ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ ಗೊಳಿಸಿದ ಕ್ರಮ ಸರಿ

Parashurama
Updated On : 26 Mar 2013, 12:22 pm

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.25-
'ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮ ಸೂಕ್ತವಾಗಿದೆ, ನಾನು ಇದನ್ನು ಪಾಲಿಸುತ್ತೇನೆ ಹಾಗೂ ಸ್ವಾಗತಿಸುತ್ತೇನೆ'.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿಯಲ್ಲಿ 17 ಚಿನ್ನದ ಪದಕ ಪಡೆದು ನೂತನ ದಾಖಲೆ ಸೃಷ್ಟಿಸಿದ ಕ್ಯಾಲಿಕಟ್‌ನ ಸಂತೋಷ್ ನಾರಾಯಣ್ ಅವರ ಅಭಿಪ್ರಾಯವಿದು.
ದೇಶದ ಗ್ರಾಮೀಣ ಜನತೆ ಆರೋಗ್ಯ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ ವೈದ್ಯರ ಸಂಖ್ಯೆ ಕಡಿಮೆಯಿದೆ. ಗ್ರಾಮೀಣ ಭಾರತದ ಆರೋಗ್ಯ ಕಾಪಾಡಬೇಕಾಗಿರುವುದು ದೇಶದ ಜವಾಬ್ದಾರಿ. ಇದಕ್ಕೆ ಎಲ್ಲ ವೈದ್ಯರು ಸಹಕರಿಸಲೇಬೇಕು. ನಾನು ವೈಯಕ್ತಿಕವಾಗಿ ಕಡ್ಡಾಯ ಗ್ರಾಮೀಣ ಸೇವೆಯನ್ನು ಒಪ್ಪಿ ಪಾಲಿಸುತ್ತೇನೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಂದ 17 ಚಿನ್ನದ ಪದಕ ಸ್ವೀಕರಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಕಡ್ಡಾಯ ಗ್ರಾಮೀಣ ಸೇವೆಯಿಂದ ವಿದ್ಯಾರ್ಥಿಯ ಶೈಕ್ಷಣಿಕ ಜೀವನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸೇಶೋಧನೆ ಅಥವಾ ಸ್ನಾತಕೋತ್ತರ ಶಿಕ್ಷಣ ಮುಗಿಸಿ ವೈದ್ಯ ಸೇವೆಗೆ ಹಾಜರಾಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇಂತಹ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಒಳ್ಳೆಯದಲ್ಲ. ಗ್ರಾಮೀಣ ಭಾರತೀಯರಿಗೂ ಕನಿಷ್ಠ ಆರೋಗ್ಯ ಸೇವೆಗಳನ್ನು ನೀಡಲು ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.
ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಡಾ.ಲಕ್ಷ್ಮಿನಾರಾಯಣನ್ ಕೂಡ ವೈದ್ಯರ ಗ್ರಾಮೀಣ ಸೇವೆಯನ್ನು ಸಮರ್ಥಿಸಿಕೊಂಡರು. ಭಾರತದಂತಹ ಸಾಮಾಜಿಕ ಪರಿಸ್ಥಿತಿಯಲ್ಲಿ ಕಡ್ಡಾಯ ಗ್ರಾಮೀಣ ಸೇವೆ ಅನಿವಾರ್ಯ. ಇಲ್ಲವಾದಲ್ಲಿ ಎಲ್ಲರಿಗೂ ಆರೋಗ್ಯ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಘಟಿಕೋತ್ಸವ ಭಾಷಣ ಮಾಡಿದ ಮಣಿಪಾಲ್ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎಂ.ಹೆಗ್ಡೆ ಕೂಡ ಗ್ರಾಮೀಣ ಸೇವೆಯ ಅವಶ್ಯಕತೆ ಬಗ್ಗೆ ಮಾತನಾಡಿದ್ದಾರೆ. 'ಭಾರತಕ್ಕೆ ಮೂಲ ಹಂತದ ವೈದ್ಯರುಗಳ ಅವಶ್ಯಕತೆಯಿದೆ. ಪ್ರಸ್ತುತ ಭಾರತದಲ್ಲಿ ವೈದ್ಯಕೀಯ ಸೌಲಭ್ಯಗಳು ನಗರದಲ್ಲಿವೆಯೇ ಹೊರತು ಹಳ್ಳಿಗಳಲ್ಲಿಲ್ಲ. ಇದು ಎಲ್ಲರಿಗೂ ದೊರಕುವಂತಾಗಬೇಕು' ಎಂದು ಪ್ರತಿಪಾದಿಸಿದರು.
ವಿವಿಯ 45 ಚಿನ್ನಗಳು: ನಗರದಲ್ಲಿ ಸೋಮವಾರ ನಡೆದ ರಾಜೀವ್ ಗಾಂಧಿ ಆರೋಗ್ಯ ವಿವಿಯ 15ನೇ ಘಟಿಕೋತ್ಸವದಲ್ಲಿ 45 ವಿದ್ಯಾರ್ಥಿಗಳು ರಾಜ್ಯಪಾಲರಿಂದ ಚಿನ್ನದ ಪದಕ ಸ್ವೀಕರಿಸಿದರು. ಎಂಬಿಬಿಎಸ್‌ನಲ್ಲಿ ಕ್ಯಾಲಿಕಟ್‌ನ ಸಂತೋಷ್ ನಾರಾಯಣನ್ ಅವರು 17 ಚಿನ್ನದ ಪದಕ ಪಡೆದು ವಿವಿಯಲ್ಲಿ ನೂತನ ದಾಖಲೆ ಬರೆದರು. ಮಂಗಳೂರಿನ ಎ.ಜೆ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ ಪದವಿ ಅಧ್ಯಯನ ಮುಗಿಸಿದ್ದಾರೆ. ಮಂಗಳೂರಿನ ಎ.ಬಿ.ಶೆಟ್ಟಿ ಸ್ಮಾರಕ ದಂತವಿಜ್ಞಾನ ಸಂಸ್ಥೆಯ ರುಚಿ ಬಣಕಾರ್ ಅವರು 4 ಚಿನ್ನದ ಪದಕ ಪಡೆದಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಯ ವಿಶ್ರಾಂತ ಕುಲಪತಿಗಳಾದ ಡಾ.ಎಸ್.ಕಾಂತಾ ಜಾದವ್, ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಹಿರಿಯ ಉಪನ್ಯಾಸಕರಾದ ಡಾ.ಪಿ.ಎಸ್.ಶಂಕರ್ ಹಾಗೂ ಡಾ.ಮಹಾಬಲೇಶ್ವರ ಮೈಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಚಿನ್ನದ ಪದಕಕ್ಕಿಂತ ರೋಗಿಗಳ ನಂಬಿಕೆ ಮುಖ್ಯ: ವಿಶ್ವವಿದ್ಯಾಲಯಗಳಿಂದ ಚಿನ್ನದ ಪಕದ ಪಡೆಯುವುದು ವಿದ್ಯಾರ್ಥಿ ಜೀವನದ ಅವಿಸ್ಮರಣೀಯ ಕ್ಷಣವಿರಬಹುದು. ಆದರೆ ವೃತ್ತಿ ಜೀವನಕ್ಕೆ ಕಾಲಿಟ್ಟಾಗ ನಿಮ್ಮ ಬಳಿ ಬರುವ ರೋಗಿಗಳ ನಂಬಿಕೆ ಗಳಿಸುವುದು ಮುಖ್ಯ. ಅಂತಾರಾಷ್ಟ್ರೀಯ ಸಂಶೋಧನೆಗಳು ಹೇಳುವಂತೆ ಒಬ್ಬ ರೋಗಿಗೆ ವೈದ್ಯ ನೀಡುವ ಔಷಧಿಗಿಂತ ನಂಬಿಕೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಘಟಿಕೋತ್ಸವ ಭಾಷಣ ಮಾಡಿದ ಪದ್ಮಭೂಷಣ ಡಾ.ಬಿ.ಎಂ.ಹೆಗ್ಡೆ ಅಭಿಪ್ರಾಯಪಟ್ಟರು.
ಹಣ ಗಳಿಸುವುದು ಮಾತ್ರ ವೈದ್ಯ ವೃತ್ತಿಯ ಗುರಿಯಾಗಬಾರದು. ಇದಕ್ಕಾಗಿ ರೋಗಿಯನ್ನು ಹಣ ಗಳಿಸುವ ಯಂತ್ರವನ್ನಾಗಿ ಮಾಡಿಕೊಳ್ಳಬಾರದು. ಉತ್ತಮ ಚಿಕಿತ್ಸೆಯಿಂದಲೂ ಅವಶ್ಯಕ ಹಣಗಳಿಸಬಹುದು. ರೋಗಿಯು ವೇದ್ಯನ ಅವಶ್ಯಕತೆಯಿಲ್ಲದೇ ಜೀವಿಸಬಲ್ಲ, ಆದರೆ ವೈದ್ಯನು ರೋಗಿಗಳಿಲ್ಲದೇ ಎಂದಿಗೂ ಜೀವಿಸಲಾರ. ಇದನ್ನು  ಗಮನದಲ್ಲಿಟ್ಟುಕೊಂಡು ವೈದ್ಯರು ನೈತಿಕವಾಗಿ ಕೆಲಸಮಾಡಬೇಕು. ರೋಗಿಗಳಿಂದ ಗೌರವ ಗಳಿಸಿ, ಬದಲಾಗಿ ಗೌರವವನ್ನು ಬೇಡುವ ವೈದ್ಯರಾಗಬೇಡಿ ಎಂದು ಡಾ.ಹೆಗ್ಡೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments