ಕ.ಪ್ರ.ವಾರ್ತೆ ಬೆಂಗಳೂರು ಮಾ.19-
ನಿಮ್ಮ ಕೈ ಕಾಲು ಮುರಿದರೆ, ಇನ್ನಾವುದೋ ಗಾಯವಾದರೆ ಅದಕ್ಕೆ ಚಿಕಿತ್ಸೆ ಪಡೆಯಬಹುದು.
ಆದರೆ, ನಿಮ್ಮ 'ಶಿರ' ಬಹಳ ಮುಖ್ಯವಾದುದು. ನಿಮ್ಮ 'ಶಿರ'ವನ್ನು ನೀವು ಕಾಪಾಡಿಕೊಳ್ಳಿ, ಬೇರೆಯವರ 'ಶಿರ'ವನ್ನೂ ಕಾಪಾಡಿ.
ಅಪಘಾತ ಸಂಭವಿಸಿದಾಗ ತಲೆಗೆ ಪೆಟ್ಟುಬಿದ್ದು ಮೃತಪಡುವವರ ಸಂಖ್ಯೆಯೇ ಹೆಚ್ಚು. ಹೀಗೆ ಮೃತರಾಗುವವರಲ್ಲಿ 15ರಿಂದ 40 ವರ್ಷದವರೇ ಬಹುಸಂಖ್ಯೆಯಲ್ಲಿದ್ದಾರೆ.
ಮೆದುಳು 20 ಶತಕೋಟಿ ನರ ಜೀವಕೊಶಗಳನ್ನು ಹೊಂದಿದ್ದು, ಒಂದು ನರ ಕೆಲಸ ಮಾಡದಿದ್ದರೂ ದೇಹಕ್ಕೆ ಹಾನಿ. ಹಾಗಾಗಿ ಮೆದುಳನ್ನು ರಕ್ಷಿಸುವುದು ಅತ್ಯಗತ್ಯ ಎನ್ನುತ್ತಾರೆ ಖಾಸಗಿ ಆಸ್ಪತ್ರೆಯ ಡಾ.ಎಸ್.ಸತೀಶ್.
ವಿಶ್ವದಾದ್ಯಂತ ಸಂಭವಿಸುತ್ತಿರುವ ಅಪಘಾತದಿಂದ ತಲೆಗೆ ಪೆಟ್ಟು ಬಿದ್ದು ಮೃತಪಡುವವರ ಸಂಖ್ಯೆ ವರ್ಷಕ್ಕೆ 12 ಲಕ್ಷ ದಾಟಿದೆ. ಇದರಿಂದ 50 ಲಕ್ಷಕ್ಕೂ ಅಧಿಕ ಮಂದಿ ಶಾಶ್ವತವಾಗಿ ಅಂಗವೈಕಲ್ಯ ಹೊಂದಿದ್ದಾರೆ. 2012ರಲ್ಲಿ ಭಾರತದಲ್ಲಿ ಒಂದು 1.05ಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ.
ಅರಿವು ಕಾರ್ಯಕ್ರಮ: ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದಾಗ ಚಿಕಿತ್ಸೆ ಎಷ್ಟು ಅಗತ್ಯ, ನಿರ್ಲಕ್ಷ್ಯದಿಂದ ಆಗುವ ಅನಾಹುತಗಳು ಇತ್ಯಾದಿ ಬಗ್ಗೆ ಎಂ.ಜಿ.ರಸ್ತೆಯಲ್ಲಿರುವ ಯುಟಿಲಿಟಿ ಕಟ್ಟಡದಲ್ಲಿ ಮಂಗಳವಾರ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಅಲ್ಲದೆ ಅಪಘಾತ ಸಂಭವಿಸಿದಾಗ ತಲೆಗೆ ಪೆಟ್ಟು ಬಿದ್ದಿದ್ದಲ್ಲಿ ಪೊಲೀಸರು ಸಾರ್ವಜನಿಕರಿಗೆ ಯಾವ ರೀತಿ ಸಹಕರಿಸಬೇಕು ಎಂಬಿತ್ಯಾದಿ ಬಗ್ಗೆ ಮಾಹಿತಿ ನೀಡಲಾಯಿತು.
ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಅಮೂಲ್ಯ ಜೀವಗಳನ್ನು ಉಳಿಸಲು ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಈ ಅಭಿಯಾನ ಹಮ್ಮಿಕೊಂಡಿದ್ದು, ಇದು ಸಂತಸದ ವಿಷಯ. ಜನರು ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸುವುದು ಅತ್ಯಗತ್ಯ. ಇದರಿಂದ ಕೆಲವು ಅನಾಹುತಗಳನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಮುಖ್ಯ ನರರೋಗ ಶಸ್ತ್ರಚಿಕಿತ್ಸಾ ತ್ರಜ್ಞ ಎನ್.ಕೆ.ವೆಂಕಟರಮಣ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಅಲ್ಲದೆ ಹಿಂಸೆ, ಭಯೋತ್ಪಾದನೆ ಸೇರಿದಂತೆ ಆಕಸ್ಮಿಕ ಘಟನೆಗಳಿಂದ ತಲೆಗೆ ಪೆಟ್ಟಾಗುವ ಪ್ರಕರಣಗಳು ಹೆಚ್ಚುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ರಸ್ತೆ ಅಪಘಾತದಿಂದ ಸಾವಿನ ಸಂಖ್ಯೆ ಹೆಚ್ಚುತ್ತಿವೆ.
ಅಷ್ಟೇ ಅಲ್ಲ ಇದರಿಂದ ಗಂಭೀರವಾದ ಮೆದುಳಿನ ಗಾಯಗಳಾಗುತ್ತಿವೆ. ಇದನ್ನು ತಡೆಯಬೇಕೆಂದರೆ ನಿಮ್ಮ 'ಶಿರ'ಗಳನ್ನು ಜೋಪಾನವಾಗಿಟ್ಟುಕೊಳ್ಳಿ ಎನ್ನುತ್ತಾರೆ ವೈದ್ಯರು.
ಅಪಘಾತ ಸಂಭವಿಸಿದಾಗ ಏನು ಮಾಡಬೇಕು, ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಸಂಚಾರ ಪೊಲೀಸರಿಗೆ ಇದೇ ವೇಳೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಯಿತು.