ಭ್ರಷ್ಟಾಚಾರದಲ್ಲಿ ಕಂದಾಯ ನಂ.1
ಕ.ಪ್ರ.ವಾರ್ತೆ ಬೆಂಗಳೂರು ಮಾ.22-
ಭ್ರಷ್ಟಾಚಾರದ ವಿಚಾರದಲ್ಲಿ ರಾಜ್ಯ ಸರ್ಕಾರದ ಯಾವ ಇಲಾಖೆ ಮುಂದಿದೆ ? ಲೋಕಾಯುಕ್ತ ಸಂಸ್ಥೆ ಪ್ರಕಾರ ಕಂದಾಯ ಇಲಾಖೆಯೇ ಪ್ರಥಮ.
ಅತಿ ಹೆಚ್ಚು ಭ್ರಷ್ಟಾಚಾರವನ್ನು ಹೊಂದಿರುವ ಕಂದಾಯ ಇಲಾಖೆಯ ಅಧಿಕಾರಿಗಳ ಚಳಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಿಡಿಸುತ್ತಲೇ ಇದ್ದಾರೆ. ಪ್ರತಿ ಹಂತದಲ್ಲಿ ಸಾರ್ವಜನಿಕರು, ರೈತರಿಂದ ಹಣ ಕೀಳುವ ಭ್ರಷ್ಟರನ್ನು ಹೊಂದಿರುವ ಕಂದಾಯ ಇಲಾಖೆ, 2012ರಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದ ಇಲಾಖೆಗಳ ಪೈಕಿ ನಂಬರ್ 1 ಆಗಿದೆ.
ಕಳೆದ ವರ್ಷ ರಾಜ್ಯದ ವಿವಿಧ ಮೂಲೆಗಳಲ್ಲಿ ನಡೆದ ಲೋಕಾಯುಕ್ತ ದಾಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಇನ್ಸ್ಪೆಕ್ಟರ್ಗಳು, ಸಬ್ ರಿಜಿಸ್ಟ್ರಾರ್, ತಹಸೀಲ್ದಾರ್ಗಳು, ಪ್ರಥಮ, ದ್ವಿತೀಯ ದರ್ಜೆ ಗುಮಾಸ್ತರು ಸೇರಿ 181 ನೌಕರರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
2001 ರಿಂದ 2012ರವರೆಗೆ ಕಂದಾಯ ಇಲಾಖೆಯ 949 ನೌಕರರು ಬಲೆಗೆ ಬಿದ್ದಿದ್ದಾರೆ ಎನ್ನುವ ಮಾಹಿತಿ ಲೋಕಾಯುಕ್ತ ಸಂಸ್ಥೆ ಸಿದ್ಧ್ದಪಡಿಸಿರುವ ಪಟ್ಟಿಯಲ್ಲಿ ಲಭ್ಯವಾಗಿದೆ.
ಮತ್ತೊಂದು ಸಂಗತಿ ಎಂದರೆ ಕೆಳಹಂತದ ನೌಕರರೇ ಹೆಚ್ಚಾಗಿ ಲೋಕಾಯುಕ್ತ ಬಲೆಗೆ ಬಿದ್ದವರು. ಸಾರ್ವಜನಿಕರೊಂದಿಗೆ ನೇರವಾಗಿ ವ್ಯವಹರಿಸುವ ನೌಕರರೇ ಅತಿಹೆಚ್ಚು ಭ್ರಷ್ಟರು ಎನ್ನುವ ಹಣೆಪಟ್ಟಿ ಪಡೆದುಕೊಂಡಿದ್ದಾರೆ. ಅಟೆಂಡರ್, ಚಾಲಕ, ಗ್ರಾಮ ಸೇವಕ, ಸರ್ವೇಯರ್ ಕೂಡಾ ಇದರಲ್ಲಿ ಸೇರಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ: ಖಾತಾ ಬದಲಾವಣೆ, ದಾಖಲೆಗಳ ನಿರ್ವಹಣೆ, ಆಸ್ತಿ ನೋಂದಣಿ, ಪಹಣಿ, ಹಕ್ಕುಪತ್ರ ವಿತರಣೆ, ಜಮೀನು ವರ್ಗಾವಣೆ, ಜಾತಿ, ಆದಾಯ ಪ್ರಮಾಣ ಪತ್ರ ಹೀಗೆ ಪ್ರತಿ ಕೆಲಸಗಳು ಗ್ರಾಮ ಲೆಕ್ಕಾಧಿಕಾರಿಗಳ ಮೂಲಕವೇ ಆಗಬೇಕು. ಅಲ್ಲದೇ ಸಾರ್ವಜನಿಕರು ನೇರವಾಗಿ ಇವರ ಮೂಲಕವೇ ವ್ಯವಹಾರ ನಡೆಸುವ ಕಾರಣ ಇವರು ಲೋಕಾಯುಕ್ತ ಬಲೆಗೆ ಬಿದ್ದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
2012ರಲ್ಲಿ 30 ಗ್ರಾಮ ಲೆಕ್ಕಾಧಿಕಾರಿಗಳು ಬೆಲೆಗೆ ಬಿದ್ದಿದ್ದಾರೆ. ಲಂಚವಿಲ್ಲದೇ ಕೆಲಸ ಮಾಡಿಕೊಡುವ ಗ್ರಾಮ ಲೆಕ್ಕಾಧಿಕಾರಿಗಳನ್ನು ದುರ್ಬೀನು ಹಾಕಿ ಹುಡುಕಬೇಕು ಎನ್ನುತ್ತಾರೆ ಲೋಕಾಯುಕ್ತ ಅಧಿಕಾರಿಗಳು.
ಕಂದಾಯ ಇನ್ಸ್ಪೆಕ್ಟರ್: ಖಾತಾ ಬದಲಾವಣೆ, ವಿಭಜನೆ, ನೋಂದಣಿ, ಮಾಲೀಕತ್ವ ಜಮೀನು, ನಿವೇಶನ, ಹೀಗೆ ಆಸ್ತಿ ದಾಖಲೆಗಳ ನಿರ್ವಹಣೆ, ಮೇಲ್ವಿಚಾರಣೆಯಂತ ಮಹತ್ವದ ಕೆಲಸಗಳು ಕಂದಾಯ ಇನ್ಸ್ಪೆಕ್ಟರ್ ನಿರ್ವಹಿಸುತ್ತಾರೆ. ಲಕ್ಷದಿಂದ ಕೊಟ್ಯಂತರ ರುಪಾಯಿ ವ್ಯವಹಾರ ನಡೆಯುವಾಗ ಸುಮ್ಮನೆ ತಮಗೆ ಹಣ ಬರಲಿ ಎನ್ನುವ ದುರಾಸೆ ಅಧಿಕಾರಿಗಳದ್ದು.
ಇಲ್ಲದಿದ್ದರೆ ಈ ಸಂಬಂಧ ಏನಾದರೂ ಸಮಸ್ಯೆಗಳಿವೆ ಎನ್ನುವ ವಿಚಾರಗಳನ್ನು ಅಡ್ಡ ಇಟ್ಟು ಕೆಲಸ ಮುಗಿಸುವುದಿಲ್ಲ. ಹೀಗಾಗಿ ಸಾರ್ವಜನಿಕರು ಲಂಚ ನೀಡುತ್ತಾರೆ. ಇನ್ನು ಕೇಸ್ ವರ್ಕರ್ಗಳಾದ ಪ್ರಥಮ ಮತ್ತು ದ್ವಿತೀಯ ದರ್ಜೆ ನೌಕರರೂ ಬೇಗ ಕೆಲಸ ಮುಗಿಸುವುದಿಲ್ಲ.
ಜನರಿಗೆ ಕಿರುಕುಳ: ಲಂಚವಿಲ್ಲದೇ ಕಂದಾಯ ಇಲಾಖೆಯಲ್ಲಿ ಯಾವ ಕೆಲಸವೂ ಆಗುವುದಿಲ್ಲ. ಹಣ ನೀಡಿ ಕೈ ಬೆಚ್ಚಗೆ ಮಾಡದಿದ್ದಾರೆ ನಿಮ್ಮ ಕೆಲಸಗಳು ವರ್ಷ ಕಳೆದರೂ ಆಗುವುದೇ ಇಲ್ಲ. ಕಚೇರಿಗೆ ಓಡಾಡಿ ಜನರ ಚಪ್ಪಲಿ ಸವೆದು, ಸಮಯ ವ್ಯರ್ಥವಾಗುತ್ತವೆ. ಹೀಗಾಗಿ ಜನ ಹೋದರೆ ಹೋಗಲಿ ಎಂದು ಹಣ ಕೊಟ್ಟು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ.
ಬದಲಾವಣೆ: ಲೋಕಾಯುಕ್ತ ಸಂಸ್ಥೆಗೆ ನ್ಯಾ. ವೆಂಕಟಾಚಲ ಅವರು ಮುಖ್ಯಸ್ಥರಾಗಿ ನೇಮಕವಾಗುತ್ತಿದ್ದಂತೆ ಕಂದಾಯ ಸೇರಿ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟರಿಗೆ ನಡುಕ ಹುಟ್ಟಿಸಿದರು. ಅವರ ಕಾರ್ಯವೈಖರಿ ಇಡೀ ದೇಶದಲ್ಲೇ ಹೆಸರು ಗಳಿಸಿತು. ಬಳಿಕ ಹಂತ ಹಂತವಾಗಿ ಭ್ರಷ್ಟರು ಬೆಲೆಗೆ ಬೀಳುವ ಪ್ರಮಾಣವೂ ಹೆಚ್ಚಾಯಿತು. ಅಷ್ಟೇ ಅಲ್ಲದೇ ಹಠಾತ್ ಆಗಿ ವಿವಿಧ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸುತ್ತಿದ್ದರು. ಅತಿ ಹೆಚ್ಚು ದೂರುಗಳ ಬರುವ ಕಂದಾಯ ಇಲಾಖೆಯ ರಾಜ್ಯದ ವಿವಿಧ ಜಿಲ್ಲೆಗಳ ಕಚೇರಿಗಳ ಮೇಲೆ ದಾಳಿ ನಡೆಸಿ ಲಂಚದ ಹಣದೊಂದಿಗೆ ಹಲವರನ್ನು ಬಂಧಿಸಿದ್ದರು.
ಇದರಿಂದಾಗಿ ಕಂದಾಯ ಇಲಾಖೆಯಲ್ಲಿ ಲಂಚ ಕೇಳುವವರ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತುವಂತಾಯಿತು. ಅಲ್ಲದೇ ದೂರುಗಳ ಪ್ರಮಾಣವೂ ಹೆಚ್ಚುಯಿತು. ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧವೂ ದೂರುಗಳ ಬರಲು ಆರಂಭವಾದವು.
- ಮಂಜುನಾಥ ನಾಗಲೀಕರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.