ನಿರ್ಗತಿಕ ನಾಯಕನ ಬಾಳಂಚಲ್ಲಿ ನೆಲೆಯ ಕಿರಣ
ಕ.ಪ್ರ.ವಾರ್ತೆ ಬೆಂಗಳೂರು ಮಾ.21-
ಹಿರಿಯ ಕಲಾವಿದ ರಾಜೇಂದ್ರ ಕೃಷ್ಣ ಅವರಿಗೆ ನೆರವು ನೀಡಲು ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. ಆ ಮೂಲಕ ನಿರ್ಗತಿಕ ಬದುಕು ನಡೆಸುತ್ತಿರುವ ಹಿರಿಯ ಕಲಾವಿದನ ವ್ಯಥೆಗೆ ಸಾಂತ್ವನ ಸಿಕ್ಕಿದೆ.
ಒಂದು ಕಾಲದಲ್ಲಿ ನಾಯಕನಾಗಿ, ಪೋಷಕ ಕಲಾವಿದನಾಗಿ ಮಿಂಚಿದ, ಡಾ.ರಾಜ್ಕುಮಾರ್ ಅವರೊಂದಿಗೆ 14 ಚಿತ್ರಗಳಲ್ಲಿ ಅಭಿನಯಿಸಿದ 90ರ ವೃದ್ಧ ಕಲಾವಿದ ರಾಜೇಂದ್ರ ಕೃಷ್ಣ ಪ್ರಸ್ತುತ ಬೆಂಗಳೂರಿನ ಶೇಷಾದ್ರಿಪುರಂನ ಸಾರ್ವಜನಿಕ ಶೌಚಾಲಯದ ಬಳಿ ಬದುಕಿನ ದಿನಗಳನ್ನು ತಳ್ಳುತ್ತಿರುವ ಬಗ್ಗೆ 'ಕನ್ನಡಪ್ರಭ' ಗುರುವಾರ ಸವಿಸ್ತಾರವಾಗಿ ವರದಿ ಪ್ರಕಟಿಸಿತ್ತು. ಇದೇ ವರದಿ 'ಸುವರ್ಣ ನ್ಯೂಸ್ 24್ಢ7'ನಲ್ಲೂ ಪ್ರಸಾರವಾಯಿತು. ನೆಲೆ ಇಲ್ಲದೆ ಫುಟ್ಪಾತ್ನಲ್ಲಿ ನಿಂತಿರುವ ರಾಜೇಂದ್ರ ಕೃಷ್ಣರ ಜೀವನದಲ್ಲಿ ಈಗ ನೆಲೆ ಸಿಗುವ ಕನಸು ಚಿಗುರಿದೆ.
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ಬಿಬಿಎಂಪಿ ಸದಸ್ಯ ಮುನಿರತ್ನ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ಕಲಾವಿದ ಅಶೋಕ್, ಹಿರಿಯ ನಟ ಡಿಂಗ್ರಿ ನಾಗರಾಜ್, ನಟರಾದ ಅನಿರುದ್ಧ್, ಅಭಿಜಿತ್, ಡಾ.ರಾಜ್ಕುಮಾರ್ ಭಾವಚಿತ್ರಗಳ ಸಂಗ್ರಹಕಾರ ಬಾಬು ಮತ್ತಿತರರು ನೆರವಿನ ಹಸ್ತ ಚಾಚಲು ಮುಂದೆ ಬಂದಿದ್ದಾರೆ. 'ಒಬ್ಬ ಹಿರಿಯ ಕಲಾವಿದ ಮನೆ ಇಲ್ಲದೆ, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವುದು ಶೋಚನೀಯ ಸ್ಥಿತಿ. ಇಂಥ ಕಲಾವಿದರಿಗೆ ನೆರವು ನೀಡುವ ಕರ್ತವ್ಯ ನಮ್ಮದು. ಈ ವಯಸ್ಸಿನಲ್ಲಿ ಅವರಿಗೊಂದು ನಿವೇಶನದ ಅಗತ್ಯವಿದೆ. ಹೀಗಾಗಿ ಅವರಿಗೆ ಹಣ ಸಹಾಯ ಮಾಡುವವರು ಮಾಡಲಿ. ನೆರವಿನ ರೂಪದಲ್ಲಿ ಬಂದ ಹಣದ ಜತೆಗೆ ನಾನು ಅಗತ್ಯವಿರುವ ಉಳಿದ ಹಣ ಕೂಡಿಸಿ ವಾಸಕ್ಕೆ ಯೋಗ್ಯವಾದ ನಿವೇಶನ ಒದಗಿಸುತ್ತೇನೆ. ಮುಂದಿನ ತಿಂಗಳು 10ರೊಳಗೆ ರಾಜೇಂದ್ರ ಕೃಷ್ಣರಿಗೆ ಶಾಶ್ವತ ನೆಲೆ ಕಲ್ಪಿಸಲಾಗುವುದು' ಎಂದು ನಿರ್ಮಾಪಕ ಮುನಿರತ್ನ ತಿಳಿಸಿದ್ದಾರೆ.
ಈಗಾಗಲೇ ನಟ ಶಿವರಾಜ್ಕುಮಾರ್ 50 ಸಾವಿರ, 'ಅಮರೇಶ್ವರ ಮಹಾತ್ಮೆ' ಚಿತ್ರತಂಡ ಹಾಗೂ ಮಧುಸೂದನ್ ಅವರಿಂದ ತಲಾ 5 ಸಾವಿರ ನೀಡಿದ್ದಾರೆ. ನಟ ಅನಿರುದ್ಧ್, ಡಿಂಗ್ರಿ ನಾಗರಾಜ್ ಮತ್ತಿತರರು ರಾಜೇಂದ್ರ ಕೃಷ್ಣ ವಾಸ ಮಾಡಲು ನೆಲೆ ಕಲ್ಪಿಸಲು ಮುಂದೆ ಬಂದಿದ್ದು, ನಟಿ ತಾರಾ ಹಾಗೂ ಫೋಟೋ ಬಾಬು ತಲಾ 5 ಸಾವಿರ ನೀಡುವುದಾಗಿ ಭರವಸೆ ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.