ವಿವಿಗೆ ಟಿಪ್ಪು ಹೆಸರು ವಿರೋಧಿಸಿ ಏ.10ರಂದು ಪ್ರತಿಭಟನೆ
ಕ.ಪ್ರ. ವಾರ್ತೆ ಬೆಂಗಳೂರು ಮಾ.23
ಮುಸ್ಲಿಂ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಶ್ವವಿದ್ಯಾಲಯಕ್ಕೆ ಟಿಪ್ಪು ಹೆಸರಿಡಲಾಗುತ್ತಿದೆ. ಇದನ್ನು ಹಿಂಪಡೆಯದಿದ್ದರೇ ಕ್ರಿಶ್ಚಿಯನ್ರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಾಹಂ ಎಚ್ಚರಿಸಿದ್ದಾರೆ.
ರಾಜ್ಯದ ಕಾರವಾರ, ಉಡುಪಿ, ಮಂಗಳೂರು ಹಾಗೂ ಮಡಿಕೇರಿಯಲ್ಲಿನ ಸಾವಿರಾರು ಕ್ರಿಶ್ಚಿಯನ್ರನ್ನು ಟಿಪ್ಪುಶ್ರೀರಂಗಪಟ್ಟಣಕ್ಕೆ ಕರೆ ತಂದು ಇಸ್ಲಾಂಗೆ ಮತಾಂತರಗೊಳಿಸಿದ್ದಾನೆ. ಮತಾಂತರವು ಕೇವಲ ಕ್ರಿಶ್ಚಿಯನ್ರಿಗೆ ಸೀಮಿತವಾಗಿಲ್ಲ, ಸಾವಿರಾರು ಹಿಂದೂಗಳನ್ನು ಮತಾಂತರಗೊಳಿಸಿದ್ದಾನೆ. ಇಂತಹ ವ್ಯಕ್ತಿಯ ಹೆಸರನ್ನು ವಿವಿಗೆ ಇಡಬಾರದು. ಈ ಸಂಬಂಧ ಏ.10ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏ.10ರಂದು ಮಂಗಳೂರಿನ ಪರಂಗಿಪೇಟೆಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಲಿದೆ. 3 ಸಾವಿರಕ್ಕೂ ಅಧಿಕ ಕ್ರಿಶ್ಚಿಯನ್ ಧರ್ಮೀಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೇ ಬೆಂಗಳೂರು, ಕೆಜಿಎಫ್, ಮಡಿಕೇರಿ ಹಾಗೂ ರಾಜ್ಯದ ಇತರ ಪ್ರದೇಶಗಳಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಬ್ರಾಹಂ ಹೇಳಿದರು. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವರು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರು ಹಾಗೂ ಕಾಂಗ್ರೆಸ್ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ವಿವಾದವನ್ನು ಗಮನಕ್ಕೆ ತರಲಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಮರುಚಿಂತನೆ ಮಾಡಲೇಬೇಕು. ಟಿಪ್ಪು ಹೆಸರಿನ ಬದಲಿಗೆ ರೆ.ಕಿಟಲ್, ಸಂತ ಶಿಶುನಾಳ ಷರೀಫ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅಥವಾ ಮೌಲಾನಾ ಆಝಾದ್ ಹೆಸರನ್ನು ಪರಿಗಣಿಸಬೇಕು. ಸರ್ವಧರ್ಮ ಸಹಿಷ್ಣುತೆಯಿಲ್ಲದ ಒಬ್ಬ ವ್ಯಕ್ತಿಯ ಹೆಸರನ್ನು ವಿವಿಗೆ ಇಟ್ಟರೇ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಬ್ರಾಹಂ ಎಚ್ಚರಿಸಿದರು. ರಾಜ್ಯದ ವಿಧಾನಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಎಚ್ಚರವಿರಲಿ. ತನ್ನ ತೀರ್ಮಾನ ಬದಲಿಸದಿದ್ದರೆ 'ದಿ ಮೋಡ್ ಆಫ್ ಕಂಡಕ್ಟ್ ಫಾರ್ ಜೆನ್ವೀನ್ ಕ್ರಿಶ್ಚಿಯನ್ಸ್' ಎಂಬ ಸಂಘಟನೆಯು ಕೇಂದ್ರದಲ್ಲಿ ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.