ನಾಳೆಯಿಂದ 13 ಕೇಂದ್ರಗಳಲ್ಲಿ ಪಿಜಿಇಟಿ
ಬೆಂಗಳೂರು: ವೈದ್ಯ ಮತ್ತು ದಂತ ವೈದ್ಯ ವಿಭಾಗದ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ(ಪಿಜಿಇಟಿ) ನಗರದ ಒಂಬತ್ತು ಶಿಕ್ಷಣ ಸಂಸ್ಥೆಗಳ ಒಟ್ಟು ಹದಿಮೂರು ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 3 ರಂದು ಸಕಲ ಬಂದೋಬಸ್ತ್ ನಡುವೆ ನಡೆಯಲಿದೆ.
ಆದರೆ, ನೀಟ್ ಪರೀಕ್ಷೆ ಬಗ್ಗೆ ಉಂಟಾಗಿರುವ ಗೊಂದಲದ ಹಿನ್ನೆಲೆಯಲ್ಲಿ ಫಲಿತಾಂಶ ತಡೆಹಿಡಿಯುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶಿಸಿರುವ ಕಾರಣ ಪಿಜಿಇಟಿ ಫಲಿತಾಂಶ ಸದ್ಯಕ್ಕೆ ಪ್ರಕಟವಾಗುವುದಿಲ್ಲ.
ಪರೀಕ್ಷಾ ಸಿದ್ಧತೆ, ಬಂದೋಬಸ್ತ್ ಮುಂತಾದವುಗಳ ಕುರಿತ ವಿವರ ನೀಡುವ ಸಲುವಾಗಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಡಿ. ಪ್ರೇಮ್‌ಕುಮಾರ್ ಮತ್ತು ಡಾ. ಎನ್.ಎಸ್. ಅಶೋಕ್‌ಕುಮಾರ್ ಅವರು ವಿವಿಯಲ್ಲಿ ಶುಕ್ರವಾರ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
5607 ವಿದ್ಯಾರ್ಥಿ ಹಾಗೂ 5370 ವಿದ್ಯಾರ್ಥಿನಿಯರು ಸೇರಿದಂತೆ ಈ ಬಾರಿ ಒಟ್ಟು 10,977 ಮಂದಿ ಪಿಜಿಇಟಿ ಬರೆಯಲಿದ್ದಾರೆ. ಅವರಲ್ಲಿ 1,917 ಮಂದಿ ದಂತ ವೈದ್ಯ ವಿಭಾಗದಲ್ಲಿ ಹಾಗೂ 9,060 ಮಂದಿ ಮೆಡಿಕಲ್ ವಿಭಾಗದಲ್ಲಿ ಪರೀಕ್ಷೆ ಎದುರಿಸಲಿರುವರು. ಅವರೆಲ್ಲರಿಗೂ ನಗರದ 9 ಶಿಕ್ಷಣ ಸಂಸ್ಥೆಗಳ ಒಟ್ಟು 13 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು.
ದಂತ ವೈದ್ಯ ವಿಭಾಗದ ಎಲ್ಲಾ ಪರೀಕ್ಷಾರ್ಥಿಗಳಿಗೆ ಕ್ರೈಸ್ಟ್ ವಿವಿಯ 2 ಕೇಂದ್ರಗಳಲ್ಲಿ ಹಾಗೂ ಮೆಡಿಕಲ್ ವಿಭಾಗದ ಪರೀಕ್ಷಾರ್ಥಿಗಳಿಗೆ ಉಳಿದ 8 ಶಿಕ್ಷಣ ಸಂಸ್ಥೆಗಳ 11 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗುವುದು. ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಸುಗಮವಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಕಾರಣ ಪರೀಕ್ಷಾರ್ಥಿಗಳು ಪರೀಕ್ಷೆ ಆರಂಭಕ್ಕೂ ಒಂದು ಗಂಟೆ ಮೊದಲೇ ಅವರವರಿಗೆ ನಿಗದಿಪಡಿಸಲಾದ ಪರೀಕ್ಷಾ ಕೇಂದ್ರದ ಬ್ಲಾಕ್‌ಗಳಲ್ಲಿರುವಂತೆ ಅವರು ಕೋರಿದ್ದಾರೆ.
ವಿಶೇಷ ಬಂದೋಬಸ್ತ್: ಪಿಜಿಇಟಿ ವೇಳೆ ನಕಲು ಮಾಡುವ ಸಲುವಾಗಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಹಿಂದಿನ ಪರೀಕ್ಷೆ ವೇಳೆ ಇದ್ದ ಸುರಕ್ಷಾ ಕ್ರಮಗಳ ಜತೆಗೆ 3ಡಿ ಜಾಮರ್ ಹಾಗೂ ಲೋಹಶೋಧಕಗನ್ನು ಈ ಸಲ ಹೊಸದಾಗಿ ಬಳಸಲಾಗುವುದು.
ಪರೀಕ್ಷಾರ್ಥಿಗಳು ಅತ್ಯಾಧುನಿಕ ಸಂವಹನ ಉಪಕರಣಗಳನ್ನು ಹಾಗೂ ಸ್ಮಾರ್ಟ್‌ಫೋನ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಸ್ಥಳಕ್ಕೆ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಕಣ್ತಪ್ಪಿಸಿ ಕೊಂಡೊಯ್ಯಲು ಯತ್ನಿಸಿದಲ್ಲಿ ಅದನ್ನು ತಡೆಯುವಲ್ಲಿ ಈ ಉಪಕರಣಗಳು ನೆರವಾಗಲಿವೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅವುಗಳ ಮುಖೇನ ಪ್ರತಿ ಕೇಂದ್ರದಲ್ಲಿನ ಚಟುವಟಿಕೆಯನ್ನು ವೆಬ್ ಸ್ಟ್ರೀಮಿಂಗ್ ಮೂಲಕ ವಿವಿಯಲ್ಲಿ ಅಳವಡಿಸಿರುವ 13 ಮಾನಿಟರ್‌ಗಳ ಮೂಲಕ ವೀಕ್ಷಿಸಲಾಗುವುದು.
ಪ್ರವೇಶ ಪತ್ರದಲ್ಲಿ ಭಾವಚಿತ್ರ ಅಂಟಿಸುವ ಬದಲು ಮುದ್ರಿಸಿರುವುದರಿಂದ ಅದನ್ನು ದುರ್ಬಳಕೆ ಮಾಡಲು ಸಾಧ್ಯವಿಲ್ಲ. ಹಾಗೆಯೇ ಪ್ರವೇಶ ಪತ್ರ, ಪರೀಕ್ಷೆ ಹಾಗೂ ಕೌನ್ಸೆಲಿಂಗ್ ಸೇರಿದಂತೆ ಎಲ್ಲಾ ಹಂತದಲ್ಲೂ ಬಯೋವುಟ್ರಿಕ್ ವ್ಯವಸ್ಥೆ ಇರುವುದರಿಂದಲೂ ಅಕ್ರಮ ಸಾಧ್ಯವಿಲ್ಲ. ಅಲ್ಲದೆ, ಪರೀಕ್ಷೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳೀಯ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ನೆರವನ್ನೂ ಪಡೆಯಲಾಗುವುದು ಎಂದು ಅವರು ವಿವರಿಸಿದರು.
ವೀಡಿಯೋ ಚಿತ್ರೀಕರಣ: ಪರೀಕ್ಷೆಯ ಪ್ರಶ್ನೆಪತ್ರಿಕೆ ವಿವಿಗೆ ತರದೆ ಗುಪ್ತಸ್ಥಳದಿಂದ ನೇರ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಅಲ್ಲಲ್ಲಿ ಮೇಲ್ವಿಚಾರಕರು ಪ್ರಶ್ನೆಪತ್ರಿಕೆಯ ಲಕೋಟೆಯನ್ನು ತೆರೆಯುವುದನ್ನೂ ವೀಡಿಯೋ ಚಿತ್ರೀಕರಣ ಮಾಡಲಾಗುವುದು. 13 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 687 ಬ್ಲಾಕ್‌ಗಳಿದ್ದು ಪ್ರತಿ ಬ್ಲಾಕ್‌ನಲ್ಲಿ 16 ಪರೀಕ್ಷಾರ್ಥಿಗಳಿರುತ್ತಾರೆ. ಪ್ರತಿ ಬ್ಲಾಕ್‌ಗೆ ಒಬ್ಬರಂತೆ ಮೇಲ್ವಿಚಾರಕರನ್ನು ನೇಮಿಸಲಾಗುವುದರಿಂದ ನಕಲು ಮಾಡುವ ಪ್ರಸಂಗಗಳು ನಡೆಯಲಾರದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುಪ್ರೀಂ ಆದೇಶದ ಬಳಿಕ ಫಲಿತಾಂಶ: ನೀಟ್ ಪರೀಕ್ಷೆ ಬಗ್ಗೆ ಇರುವ ಗೊಂದಲದ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಪಿಜಿಇಟಿ ಫಲಿತಾಂಶ ಪ್ರಕಟಿಸದಂತೆ ಆದೇಶಿಸಿದೆ. ಆ ಹಿನ್ನೆಲೆಯಲ್ಲಿ ಒಎಂಆರ್ ಶೀಟ್‌ಗಳನ್ನು ಸ್ಕ್ಯಾನ್ ಮಾಡಿಸಿ ಅವುಗಳನ್ನು ಸೂಕ್ತ ಭದ್ರತೆಯಲ್ಲಿ ಇರಿಸಲಾಗುವುದು. ನ್ಯಾಯಾಲಯದ ಆದೇಶದ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.