ರಾಷ್ಟ್ರಪತಿ, ಪಿಎಂ ಆದೇಶಕ್ಕೂ ಕಿಮ್ಮತ್ತಿಲ್ಲ!
ಬೆಂಗಳೂರು: ರಾಜ್ಯದ ಐತಿಹಾಸಿಕ ಮತ್ತು ಪುಣ್ಯಕ್ಷೇತ್ರವೊಂದರ ರಸ್ತೆ ಬಗ್ಗೆ ದೇಶದ ರಾಷ್ಟ್ರಪತಿ ಮತ್ತು ಪ್ರಧಾನಿಯವರಿಗೆ ಇರುವ ಕಾಳಜಿ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲವಲ್ಲ..!
ರಸ್ತೆಯೊಂದರ ದುಸ್ಥಿತಿ ಕುರಿತು ರಾಷ್ಟ್ರಪತಿಯವರು ಬೇಸರ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಖಾರವಾಗಿ ಆದೇಶ ರವಾನಿಸಿದ್ದಾರೆ. ಆದರೂ ಸರ್ಕಾರ ಆ ಆದೇಶಕ್ಕೆ ಕಿಮ್ಮತ್ತು ನೀಡಲಿಲ್ಲ. ರಸ್ತೆ ಅಭಿವೃದ್ಧಿಗೂ ಗಮನ ಹರಿಸಲಿಲ್ಲ.
ಇದು ರಾಜ್ಯದ ಪ್ರವಾಸಿ ಕ್ಷೇತ್ರಗಳಲ್ಲೊಂದಾಗಿರುವ ತಲಕಾಡು ಬಳಿಯ ಹೆದ್ದಾರಿ. ಟಿ.ನರಸೀಪುರ ತಾಲೂಕು ವ್ಯಾಪ್ತಿಯ ಈ ರಸ್ತೆ 30 ವರ್ಷಗಳಿಂದ ಡಾಂಬರು ಕಂಡಿಲ್ಲ. ರಸ್ತೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸಿ ಜನ ಸುಸ್ತಾದರು. ಆಗ ಧ್ರುವರಾಜ್ ಎಂಬ ಮುಖಂಡ ರಸ್ತೆ ವಿಚಾರವನ್ನು ಸ್ಥಳೀಯ ಪಂಚಾಯಿತಿಯಿಂದ ರಾಷ್ಟ್ರಪತಿ ವರೆಗೂ ಕೊಂಡೊಯ್ದಿದ್ದಾರೆ.
ಆದರೂ ಅವರಿಗೆ ಈ ವಿಚಾರದಲ್ಲಿ ಸಿಕ್ಕಿರುವುದು ಅರ್ಧ ಯಶಸ್ಸು. ಏಕೆಂದರೆ, ಧ್ರುವರಾಜ್ 2 ವರ್ಷಗಳಿಂದ ಪತ್ರ ಹೋರಾಟ ನಡೆಸುತ್ತಿದ್ದರೂ ರಸ್ತೆ ಮಾತ್ರ ಇನ್ನೂ ಡಾಂಬರಿನ ವಾಸನೆಯನ್ನೂ ಕಂಡಿಲ್ಲ.
ಟಿ.ನರಸೀಪುರ ತಾಲೂಕು ವ್ಯಾಪ್ತಿಯ ಸೋಸಲೆ ಸರ್ಕಲ್ನಿಂದ ತಲಕಾಡು ರಸ್ತೆ ಹಾಗೂ ಹೊರಹಳ್ಳಿ ಅಡ್ಡರಸ್ತೆಯಿಂದ ಕಲ್ಕುಣಿ ರಸ್ತೆ ವರೆಗಿನ ಸುಮಾರು ಒಟ್ಟು 18 ಕಿ.ಮೀ. ಉದ್ದದ ರಸ್ತೆ ತೀರಾ ಅಪಾಯಕಾರಿಯಾಗಿದೆ. ಈ ರಸ್ತೆಯಲ್ಲಿ ಹೆಚ್ಚು ಖಾಸಗಿ ಬಸ್ಸುಗಳೇ ಸಂಚರಿಸುತ್ತಿದ್ದವು.
ಆದರೆ, ಇತ್ತೀಚಿಗೆ ಎತ್ತ ನೋಡಿದರೂ ಗುಂಡಿಗಳೇ ಸಿಕ್ಕುತ್ತಿದ್ದರಿಂದ ಇಲ್ಲಿ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ರಸ್ತೆಯಿಂದಲೇ ದೂರವಾಗಿ ಬಿಟ್ಟಿವೆ. ಈ ಬಗ್ಗೆ ಸ್ಥಳೀಯರು ದೂರು ನೀಡಿ ಬೇಸತ್ತಿದ್ದರು. ಅದೇ ರೀತಿ ಸ್ಥಳೀಯ ಶಾಸಕ ಎಚ್.ಸಿ.ಮಹಾದೇವಪ್ಪ ಭರವಸೆ ನೀಡಿ ಸುಸ್ತಾಗಿದ್ದರು.
ಇದನ್ನು ಗಂಭೀರವಾಗಿ ಗಮನಿಸುತ್ತಿದ್ದ ಸ್ಥಳೀಯ ನಿವಾಸಿ ಧ್ರುವರಾಜ್, ಈ ರಸ್ತೆ ಅಭಿವೃದ್ಧಿ ಮಾಡುತ್ತಿರೋ ಇಲ್ಲವೋ ಎಂದು ಕಠಿಣವಾಗಿ ಪ್ರಶ್ನಿಸಲು ಶಾಸಕ ಎಚ್.ಸಿ.ಮಹಾದೇವಪ್ಪ ಅವರನ್ನು ಸಂಪರ್ಕಿಸಲು ಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಬರೆದ ಪತ್ರವೂ ವಾಪಸ್ ಬಂತು.
ಸಚಿವರೇ ಹೀಗಾದರೆ ಗತಿ ಏನು?: ರಸ್ತೆ ಸಮಸ್ಯೆ ಬಗ್ಗೆ ಧ್ರುವರಾಜ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಗಮನಕ್ಕೆ ತಂದರು.
ವಿಚಿತ್ರವೆಂದರೆ, ಸಚಿವರು ಈ ರಸ್ತೆ ಬಗ್ಗೆ ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸುವ ಬದಲಿ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆದರು. ಇದನ್ನು ನೋಡಿದ ಅಧಿಕಾರಿಗಳು ಈ ರಸ್ತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಕೈತೊಳೆದುಕೊಂಡರು.
ಯಾರೂ ಸ್ಪಂದಿಸಲಿಲ್ಲ: ಅಷ್ಟೋತ್ತಿಗೆ ಧ್ರುವರಾಜ್ ರಸ್ತೆ ಹೋರಾಟಕ್ಕೆ ಕೆಲವು ವರ್ಷಗಳೇ ತುಂಬಿತ್ತು. ನಿರಾಶೆಗೊಳ್ಳದ ಅವರು 2011ರಲ್ಲಿ ರಾಜ್ಯ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ಪತ್ರ ಬರೆದು ರಸ್ತೆಯ ಚಿಂತಾಜನಕ ಸ್ಥಿತಿ ತಿಳಿಸಿದರು.
ಇದೇವೇಳೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಸಭೆ ಸ್ಪೀಕರ್ ಬೋಪಯ್ಯ, ರಾಜ್ಯಪಾಲರಾದ ಡಾ.ಎಚ್.ಆರ್.ಭಾರದ್ವಾಜ್, ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಅವರಿಗೂ ಪತ್ರ ಬರೆದು ಸಮಸ್ಯೆ ವಿವರಿಸಿದರು.
ಹೋರಾಟ ಮುಂದುವರಿಸಿದ ಧ್ರುವರಾಜ್, ಪ್ರಧಾನಮಂತ್ರಿ ಮನಮೋಹನ್ಸಿಂಗ್ ಹಾಗೂ ಹಿಂದಿನ ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರಿಗೆ ರಸ್ತೆ ದುಸ್ಥಿತಿ ಹಾಗೂ ಇದಕ್ಕಾಗಿ ನಡೆಸುತ್ತಿರುವ ಹೋರಾಟ ವಿವರಿಸುವ ಪತ್ರ ಬರೆದರು. ಕೆಲವೇ ದಿನಗಳಲ್ಲಿ ಪ್ರಧಾನಮಂತ್ರಿ ಕಚೇರಿಯಿಂದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬಂತು. ಅದರಲ್ಲಿ 'ಒಂದು ರಸ್ತೆ ವಿಚಾರ ಪ್ರಧಾನಮಂತ್ರಿವರೆಗೆ ಬರುವುದಾದರೇ ಸರ್ಕಾರ ರಸ್ತೆ ವಿಚಾರದಲ್ಲಿ ಮಾಡಿದ್ದಾದರೂ ಏನು ? ಈ ರಸ್ತೆ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಉತ್ತರಿಸಿ' ಎಂದು ಅಧಿಕಾರಿಗಳು ಪ್ರಶ್ನಿಸಿದ್ದ ಒಕ್ಕಣೆ ಇತ್ತು. ಇದಾದ ಕೆಲವೇ ದಿನಗಳಲ್ಲಿ ಮುಖ್ಯಕಾರ್ಯದರ್ಶಿಗೆ ಮತೊಂದು ಪತ್ರ ಬಂತು. ಅದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ. ಈ ರಸ್ತೆಯನ್ನು ನಿರ್ಲಕ್ಷಿಸಲು ಕಾರಣವೇನು, ಕೂಡಲೇ ಅಭಿವೃದ್ಧಿ ಕ್ರಮಕೈಗೊಂಡು ಉತ್ತರಿಸಿ ಎಂದು ಪತ್ರದಲ್ಲಿ ಕೇಳಲಾಗಿತ್ತು.ಇದಾದ ಕೆಲವೇ ದಿನಗಳಲ್ಲಿ ಮುಖ್ಯಕಾರ್ಯದರ್ಶಿ ಕಚೇರಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕೊಂಚ ಚುರುಕಾದರು. ನಿರ್ಲಕ್ಷಿಸಿತ ರಸ್ತೆಯಲ್ಲಿ ಮಣ್ಣು ಕೆತ್ತುವ ಕೆಲಸ ಆರಂಭವಾಯಿತು ಅಷ್ಟೇ. ಆನಂತರ ಎಲ್ಲಾ ಯಥಾಸ್ಥಿತಿ!
- ಶಿವಕುಮಾರ್ ಬೆಳ್ಳಿತಟ್ಟೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.