ನಕಲಿ ವ್ಯಾಪಾರಿಗಳ ಬಂಧನ; 19 ಲಕ್ಷ ಮೌಲ್ಯದ ವಸ್ತು ವಶ
ಬೆಂಗಳೂರು: ಪರವಾನಗಿ ಇಲ್ಲದೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಅಂಗಡಿ ತೆರೆದು ಸರ್ಕಾರ ಹಾಗೂ ಸಾರ್ವಜನಿಕರಿಗೆ ಲಕ್ಷಾಂತರ ರುಪಾಯಿ ವಂಚಿಸಿದ್ದ ಎಂಟು ಮಂದಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ತಿಪಟೂರಿನ ಪಿ.ಲೋಕೇಶ್ (33), ಕಡೂರು ಗಂಗಬಸವನಹಳ್ಳಿ ಗ್ರಾಮದ ಜಿ.ಡಿ.ಷಡಕ್ಷರಿ(32), ಕಮ್ಮಗೊಂಡನಹಳ್ಳಿಯ ಎಂ.ಎಸ್.ವಡಿವೇಲು(27), ರಾಘವೇಂದ್ರ ಅಲಿಯಾಸ್ ರಾಜು ಹಾಗೂ ಚನ್ನಗಿರಿ ತಾಲೂಕಿನ ನಾಗರಾಜು(33) ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ ಕಾರು, 16 ಲಕ್ಷ ನಗದು ಸೇರಿ ಒಟ್ಟು 19 ಲಕ್ಷ ಮೌಲ್ಯದ ವಸ್ತುಗಳು ಹಾಗೂ ವಿವಿಧ ಬ್ಯಾಂಕ್ಗಳ ನಕಲಿ ಸೀಲು, ಗುರುತಿನ ಚೀಟಿ, ಚಾಲನಾ ಪರವಾನಗಿ, ಚೆಕ್ ಪುಸ್ತಕ ಹಾಗೂ ಪ್ರಮುಖ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಏನಿದು ವಂಚನೆ: ಆರೋಪಿಗಳು ವಿದ್ಯಾರಣ್ಯಪುರ, ಕಲ್ಯಾಣನಗರ, ಯಲಹಂಕ ಉಪನಗರ, ಮಹಾಲಕ್ಷ್ಮಿ ಲೇಔಟ್, ಕಾಮಾಕ್ಷಿಪಾಳ್ಯ ಹಾಗೂ ಇತರೆ ಸ್ಥಳಗಳಲ್ಲಿ ಆರ್.ಎಂ.ಟ್ರೇಡರ್ಸ್, ಬಾಲಾಜಿ ಟ್ರೇಡರ್ಸ್, ವಿಜಯ್ ಎಂಟರ್ಪ್ರೈಸಸ್, ವಿನಾಯಕ ಸ್ಟೀಲ್ಸ್, ಸಾಯಿ ಟ್ರೇಡರ್ಸ್, ಎಂ.ಕೆ.ಟ್ರೇಡರ್ಸ್ ಸೇರಿದಂತೆ ವಿವಿಧ ಹೆಸರಿನಲ್ಲಿ ಕಬ್ಬಿಣ, ಸ್ಟೀಲ್, ಟೈಲ್ಸ್, ಸ್ಯಾನಿಟರಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ತೆರೆದಿದ್ದರು.
ಸಂಬಂಧಪಟ್ಟ ಇಲಾಖೆಯಿಂದ ಅಂಗಡಿ ತೆರೆಯಲು ಪರವಾನಗಿ ನೀಡಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಅದೇ ನಕಲಿ ದಾಖಲೆಗಳನ್ನು ನೀಡಿ ನಗರದ ವಿವಿಧ ಬ್ಯಾಂಕ್ಗಳಲ್ಲಿ ಖಾತೆ ತೆರೆದಿದ್ದರು. ಈ ಮೂಲಕ ಆದಾಯ ತೆರಿಗೆ, ರೆವಿನ್ಯೂ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಲಕ್ಷಾಂತರ ರುಪಾಯಿ ವಂಚಿಸಿದ್ದರು.
ಈ ನಡುವೆ ನಕಲಿ ದಾಖಲೆ ತೋರಿಸಿ ಸಾರ್ವಜನಿಕರಿಂದ ಸಾಲ ಪಡೆದಿದ್ದರು. ಕೆಲ ದಿನಗಳ ನಂತರ ತಮ್ಮ ಅಂಗಡಿ ಮುಚ್ಚಿ, ಬ್ಯಾಂಕ್ಗಳಲ್ಲಿ ಖಾತೆಗಳನ್ನು ಸ್ಥಗಿತಗೊಳಿಸಿ ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.