ಶಾಲಾ ಬಸ್; ನಿಯಮ ಕಲ್ಸೋರ್ಯಾರು?
ಬೆಂಗಳೂರು: ಕಾವಿ ತೊಟ್ಟವರೆಲ್ಲ ಸನ್ಯಾಸಿಗಳಲ್ಲ. ಹಾಗೇ ಹಳದಿ ಬಣ್ಣ ಬಳಿದುಕೊಂಡಿದ್ದೆಲ್ಲ ಶಾಲಾವಾಹನವಲ್ಲ.
ನಗರದ ಬಹುತೇಕ ಶಾಲಾ ವಾಹನಗಳು ಹಳದಿ ಬಣ್ಣವೊಂದನ್ನು ಬಿಟ್ಟು ಮತ್ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ಶಾಲಾ ವಾಹನಗಳ ನಿಜ ಬಣ್ಣ.
ಶಾಲಾವಾಹನ ಹೇಗಿರಬೇಕು ಎಂಬುದಕ್ಕೆ ಹಲವು ನಿಯಮಗಳಿವೆ. ಆದರೆ ಇವು ಬಣ್ಣ ಬಳಿದಿದ್ದನ್ನು ಬಿಟ್ಟು ಮತ್ಯಾವುದೇ ನಿಯಮವನ್ನೂ ಪಾಲಿಸುತ್ತಿಲ್ಲ. ಮಕ್ಕಳನ್ನು ಕುರಿ ತುಂಬಿದಂತೆ ತುಂಬಿಕೊಂಡು, ಹೇಗೆಂದರೆ ಹಾಗೆ ಗಾಡಿ ಓಡಿಸುವ ವಾಹನ ಚಾಲಕರ ಕುರಿತು ಶಾಲೆ, ಪಾಲಕರು ಹಾಗೂ ಸರ್ಕಾರ ಗಮನ ಹರಿಸಬೇಕಿದೆ.
ಶಾಲಾ ವಾಹನಗಳ ಕುರಿತು ಹಳೇ ನಿಯಮಗಳೊಂದಿಗೆ ಮತ್ತಷ್ಟು ವ್ಯವಸ್ಥಿತ ನಿಯಮಗಳು ಮೇ1 ರಿಂದ ಅನುಷ್ಠಾನಗೊಳ್ಳಲಿವೆ. ಇವುಗಳ ನೋದಣಿಗಳಲ್ಲಿ ಹಲವು ಬದಲಾವಣೆಗಳನ್ನು ತರಲಾಗುತ್ತಿದೆ. ಆದರೆ
ಇದರೊಂದಿಗೆ ಶಾಲಾ ಬಸ್ಸುಗಳ ಕುರಿತಾಗಿಯೂ ಗಮನ ಹರಿಸಬೇಕು. ಶಾಲೆಗಳೆ ನಿಗದಿಪಡಿಸಿದ ಹಳದಿ ಬಣ್ಣದ ಬಸ್ಸುಗಳ ದಿನವಿಡಿ ರಸ್ತೆಯಲ್ಲಿ ಓಡಾಡುತ್ತವೆ. ಇವು ಹೊರನೋಟಕ್ಕೆ ನಿಯಮಪಾಲಿಸುತ್ತಿದೆ ಅಷ್ಟೇ, ಅಸಲಿಗೆ ಇವು ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ನಿಯಮಗಳಿವೆ: ನಿರ್ಲಕ್ಷ್ಯದ ವಾಹನ ಚಾಲನೆ, ತೀವ್ರ ಅಪಘಾತಗಳಂತಹ ಯಾವುದೇ ಆರೋಪ ಇರದ, 5 ವರ್ಷ ವಾಹನ ಚಾಲನೆ ಅನುಭವ ಹೊಂದಿದವರು ಶಾಲಾ ಬಸ್ ಚಾಲಕರಾಗಿರಬೇಕು. ಚಾಲಕರ ಸಮವಸ್ತ್ರದಲ್ಲಿ ಚಾಲಕನ ಹೆಸರಿರಬೇಕು. ಪ್ರತಿ ಮಗುವಿನ ಪೂರ್ಣ ವಿವರಗಳು, ಪೋನ್ ನಂಬರ್, ರಕ್ತದ ಗುಂಪು, ವಾಹನ ಚಾಲಕನ ಬಳಿ ಇರಬೇಕು. ಇದು ಆಯಾ ಶಾಲೆಗಳಿಂದ ದೃಡೀಕೃತವಾಗಿರಬೇಕು.
ಬಸ್ನಲ್ಲಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸುವ್ಯವಸ್ಥಿತವಾಗಿರಬೇಕು. ಇದರ ಬಳಕೆ ಕುರಿತು ವಾಹನ ಚಾಲಕನಿಗೆ ಅರಿವಿರಬೇಕು. ಎಲ್ಲಾ ಬಸ್ಗಳ ಎದುರು ಶಾಲೆಯ ಹೆಸರು ಮಾತ್ರವಲ್ಲದೇ ಅದರ ಮಾರ್ಗ ಹಾಗೂ ವೇಳೆಯನ್ನು ಬರೆದಿರಬೇಕು. ರಹದಾರಿ ಹೊಂದಿರುವ ವ್ಯಕ್ತಿಯ ಹೆಸರು, ವಿಳಾಸ ಸ್ಪಷ್ಟವಾಗಿ ಕಾಣುವಂತೆ ವಾಹನದ ಹಿಂಭಾಗ ಮತ್ತು ಮುಂಭಾಗಗಳಲ್ಲಿ ಬರೆದಿರಬೇಕು.
ಪಾಲಿಸದ ನಿಯಮಗಳು: ಬಹುತೇಕ ಬಸ್ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲ. ಇದ್ದರೂ ಅವಧಿ ಮೀರಿದ್ದು. ಶಾಲಾ ಬಸ್ ಚಾಲಕನ ಕುರಿತು ಸರಿಯಾದ ಮಾಹಿತಿ ಶಾಲೆಗಳಿಗೆ ಇರುವುದಿಲ್ಲ. ಅಲ್ಲದೇ ವಾಹನ ಚಾಲಕನ ಕೌಶಲ್ಯ, ಸಾಮರ್ಥ್ಯ ಹಾಗೂ ಅವನ ಜವಾಬ್ದಾರಿಗಳನ್ನು ಪರೀಕ್ಷಿಸಿ ಕೆಲಸಕ್ಕೆ ತೆಗೆದುಕೊಳ್ಳುವ ವ್ಯವಧಾನವನ್ನು ಯಾವುದೇ ಶಾಲೆ ತೋರುತ್ತಿಲ್ಲ.
ಹಲವು ಶಾಲಾ ವಾಹನಗಳು ಎಲ್ಲೆಂದರಲ್ಲಿ ನಿಲ್ಲುತ್ತವೆ. ಯಾರೊಡನೆಯೋ ಜಗಳವಾಡುತ್ತಾ, ಬೇರೆ ವಾಹನವನ್ನು ಬೆನ್ನಟ್ಟುವ ಉತ್ಸಾಹದಲ್ಲಿ ವೇಗದ ಮಿತಿ ಮೀರಿರುವವರಿದ್ದಾರೆ. ಮಕ್ಕಳ ಜವಾಬ್ದಾರಿಯನ್ನೂ ತೆಗೆದುಕೊಳ್ಳದೇ ಮಕ್ಕಳನ್ನು ಅವರ ಮನೆಗಳ ಬಳಿ ಬಿಟ್ಟು ಯಾರು ಕರೆದೊಯ್ಯುತ್ತಿದ್ದಾರೆ ಎಂಬುದನ್ನೂ ವಿಚಾರಿಸದೇ ಶಾಲಾ ವಾಹನಗಳು ಹೋಗುತ್ತಿವೆ.
ಅನುಕರಣೆ ಕುರಿತು ಲಕ್ಷ್ಯವಿಲ್ಲ: ಸಾರಿಗೆ ಇಲಾಖೆಯ ಈ ನಿಯಮಗಳು ಹಲವು ವರ್ಷಗಳಿಂದ ಇವೆ. ಆದರೆ ಇದರ ಅನುಕರಣೆ ಮಾತ್ರ ಆಗುತ್ತಿಲ್ಲ. ನಿಯಮ ಮಾಡಿದರೆ ಜವಾಬ್ದಾರಿ ಮುಗಿಯಿತು ಎಂದು ಇಲಾಖೆ, ಹಳದಿ ಬಣ್ಣ ಬಳಿದು, ಶಾಲೆಯ ಹೆಸರು ಹಾಕಿಬಿಟ್ಟರೆ ನಮ್ಮದು ಉತ್ತಮ ಶಾಲಾ ವಾಹನ ಎಂದು ಖಾಸಗಿ ಶಾಲೆಗಳು ಬೀಗುತ್ತಿವೆ. ಹಳೇ ನಿಯಮಗಳು ಸರಿಯಾಗಿ ಪಾಲನೆ ಆಗುತ್ತಿವೆಯೆ ಎಂಬುದನ್ನು ಮೊದಲು ಪರಿಶೀಲಿಸಿ ನಂತರ ಮತ್ತಷ್ಟು ನಿಯಮಗಳನ್ನು ಮಾಡುವುದು ಒಳಿತು.
-ಅರ್ಪಿತಾ ಭಟ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.