ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಚಿಕ್ಕಬಳ್ಳಾಪುರ: ರು. 3ಕ್ಕೆ 1 ಬಿಂದಿಗೆ ನೀರು ಮಾರಾಟ

Parashurama
Updated On : 22 Mar 2013, 11:44 am

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.21-
ಪ್ರತಿ ಬಾರಿ ಬಿಸಿಲೇರುತ್ತಿದ್ದಂತೆ ವಿದ್ಯುತ್ ಹಾಗೂ ನೀರಿನ ಸಮಸ್ಯೆ ಉಲ್ಭಣಿಸುತ್ತದೆ. ಈ ಬಾರಿಯೂ ಬೆಂಗಳೂರು ಕಂದಾಯ ವಿಭಾಗದ 9 ಜಿಲ್ಲೆಗಳಲ್ಲಿ ಇದರ ಭೀಕರತೆ ಗೋಚರಿಸ ತೊಡಗಿದೆ. ಜನ, ಜಾನುವಾರು ಪರಿತಪಿಸುವ ದುಸ್ಥಿತಿ ನಿರ್ಮಾಣವಾಗಿದೆ.
ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಜತೆಗೆ ವಿದ್ಯುತ್ ಕೂಡ ಕಣ್ಣಾಮುಚ್ಚಾಲೆ ಆಡುತ್ತಿದೆ. ಚಿತ್ರದುರ್ಗ ಜಿಲ್ಲೆಯ 143 ಗ್ರಾಮಗಳಲ್ಲಿ ಪ್ಲೋರೈಡ್‌ಯುಕ್ತ ನೀರಿನ ಸೇವನೆಯಾಗುತ್ತಿದೆ. ಶಿವಮೊಗ್ಗದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ರಾಮನಗರದಲ್ಲಿ ಕೆರೆ ಕಟ್ಟೆಗಳು ಬತ್ತಿದ್ದರೆ, ಚಿಕ್ಕಬಳ್ಳಾಪುರದಲ್ಲಿ 3ಗೆ ಒಂದು ಬಿಂದಿಗೆ ನೀರು ಮಾರಾಟವಾಗುತ್ತಿದೆ. ಕೋಲಾರದಲ್ಲಿ 65ಕ್ಕೂ ಹೆಚ್ಚು ಕೊಳವೆ ಬಾವಿಗಳು ಬಂದ್ ಆಗಿವೆ.
ಬರದ ಛಾಯೆ ಆವರಿಸಿರುವ ದಾವಣಗೆರೆ ಜಿಲ್ಲೆಗೆ ಕುಡಿಯುವ ನೀರಿಗೆ ಸದ್ಯಕ್ಕೆ ತುಂಗಭದ್ರಾ ನದಿ, ಭದ್ರಾ ನಾಲೆಗಳೇ ಜೀವಾಳ. ಪ್ರಸಕ್ತ ಸಾಲಿನಲ್ಲಿ ಬರ ನಿರ್ವಹಣೆಗೆ 14.95 ಲಕ್ಷ ಬಂದಿದೆ. 1108.80 ಲಕ್ಷ ಅಂದಾಜು ವೆಚ್ಚದಲ್ಲಿ 399 ನೀರಿನ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಹರಪನಹಳ್ಳಿ, ಹರಿಹರ ಸೇರಿದಂತೆ ಇತರೆಡೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ನಗರ, ಪಟ್ಟಣ, ಗ್ರಾಮೀಣ ಭಾಗಕ್ಕೆ ವಿದ್ಯುತ್ ಪೂರೈಕೆ ಸಮಸ್ಯೆಯಾಗಿದೆ. ರೈತರಿಗೆ ಬೆಳೆಯನ್ನು ರಕ್ಷಿಸಿಕೊಳ್ಳಲು ಹರಸಾಹಸ ಮಾಡಬೇಕಾದ ಸ್ಥಿತಿ ಇದೆ. ಚಿತ್ರದುರ್ಗದಲ್ಲೂ ಬಿಸಿಲ ತಾಪ ಹೆಚ್ಚುತ್ತಿದೆ. 143 ಗ್ರಾಮಗಳಲ್ಲಿ ಪ್ಲೋರೈಡ್‌ಯುಕ್ತ ನೀರಿನ ಸೇವನೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಕೆರೆಗಳು ಬತ್ತಿದ್ದರಿಂದ ಟ್ಯಾಂಕರ್ ಮೂಲಕ ಹಾಗೂ ಕೊಳವೆ ಬಾವಿ ಕೊರೆಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯುತ್ ಸಮಸ್ಯೆ ಮಾಮೂಲಿಯಾಗಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶಗಲ್ಲಿ ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಶಿವಮೊಗ್ಗದಲ್ಲೂ ಕರೆಂಟ್ ಕಾಟ: ಮಲೆನಾಡು ಶಿವಮೊಗ್ಗದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಶಿಕಾರಿಪುರ, ಭದ್ರಾವತಿಯ ಕೆಲವು ಭಾಗಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದ್ದು ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಭದ್ರಾ ಅಣೆಕಟ್ಟು ನೀರಿನ ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ರೈತರು ಪರಿತಪಿಸುವಂತಾಗಿದೆ. ವಿದ್ಯುತ್ ಕಾಟದಿಂದ ಶಿಕಾರಿಪುರ, ಶಿರಾಳಕೊಪ್ಪ ಸೇರಿದಂತೆ ಹಲವೆಡೆ ಪ್ರತಿಭಟನೆ ಮಾಡಲಾಗುತ್ತಿದೆ. ಅನಿಯಮಿತ ಲೋಡ್‌ಶೆಡ್ಡಿಂಗ್‌ನಿಂದ ಜನತೆ ಕಂಗಾಲಾಗಿದ್ದಾರೆ.
ಬಯಲು ಸೀಮೆ ರಾಮನಗರ ಜಿಲ್ಲೆಯಲ್ಲಿ ವೃಷಭಾವತಿ ನದಿ ಕಲುಷಿತಗೊಂಡಿದ್ದು ನೀರಿಗೆ ಹಾಹಾಕಾರ ಶುರುವಾಗಿದೆ. ಕಣ್ವ, ಅರ್ಕಾವತಿ ನದಿಗಳು ಬತ್ತಿ ದಶಕಗಳೇ ಕಳೆದಿವೆ. ಚನ್ನಪಟ್ಟಣದ 18, ರಾಮನಗರದ 27, ಮಾಗಡಿಯ 33, ಕನಕಪುರದ 22 ಸೇರಿ 100 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 2000ಕ್ಕೂ ಹೆಚ್ಚು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕಾವೇರಿ, ಶಿಂಷಾದಲ್ಲೂ ನೀರಿನ ಅಭಾವದಿಂದ ಪರಿಸ್ಥಿತಿ ಬಿಗಡಾಯಿಸಿದೆ. ಕುಡಿಯುವ ನೀರಿನ ಬವಣೆ ನೀಗಿಸಲು 22 ಕೋಟಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಎರಡು ತಿಂಗಳಿನಿಂದಲೇ ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ಜಾರಿಯಲ್ಲಿದೆ. ಗ್ರಾಮೀಣ ಪ್ರದೇಶದಲ್ಲಂತೂ ಕರೆಂಟ್ ಕಾಟ ಜಾಸ್ತಿಯಾಗಿದೆ.
3ಗೆ ಬಿಂದಿಗೆ ನೀರು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರು ಕೊಂಡು ಕುಡಿಯುವ ದುಸ್ಥಿತಿ ನಿರ್ಮಾಣವಾಗಿದೆ. 3ಗೆ ಬಿಂದಿಗೆ, 35 ಕೊಟ್ಟು ಮಿನರಲ್ ವಾಟರ್ ಕ್ಯಾನ್ ಕೊಂಡು ಜನತೆ ದಾಹ ನೀಗಿಸಿಕೊಳ್ಳುತ್ತಿದ್ದಾರೆ. ಜಾನುವಾರಿಗಳಿಗೆ ನೀರಿಲ್ಲದೇ ಮಾರಾಟ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಶೇ.75ರಷ್ಟು ಕೊಳವೆ ಬಾವಿಗಳು ಬತ್ತಿವೆ. ಜಿಪಂಗೆ ಕುಡಿವ ನೀರು ಪೂರೈಕೆಗೆ 30 ಕೋಟಿ ಬಿಡುಗಡೆ ಮಾಡಲಾಗಿದೆ. ಡಿಸಿ ಬಳಿ 12 ಕೋಟಿ ಇದೆ. ವಿದ್ಯುತ್ ಸಮಸ್ಯೆ ಜಾಸ್ತಿಯಾಗಿದ್ದು ಅನಿಯಮಿತ ವಿದ್ಯುತ್ ಕಟ್ ಜಾರಿಯಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ ಆಡುತ್ತಿದೆ.
ಬರಪೀಡಿತ ಕೋಲಾರ ಜಿಲ್ಲೆಯ 180ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿದೆ. 65ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರೈತರು ಕೊರೆಯಿಸಿದ ಕೊಳವೆ ಬಾವಿಗಳು ಬತ್ತಿವೆ. ಮಾರ್ಚ್‌ನಲ್ಲಿ ಮಳೆಯಾಗದಿದ್ದರೆ 180ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಲಕ್ಷಾಮ ಎದುರಾಗುವ ಸಾಧ್ಯತೆ ಇದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 86 ಕೋಟಿ ಲಭ್ಯವಿದ್ದು ಹಲವು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಗೆ 160 ಮೆವ್ಯಾ ವಿದ್ಯುತ್ ಅವಶ್ಯಕತೆ ಇದೆ. ಆದರೆ, 60ರಿಂದ 80 ಮೆವ್ಯಾ ವಿದ್ಯುತ್ ಪೂರೈಕೆಯಾಗುತ್ತಿರುವುದರಿಂದ ಕರೆಂಟ್ ಕಾಟ ಹೆಚ್ಚಾಗಿದೆ.

ಬೆಂಗಳೂರು ನಗರ ಜಿಲ್ಲೆ
ಬೆಂಗಳೂರು ನಗರ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ವಿಪರೀತಕ್ಕೆ ಹೋಗಿದ್ದು, 4 ತಾಲೂಕುಗಳ ಒಟ್ಟು 31 ಗ್ರಾಮಪಂಚಾಯಿತಿಗಳು ಬರದಿಂದ ತತ್ತರಿಸಿವೆ. ಜಿಲ್ಲಾ ವ್ಯಾಪ್ತಿಯ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಪೂರ್ವ ತಾಲೂಕಿನಲ್ಲಿ ಕುಡಿಯುವ ನೀರಿಗೆ ಜನ ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ಇಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದ್ದರೂ ಜನ, ಜಾನುವಾರುಗಳ ದಾಹ ತೀರುತ್ತಿಲ್ಲ. ಆದರೆ, ಈ ಸಮಸ್ಯೆ ಆನೇಕಲ್ಲು ತಾಲೂಕಿನಲ್ಲಿ ಕೊಂಚ ಪರವಾಗಿಲ್ಲ. ಇನ್ನು ಜಾನುವಾರುಗಳ ಮೇವಿಗೂ ತತ್ತಾರವಿದೆ. ಆದರೆ, ಜಿಲ್ಲಾಡಳಿತ ಮೇವಿಗೆ ಕೊರತೆಯಿಲ್ಲ ಎನ್ನುತ್ತಿದೆ. ಈ ಮಧ್ಯೆ ಹೊಸದಾಗಿ ಕೊರೆದಿರುವ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಸಿಗದೆ ಅನೇಕ ಕಡೆ ಬೋರ್‌ವೆಲ್ ಕೊರೆದರೂ ಪ್ರಯೋಜನವಿಲ್ಲ.

ಬೆಂಗಳೂರು ಗ್ರಾಮಾಂತರ ಜಿಲ್ಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೀರು, ಮೇವು ಸೇರಿದಂತೆ ವಿವಿಧ ಪರಿಹಾರ ಕಾಮಗಾರಿಗಳಿಗೆ ಈತನಕ 11ಕೋಟಿಗೂ ಹೆಚ್ಚಿನ ಅನುದಾನ ವೆಚ್ಚ ಮಾಡಲಾಗಿದೆ. ಆದರೂ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಜಿಲ್ಲೆಯ ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳು ಬರಪೀಡಿತ ಪ್ರದೇಶವೆಂದು ಕಳೆದ ವರ್ಷವೇ ಘೋಷಣೆಯಾಗಿವೆ. ಇಲ್ಲಿ ಯಾವುದೇ ನೀರಿನ ಮೂಲಗಳಿಲ್ಲದ ಕಾರಣ ಸಮಸ್ಯೆ ಹೇಳತೀರದು. ಟ್ಯಾಂಕರ್ ಮೂಲಕ ನೀರು ಪೂರೈಸುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲ. ಹೀಗಾಗಿ 192 ಗ್ರಾಮ ಪಂಚಾಯಿತಿಗಳು ಬರದಲ್ಲಿ ನರಳುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments