ನಾನವನಲ್ಲ... ನಾನವನಲ್ಲ...
ಕ.ಪ್ರ. ವಾರ್ತೆ ಬೆಂಗಳೂರು ಮಾ.25-
ನಾನವನಲ್ಲ... ನಾನವನಲ್ಲ... ನಾನವನಲ್ಲ...
ಇದು ಉಪೇಂದ್ರರ ಬುದ್ಧಿವಂತ ಚಿತ್ರದ ಡೈಲಾಗ್. ಇದನ್ನು ಬೆಟ್ಟಹಲಸೂರಿನಲ್ಲಿರುವ ಮತದಾರರು ನೂತನ ಮತದಾರರ ಪಟ್ಟಿ ನೋಡಿ ಹೇಳುತ್ತಿದ್ದಾರೆ.
ಚುನಾವಣಾ ಅಧಿಕಾರಿಗಳು ಮತದಾರ ಪಟ್ಟಿ ತಯಾರಿಕೆ ಸಂದರ್ಭದಲ್ಲಿ ಸಾಕಷ್ಟು ಜಾಗ್ರತೆ ವಹಿಸಿದರೂ ಒಂದಲ್ಲ ಒಂದು ತಪ್ಪು ಸಂಭವಿಸುತ್ತಲೇ ಇವೆ. ಇದಕ್ಕೆ ಬೆಟ್ಟಹಲಸೂರು ಹೊರತಾಗಿಲ್ಲ. ಮತದಾರರ ಪಟ್ಟಿಯಲ್ಲಿರುವ ಯಾರದೋ ಹೆಸರಿಗೆ ಮತ್ಯಾರದ್ದೋ ಭಾವಚಿತ್ರ ಸೇರ್ಪಡೆಯಾಗಿದೆ.
ಕನ್ನಡದ ಜನರಿಗೆ ತಮಿಳು ಜನರ ಹೆಸರು ಸೇರಿಸಿದ್ದಾರೆ. ಇದರಿಂದ ಅಲ್ಲಿನ ಮಹಿಳೆಯರು ನನ್ನ ಗಂಡನ ಹೆಸರು ಬದಲಾಗಿದೆ ಎಂದು ಹೇಳಿದರೆ, ಮತ್ತೊಬ್ಬರು ಹೆಸರು ಮಾತ್ರ ನನ್ನದೇ, ಭಾವಚಿತ್ರ ನನ್ನದಲ್ಲ ಎನ್ನುತ್ತಿದ್ದಾರೆ.
ಬೆಟ್ಟಹಲಸೂರು, ನಾರಾಯಣಪುರಗಳಲ್ಲಿರುವ ಬಂಡೆಗಳ ಕೆಲಸಕ್ಕೆ ತಮಿಳುನಾಡಿನ ಮೂಲದ ಜನರು ವಲಸೆ ಬರುತ್ತಾರೆ. ಈ ಸಂದರ್ಭದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸುತ್ತಾರೆ. ಇವರು ಅಲ್ಲಿಂದ ವಲಸೆ ಹೋಗುತ್ತಾರೆ. ಹೀಗಾಗಿ ವರ್ಷಗಳೇ ಕಳೆದರೂ ಅವರ ಹೆಸರು ಪಟ್ಟಿಯಿಂದ ಹೋಗಿಲ್ಲ. ಆದರೆ ಅವರ ಹೆಸರು ಸೇರಿದಂತೆ ಇತರೆ ವಿವರಗಳು ಇಲ್ಲಿರುವ ಕನ್ನಡಿಗರ ಮತಪಟ್ಟಿಯಲ್ಲಿ ಎಲ್ಲೆಂದರಲ್ಲಿ ನುಸುಳಿದೆ.
ಮತದಾರರ ಪಟ್ಟಿಗೆ ಹೆಸರು ಸೇರಿಸಲು ನೀಡುವ ಅರ್ಜಿಯಲ್ಲಿರುವ ವಿವರವನ್ನು ದಾಖಲಿಸದೆ, ಇನ್ಯಾರದೋ ವಿವರ ದಾಖಲಿಸಿ ಚುನಾವಣೆ ಅಧಿಕಾರಿಗಳು ನಿರ್ಲಕ್ಷ್ಯ ಮೆರೆದಿದ್ದಾರೆ. ಈ ಬಗ್ಗೆ ಆಗಿರುವ ತಪ್ಪನ್ನು ಚುನಾವಣೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಇದನ್ನು ಪರಿಷ್ಕರಣೆ ಮಾಡದೆ, ಅಂತಿಮವಾಗಿಯೂ ತಪ್ಪೇ ಇರುವ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ರಾಜಕಾರಣಿಗಳ ಕೈವಾಡ: ಇಂತಹ ತಪ್ಪಾದ ಮತದಾರರ ಪಟ್ಟಿಯನ್ನೇ ರಾಜಕಾರಣಿಗಳು ಸ್ವಹಿತಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ತಪ್ಪಾಗಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಮಾಹಿತಿಯಂತೆಯೇ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುತ್ತಾರೆ. ಈ ಮೂಲಕ, ಮತದಾನದ ಸಮಯದಲ್ಲಿ ವ್ಯಕ್ತಿಯ ಬಳಿ ಮತದಾರ ಗುರುತಿನ ಚೀಟಿ ಇಲ್ಲದಿದ್ದರೂ ಖಾತೆ ತೋರಿಸಿ ಮತದಾನ ಮಾಡಿಸಿಕೊಳ್ಳಲಾಗುತ್ತದೆ. ಇದೊಂದು ಬಗೆಯ ಅಕ್ರಮ ಮತದಾನದ ಜಾಲ.
ಅಂಚೆ ಕಚೇರಿಯಲ್ಲಿ ಪಡೆದಿರುವ ಪಾಸ್ಬುಕ್ನಿಂದ ಮತದಾನ ಮಾಡಲು ಕೆಲವು ಪ್ರಭಾವಿ ವ್ಯಕ್ತಿಗಳು ಮತದಾರರ ಪಟ್ಟಿಯ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಹೇಗೆ ಅಂಚೆ ಕಚೇರಿಯಲ್ಲೂ ಖಾತೆ ದೊರೆಯುತ್ತದೆ ಎಂಬುದೂ ಪ್ರಶ್ನೆಯಾಗಿದೆ.
ತಂಡ ರಚನೆಯಾಗಿಲ್ಲ: ಮತದಾರ ಪಟ್ಟಿ ಪರಿಷ್ಕರಿಸುವ ಸಂದರ್ಭದಲ್ಲಿ ಲೋಪದೋಷಗಳು ಉಂಟಾಗಿದ್ದು ಸರಿಪಡಿಸುವಂತೆ
ಬೆಟ್ಟಹಲಸೂರಿನ ನಿವಾಸಿ ಬಿ. ನಾರಾಯಣ ಎಂಬುವರು 2012ರಲ್ಲಿ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದರು. ಆದರೆ, ಚುನಾವಣಾಧಿಕಾರಿ ಯಾವುದೇ ಕ್ರಮ ಜರುಗಿಸದ ಕಾರಣ ಬೆಂಗಳೂರು ಉತ್ತರ ತಾಲೂಕಿನ ತಹಶೀಲ್ದಾರ್ ಅವರಿಗೂ ಪತ್ರ ಬರೆದು ಮನವಿ ಮಾಡಿದರು.
ಈ ಸಂಬಂಧ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳ ಒಂದು ತಂಡ ರಚಿಸಿ ಎಂದು ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದರು. ಬಿ. ನಾರಾಯಣ ಅವರು ನೀಡಿರುವ ದೂರಿನಂತೆ ಮತದಾರರ ಪಟ್ಟಿಯಲ್ಲಿರುವ ಪ್ರತಿ ಮತದಾರರ ಮನೆ ಪರಿಶೀಲಿಸಿ ಉಪ ವಿಭಾಗಾಧಿಕಾರಿಗಳ ಮುಖಾಂತರ ವಿವರವಾದ ವರದಿ ಸಿದ್ಧಪಡಿಸಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿ ಕಚೇರಿಗೆ ವರದಿ ನೀಡಬೇಕು ಎಂದು ತಿಳಿಸಿತ್ತು. ಆದರೆ ಇದುವರೆಗೂ ಯಾವ ತಂಡವೂ ರಚನೆಯಾಗಿಲ್ಲ.
-ದೇವರಾಜ್ ಎಲ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.