ಆರ್‌ಟಿಇಯಡಿ ದಾಖಲಾದ ಮಾಹಿತಿ ಸಚಿವರಿಗೇ ಗೊತ್ತಿಲ್ಲ!
ಕ.ಪ್ರ. ವಾರ್ತೆ ಬೆಂಗಳೂರು ಮಾ. 3
ಕಡ್ಡಾಯ ಶಿಕ್ಷಣ ಕಾಯ್ದೆಯಲ್ಲಿ (ಆರ್‌ಟಿಇ) ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಎಂಬುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೇ ನಿಖರವಾಗಿ ಗೊತ್ತಿಲ್ಲ ಎಂದರೆ ನೀವು ನಂಬುತ್ತೀರಾ?
ನಂಬಿ. ಯಾಕೆಂದರೆ ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಮೂವರು ಕೇಳಿರುವ ಪ್ರಶ್ನೆಗೆ ಒದೊಂದು ಅಂಕಿ ಅಂಶ ನೀಡಲಾಗಿದೆ!
1.8.2012ರಲ್ಲಿ ವಿಧಾನಸಭೆಯಲ್ಲಿ ಶಾಸಕರಾದ ದಿನೇಶ್ ಗುಂಡೂರಾವ್ ಅವರು ಆರ್‌ಟಿಇ ಮೀಸಲು ಸೌಲಭ್ಯ ಪಡೆಯಲು ರಾಜ್ಯಾದ್ಯಂತ ಬಂದಿರುವ ಅರ್ಜಿಗಳು ಎಷ್ಟು? ಎಷ್ಟು ಅರ್ಜಿಗಳನ್ನು ಮಾನ್ಯಮಾಡಲಾಗಿದೆ. ಎಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂಬ ಪ್ರಶ್ನೆ ಕೇಳಿದ್ದರು.
ಈ ಪ್ರಶ್ನೆಗೆ ಉತ್ತರಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅನುದಾನ ರಹಿತ ಶಾಲೆಗಳಲ್ಲಿ ಈವರೆಗೂ 50,085 ಮಕ್ಕಳು ಆರ್‌ಟಿಇಯಲ್ಲಿ ದಾಖಲಾಗಿದ್ದಾರೆ ಎಂದು ಉತ್ತರಿಸಿದ್ದಾರೆ. ಒಟ್ಟು 60,390 ಅರ್ಜಿಯ ಪೈಕಿ ಮಾನ್ಯಗೊಂಡ ಅರ್ಜಿ 50,085 ತಿರಸ್ಕೃತಗೊಂಡಿರುವ ಅರ್ಜಿ 10,305.
ಇದೇ ಪ್ರಶ್ನೆಯನ್ನು ಅಂದೇ(1.8.2012) ಮಂಗಳೂರಿನ ಖಾದರ್ ಯು.ಟಿ. ಕೇಳಿದ್ದಾರೆ.
ಈ ಸಂದರ್ಭದಲ್ಲಿ ಕಾಗೇರಿ ಅವರು 47,963 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಉತ್ತರಿಸಿದ್ದಾರೆ. ವಿಧಾನಪರಿಷತ್ತಿನಲ್ಲಿ ನಸೀರ್ ಅಹಮದ್ ಎಂಬವರು ಕೇಳಿರುವ ಇದೇ ಪ್ರಶ್ನೆಗೆ 45,952 ವಿದ್ಯಾರ್ಥಿಗಳು ಆರ್‌ಟಿಇಯಲ್ಲಿ ದಾಖಲಾಗಿದ್ದಾರೆ ಎಂದು ಉತ್ತರಿಸಿದ್ದಾರೆ. ಹೀಗಾಗಿ ಒಂದೇ ದಿನ ಮೂವರು ಕೇಳಿದ ಒಂದೇ ಪ್ರಶ್ನೆಗೆ ಮೂರು ಉತ್ತರ ಹೇಗೆ ನೀಡಲು ಸಾಧ್ಯ?
ಯಾವುದು ಸರಿ: 2012- 13ನೇ ಸಾಲಿಗೆ ಆರ್‌ಟಿಇಯಲ್ಲಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡ ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಧ್ಯಮದವರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ 47,963 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಹೇಳಿದ್ದರು. ಆದರೆ, ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವುದು ನೋಡಿದಲ್ಲಿ ಯಾವ ಅಂಕಿ- ಅಂಶ ಸರಿ ಎಂಬುವುದೇ ತಿಳಿಯಲಾಗುತ್ತಿಲ್ಲ.
ಅಂಕಿ- ಅಂಶ ನಿರ್ವಾಹಣೆ ಇಲ್ಲ: ಶಿಕ್ಷಣ ಇಲಾಖೆಯಲ್ಲಿರುವ ಅಧಿಕಾರಿಗಳು ಆರ್‌ಟಿಇ ಅಂತ ಅಲ್ಲ. ಯಾವುದೇ ವಿಷಯದ ಬಗ್ಗೆಯೂ ಅಂಕಿ- ಅಂಶಗಳನ್ನು ಸರಿಯಾಗಿ ನಿರ್ವಾಹಣೆ ಮಾಡುವುದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಇಂತಹ ತಪ್ಪು ಮಾಹಿತಿ ನೀಡಿ ಅಪಹಾಸ್ಯಕ್ಕೀಡಾಗುವ ಬದಲು ತಡವಾದರೂ ಸೂಕ್ತವಾದ ಉತ್ತರ ನೀಡಬೇಕು ಎಂದು ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿವೃತ್ತ ಅಧಿಕಾರಿಯೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ವ್ಯಾಪ್ತಿ ಪ್ರದೇಶದ ಹೊರಗೆ ಸಚಿವರು
ಈ ಅಂಕಿ- ಅಂಶಗಳ ಬಗ್ಗೆ ಪ್ರತಿಕ್ರಿಯೆ ಕೇಳಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂಬ ಉತ್ತರ ಬಂತು. ಹೀಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಎಸ್.ಆರ್. ಉಮಾಶಂಕರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಹೇಳಿದ್ದು, 'ಅಂಕಿ- ಅಂಶಗಳು ಸರಿಯಾಗಿ ಇವೆ. ಒಮ್ಮೊಮ್ಮೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡುವ ಮಾಹಿತಿ ಮತ್ತು ಒಂದೇ ವಿದ್ಯಾರ್ಥಿಗಳು ಎರಡು ಶಾಲೆಗಳಲ್ಲಿ ದೊರಕುವ ಸೀಟಿನಿಂದಾಗಿ ಈ ರೀತಿ ವ್ಯತ್ಯಾಸವಾಗಬಹುದು' ಎಂದು ಉತ್ತರಿಸಿದ್ದಾರೆ.
- ದೇವರಾಜ್ ಎಲ್.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.