆಯಿಂದ ಉತ್ತರ ಬಂದಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಮ್ಮ ಆಶಯಕ್ಕೆ ಪೂರಕವಾಗಿ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಏರ್ ಕಮೋಡರ್ ಚಂದ್ರಶೇಖರ್ ತಿಳಿಸಿದ್ದಾರೆ.
ಟಿಪ್ಪು ಕಾಲದ ಫಿರಂಗಿ ಇರಿಸಲು ರಾಷ್ಟ್ರೀಯ ಸೈನಿಕ ಸ್ಮಾರಕ ಒಂದು ಉತ್ತಮ ವೇದಿಕೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಲಾಗುತ್ತದೆ. ಈಗಾಗಲೇ ಸ್ಮಾರಕದಲ್ಲಿ ಸೇನೆ ಸಂಬಂಧಿತ ಯುದ್ಧ ವಿಮಾನ, ರಾಕೆಟ್ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಕಬ್ಬಿಣದ ರಾಕೆಟ್ಗಳನ್ನು ಸೇನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಿ ಮೊದಲ ಬಾರಿಗೆ ಯಶಸ್ವಿಯಾಗಿ ಉಡಾವಣೆ ಮಾಡಿದ ಸಾಧನೆ ಟಿಪ್ಪು ಸುಲ್ತಾನ ಹೆಸರಲ್ಲಿದೆ ಎಂದು ಇತಿಹಾಸ ಹೇಳುತ್ತದೆ. ಹೀಗಾಗಿ ಹೋರಾಟಗಾರ ಟಿಪ್ಪು ಕಾಲದ ಫಿರಂಗಿಗನ್ನು ಸೈನಿಕ ಸ್ಮಾರಕದಲ್ಲಿರಿಸಿದರೆ ಆತನ ಸಾಧನೆ ಪರಿಚಯ ಸ್ಮಾರಕಕ್ಕೆ ಬರುವ ಪ್ರತಿಯೊಬ್ಬರಿಗೂ ಆಗುತ್ತದೆ ಎಂದು ನಿವೃತ್ತ ಸೇನಾಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-ಮಂಜುನಾಥ ನಾಗಲೀಕರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.