'ಮೂ'ತ್ತೈದೆಗೆ ಮುಖಭಂಗ
ಕ.ಪ್ರ. ವಾರ್ತೆ ಬೆಂಗಳೂರು ಮಾ. 3
ಅವರನ್ನು ಬಿಟ್ಟು ಇವರು, ಇವರನ್ನು ಬಿಟ್ಟು ಇನ್ನೊಬ್ಬರು, ಮತ್ತೊಬ್ಬರು ಎನ್ನುತ್ತಾ ಹೋದಾಕೆಗೆ ಕೊನೆಗೆ ಯಾರೂ ಇಲ್ಲವಾದ ಕಥೆ ಇದು..!
ಅಕೆ ಮದುವೆಯಾಗಿದ್ದು ಒಬ್ಬರು ಇಬ್ಬರನ್ನಲ್ಲ, ಮೂವರನ್ನ. ಕೈ ಹಿಡಿದವರ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಿ ಪರಿಹಾರ ಪಡೆಯುವ ಸಂಚು ರೂಪಿಸಿದ್ದ ಆಕೆ ಕೊನೆಗೆ ತಾನೇ ಹೆಣೆದ ಬಲೆಯಲ್ಲಿ ಸಿಕ್ಕಿ ಬಿದ್ದಳು.
ಆದರೂ ಆಕೆ ಬಹು ಚಾಲಾಕಿ. ಮೂವರನ್ನು ಮದುವೆಯಾಗಿದ್ದರೂ ವಿಷಯ ಗೊತ್ತಾಗದಂತೆ ಎಚ್ಚರ ವಹಿಸಿದ್ದಳಾದರೂ ಲೆಕ್ಕಾಚಾರ ತಪ್ಪಿತು.
ವರ್ಷಕ್ಕೊಬ್ಬರಂತೆ ಮೂರು ವರ್ಷದಲ್ಲಿ ಮೂವರನ್ನು ವಿವಾಹವಾಗಿ ಅವರ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದ ಈ ಮಹಿಳೆಯ ಜಾಣತನ ಬೆಳಕಿಗೆ ಬಂದದ್ದು, ಆಕೆಯ ಮೊದಲ ಹಾಗೂ ಮೂರನೇ ಪತಿಯ ವಿರುದ್ಧದ ಪ್ರಕರಣಗಳು ಒಂದೇ ದಿನ ವಿಚಾರಣೆಗೆ ಬಂದಾಗ!
ಎರಡೂ ಪ್ರಕರಣಗಳು ಕೌಟುಂಬಿಕ ನ್ಯಾಯಾಲಯದ ಮುಂದೆ ಒಂದೇ ದಿನ ವಿಚಾರಣೆಗೆ ಬಂದಾಗ, ಈ ಚಾಲಾಕಿ ಮಹಿಳೆಯ ಕೃತ್ಯ ಬಯಲಿಗೆ ಬಂದಿದೆ. ಈ ಪ್ರಕರಣಗಳ ಹಿನ್ನೆಲೆ ತಿಳಿದ ನ್ಯಾಯಾಧೀಶರು, ಆಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಆಕೆಯ ಮೊದಲ ಪತಿಯಿಂದ ವಿಚ್ಛೇದನ ಪಡೆಯದೆ ಎರಡನೇ ಹಾಗೂ ಮೂರನೇ ವಿವಾಹವಾಗಿರುವುದರಿಂದ ಅವುಗಳು ಮಾನ್ಯತೆ ಕಳೆದುಕೊಂಡಿವೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು, ಅವರಿಬ್ಬರನ್ನು ಖುಲಾಸೆಗೊಳಿಸಿದೆ. ಅಲ್ಲದೆ, ವಿವಾಹ, ಜಗಳ, ವಿಚ್ಛೇದನ, ವರದಕ್ಷಿಣೆ ಕಿರುಕುಳ ಪ್ರಕರಣಗಳ ದಾಖಲಿಸುವುದು ಈ ಮಹಿಳೆಯರ ಅಭ್ಯಾಸವೆಂದು ಅರಿತ ನ್ಯಾಯಾಧೀಶರು ಆಕೆಯ ಮೊದಲ ಪತಿಯ ಮೇಲಿನ ಪ್ರಕರಣಗಳನ್ನು ಕೂಡ ರದ್ದುಗೊಳಿಸಿದೆ.
ವಿಚ್ಛೇದನಕ್ಕೆ ಮುನ್ನವೇ ಮರುವಿವಾಹ: ತನ್ನ 25ನೇ ವಯಸ್ಸಿನಲ್ಲೇ ಮುಸ್ಲಿಂ ಯುವಕನೊಂದಿಗೆ ಪ್ರೇಮ ವಿವಾಹವಾಗಿ ನೋಂದಣಿ ಮಾಡಿಸಿಕೊಂಡಿದ್ದ ಬಸವೇಶ್ವರ ನಗರದ ಸೀಮಾ (ಹೆಸರು ಬದಲಿಸಲಾಗಿದೆ) ಕೇವಲ ಒಂದೇ ವರ್ಷದಲ್ಲಿ ಆತನಿಂದ ಬೇರಾದಳು. ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ, ಆತನ ವಿರುದ್ಧ 498(ಎ) ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಳು.
ಇದಾಗಿ ಮತ್ತೊಂದು ವರ್ಷದ ಅವಧಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯನ್ನು ವಿವಾಹವಾದಳು. ಆತನ ಮೇಲೆ ಕೂಡ ಒಂದೇ ವರ್ಷದಲ್ಲಿ 498(ಎ) ಪ್ರಕರಣ ದಾಖಲಿಸಿದಳು. ಇಷ್ಟಕ್ಕೆ ಆಕೆಯ ಆಟಾಟೋಪ ನಿಲ್ಲಲಿಲ್ಲ. ಮತ್ತೊಂದು ವರ್ಷದಲ್ಲಿ ಮತ್ತೊಬ್ಬ ಯುವಕನನ್ನು ವಿವಾಹವಾಗಿ ಆತನ ವಿರುದ್ಧವೂ ಇದೇ ಪ್ರಕರಣ ದಾಖಲಿಸಿದಳು.
ಮೂರು ವರ್ಷದಲ್ಲಿ ಈಕೆ ನಗರದ ಆರು ಪೊಲೀಸ್ ಠಾಣೆಗಳಲ್ಲಿ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾಳೆ. ಇದರ ಪರಿಣಾಮವಾಗಿ ಈಕೆಯ ಮೂವರು ಪತಿಯಂದಿರು(!) ಕೂಡ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಅನಿರೀಕ್ಷಿತವಾಗಿ ವಂಚನೆ ಬಯಲಿಗೆ: ತಾನು ಒಬ್ಬರ ಮೇಲೆ ದಾಖಲಿಸಿರುವ ಪ್ರಕರಣಗಳ ಕುರಿತು ಮತ್ತೊಬ್ಬರಿಗೆ ಅರಿವು ಮೂಡದಂತೆ ಎಚ್ಚರವಹಿಸಿದ್ದ ಸೀಮಾ, ಕೊನೆಗೊಂದು ದಿನ ತನ್ನದೇ ಜಾಲದಲ್ಲಿ ಸಿಕ್ಕಿಬಿದ್ದಿದ್ದಾಳೆ. ಮೊದಲ ಪತಿ ಹಾಗೂ ಮೂರನೇ ಪತಿಯ ಮೇಲೆ ದಾಖಲಿಸಿದ್ದ ಪ್ರಕರಣಗಳು ಒಂದೇ ದಿನ ವಿಚಾರಣೆಗೆ ಬಂದಾಗ ಈಕೆಯ ಬಣ್ಣ ಬಯಲಾಗಿದೆ. ವಿಚಿತ್ರವೆಂದರೆ, ಎರಡೂ ಪ್ರಕರಣಗಳು ಒಂದೇ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಬಂದಿತ್ತು. ಈಕೆಯ ವಂಚನೆ ಬಯಲಾದ ನಂತರ ನ್ಯಾಯಾಧೀಶರು ಆಕೆ ದಾಖಲಿಸಿದ್ದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿದ್ದಾರೆ.
ಕಾಯ್ದೆಯ ದುರುಪಯೋಗ ಆರೋಪದ ಮೇಲೆ ಆಕೆಯ ಮೇಲೆ ಪ್ರಕರಣ ದಾಖಲಿಸಲು ನ್ಯಾಯಾಧೀಶರು ತಯಾರಿದ್ದರಾದರೂ, ಮಾಡದ ತಪ್ಪಿಗೆ ಎದುರಾದ ಶಿಕ್ಷೆಯಿಂದ ಬೇಸತ್ತಿದ್ದ ಮೂವರು ಪತಿಯರು ಕೂಡ ಕಲಾಪಗಳನ್ನು ಕೈಬಿಡುವ ನಿರ್ಧಾರ ತೆಗೆದುಕೊಂಡರು. ಇದರಿಂದ ಸೀಮಾ ಭಾರಿ ಪ್ರಮಾಣದ ಶಿಕ್ಷೆಯಿಂದ ಬಚಾವಾಗಿದ್ದಾರೆ.
-ಸುಪ್ರೀತಾ ಹೆಬ್ಬಾರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.