ಕಾಂಪೌಂಡ್ ನಿರ್ಮಾಣ ಸಮರ್ಥಿಸಿಕೊಂಡ ಸೇನೆ
ಕ.ಪ್ರ. ವಾರ್ತೆ ಬೆಂಗಳೂರು ಮಾ.26-
ಹಲಸೂರು ಕೆರೆ ಬಳಿಯ ಗೌತಮಪುರ ಶಸ್ತ್ರಾಗಾರಕ್ಕೆ ತೆರಳುವ ರಸ್ತೆ ಸೇನೆಗೆ ಸೇರಿದ್ದು, ಅಲ್ಲಿ ರಾತ್ರೋ ರಾತ್ರಿ ಕಾಂಪೌಂಡ್ ನಿರ್ಮಿಸಿರುವುದನ್ನು ಸೇನೆ ಸಮರ್ಥಿಸಿಕೊಂಡಿದೆ.
2012ರ ಸೆಪ್ಟೆಂಬರ್ನಲ್ಲಿ ಗೌತಮಪುರದಲ್ಲಿ ಒಳಚರಂಡಿ ಲೈನ್ ಹಾಕಿಕೊಳ್ಳಲು ಪಾಲಿಕೆ ಸದಸ್ಯೆ ಸರಳಾ ಮೋಹನ್ ಅವರು ಸೇನೆಗೆ ಮನವಿ ಸಲ್ಲಿಸಿದ್ದರು.
ಸಮಾಜದ ಅಭಿವೃದ್ಧಿ ಹಿತದೃಷ್ಟಿಯಿಂದ ಶಸ್ತ್ರಾಗಾರ ಮಾರ್ಗಕ್ಕೆ ಬಳಸುವ ರಸ್ತೆಯನ್ನು ಒಳಚರಂಡಿ ಕಾಮಗಾರಿಗೆ ಬಳಸಿಕೊಳ್ಳುವುದಕ್ಕೆ ಸೇನೆ ತಾತ್ಕಾಲಿಕ ಅನುಮತಿ ನೀಡಿತ್ತು.
ನಿರ್ಧರಿಸಿದ ಜಾಗದಲ್ಲಿ ಕಾಮಗಾರಿ ನಡೆಸಲು ಸೇನೆಯ ಕಾಂಪೌಂಡ್ ಅನ್ನು ಎರಡು ಕಡೆ ಒಡೆದು ಹಾಕಲಾಯಿತು. ಆದರೆ, ಒಳಚರಂಡಿ ಬದಲು ರಸ್ತೆಯನ್ನು ಸಮತಟ್ಟು ಮಾಡಿ ಸರ್ವೀಸ್ ರಸ್ತೆಯನ್ನು ನಿರ್ಮಿಸುತ್ತಿರುವುದಾಗಿಯೂ ಉದ್ದೇಶಿತ ಒಳಚರಂಡಿ ಕಾಮಗಾರಿಯನ್ನು 2013ರ ಜುಲೈನಲ್ಲಿ ನಡೆಸುವುದಾಗಿ ಹೇಳಿದರು. ಈ ರೀತಿ ಕಾಮಗಾರಿ ನಡೆಸುವಂತೆ ಪಾಲಿಕೆ ಸದಸ್ಯೆ ಸರಳಾ ಮೋಹನ್ ಪತಿ ಮೋಹನ್ ತಿಳಿಸಿದ್ದಾರೆ ಎಂದು ಗುತ್ತಿಗೆದಾರರು ಸೇನೆಗೆ ತಿಳಿಸಿದ್ದರು.
ಅತಿಕ್ರಮವನ್ನು ತಡೆಗಟ್ಟಿ ಸೇನೆಯ ಜಾಗವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಆ ಜಾಗದಲ್ಲಿ ಸೇನೆ ಕಾಂಪೌಂಡ್ ನಿರ್ಮಿಸಲು ಪೊಲೀಸರ ರಕ್ಷಣೆಗೆ ಮನವಿ ಸಲ್ಲಿಸಿತು. ಆದರೆ ಪೊಲೀಸರು ಭದ್ರತೆ ನೀಡಲು ನಿರಾಕರಿಸಿದರು. ಬಳಿಕ ಡಿಸಿಪಿ ಕೃಷ್ಣಭಟ್ ಅವರಿಗೂ ಮನವಿ ಸಲ್ಲಿಸಲಾಯಿತು. ಆದರೆ ಪ್ರಯೋಜನವಾಗಲಿಲ್ಲ.
ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳದೇ ಸರ್ವೀಸ್ ರಸ್ತೆ ನಿರ್ಮಿಸಲು ಯತ್ನಿಸುವ ಮೂಲಕ ಸೇನಾ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಮಾರ್ಚ್ 23 ಹಾಗೂ 24ರ ರಾತ್ರಿ ಸೇನಾ ಸಿಬ್ಬಂದಿ ಕಾಂಪೌಂಡ್ ಕಟ್ಟಿಸುವ ಕಾರ್ಯಕ್ಕೆ ಮುಂದಾದರು.
ಮಾ.24ರಂದು ರಾತ್ರಿ ಸೇನಾ ಸಿಬ್ಬಂದಿ ಕಾಂಪೌಂಡ್ ಕಟ್ಟಿಸುತ್ತಿದ್ದ ವೇಳೆ ಪಾಲಿಕೆ ಸದಸ್ಯೆ ಸರಳಾ ಮೋಹನ್ ಅವರ ಪತಿ ಮೋಹನ್, ಹಲಸೂರು ಪೊಲೀಸರನ್ನು ತನ್ನ ಬೆಂಬಲಕ್ಕೆ ಕರೆಸಿಕೊಂಡರು. ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ತನ್ನ ಬೆಂಬಲಿಗರನ್ನು ಕರೆಸಿಕೊಂಡು ಸೇನಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಹಲವು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಒರ್ವ ಸಿಬ್ಬಂದಿಗೆ ತೀವ್ರ ಪೆಟ್ಟಾಗಿದ್ದು ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಸುದ್ದಿ ಸ್ಥಳಕ್ಕೆ ಆಗಮಿಸಿದ ಶಾಸಕ ಎನ್.ಎ. ಹ್ಯಾರಿಸ್ ಅವರು ಸೇನಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಯುತ್ತಿರುವುದನ್ನು ಗಮನಿಸಿ ಅದನ್ನು ನಿಯಂತ್ರಿಸಲು ಯತ್ನಿಸಿಲ್ಲ. ಬದಲಾಗಿ ಅವರಿಗೆ ಬೆಂಬಲಿಸಿದರು. ಕೊನೆಗೆ ಡಿಸಿಪಿ ಕೃಷ್ಣಭಟ್ ಅವರು ಗಲಾಟೆ ನಿಯಂತ್ರಿಸಿದರು. ಸೇನೆಯ ಜಾಗ ಅತಿಕ್ರಮಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.