ಪೊಲೀಸ್ ವರ್ಗಾವಣೆ ಆದೇಶ ರದ್ದು
ಕ.ಪ್ರ. ವಾರ್ತೆ ಬೆಂಗಳೂರು ಮಾ.26-
ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದ್ದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಇದರಿಂದ ನಕ್ಸಲ್ ನಿಗ್ರಹ ದಳದ ಐಜಿಪಿ ಅಲೋಕ್ಕುಮಾರ್, ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಸುವ್ಯವಸ್ಥೆ) ಸುನೀಲ್ಕುಮಾರ್ ಹಾಗೂ ಡಿಐಜಿ ಡಾ.ಡಿ.ಟಿ.ಪವಾರ್ ಹಾಗೂ ಡಿ.ರೂಪಾ ಅವರ ವರ್ಗಾವಣೆ ಆದೇಶ ರದ್ದಾಗಿದೆ.
ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೂ ಹೆಚ್ಚಿನ ಶ್ರೇಣಿಯ ಅಧಿಕಾರಿಗಳ ವರ್ಗಾವಣೆ ಕಡ್ಡಾಯವಾಗಿ ಪೊಲೀಸ್ ಸೇವಾ ಮಂಡಳಿ(ಪಿಇಬಿ) ಶಿಫಾರಸ್ಸಿನ ಆಧಾರದ ಮೇಲೆಯೇ ನಡೆಯಬೇಕು ಎಂದು ಸ್ಪಷ್ಟಪಡಿಸಿರುವ ನ್ಯಾ. ಎನ್.ಕುಮಾರ್ ಹಾಗೂ ನ್ಯಾ.ಬಿ.ಮನೋಹರ್ ಅವರಿದ್ದ ವಿಭಾಗೀಯ ಪೀಠ, ಮಂಡಳಿಯ ಶಿಫಾರಸು ಪಡೆಯದೆ ಹೊರಡಿಸಿದ ಆದೇಶವನ್ನು ರದ್ದುಗೊಳಿಸಿದೆ. ತಮ್ಮನ್ನು ನಕ್ಸಲ್ ನಿಗ್ರಹ ದಳಕ್ಕೆ ವರ್ಗಾವಣೆ ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ ಹೆಚ್ಚುವರಿ ಪೊಲೀಸ್ ಆಯುಕ್ತ ಸುನೀಲ್ಕುಮಾರ್ ಸಿಎಟಿ ಮೊರೆ ಹೋಗಿದ್ದರು. ಸಿಎಟಿ ವರ್ಗಾವಣೆ ಆದೇಶವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸುನೀಲ್ಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಏಳು ದಿನಗಳಲ್ಲಿ ಪಟ್ಟಿ: ವರ್ಗಾವಣೆಯಲ್ಲಿ ಪಿಇಬಿಗೆ ಪ್ರಮುಖ ಪಾತ್ರ ಎಂದು ಸ್ಪಷ್ಟಪಡಿಸಿರುವ ಪೀಠ, ಆಡಳಿತ ಸುಧಾರಣೆ ಹಾಗೂ ಸಿಬ್ಬಂದಿ ನಿರ್ವಹಣೆ ಇಲಾಖೆಯ ಸಹಕಾರದೊಂದಿಗೆ ಏಳು ದಿನಗಳಲ್ಲಿ ವರ್ಗಾವಣೆಗೆ ಅಭ್ಯರ್ಥಿಯ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಈ ಶಿಫಾರಸು ಪಡೆದ ಸರ್ಕಾರ ಎರಡು ದಿನಗಳಲ್ಲಿ ಅಂತಿಮ ವರ್ಗಾವಣೆ ಪಟ್ಟಿಯನ್ನು ಪ್ರಕಟಿಸಬೇಕು. ಅಲ್ಲದೆ, ವರ್ಗಾವಣೆ ಸಂದರ್ಭದಲ್ಲಿ ನಾಲ್ವರು ಅರ್ಜಿದಾರರು ಹೆಸರನ್ನು ಕೂಡ ಪರಿಗಣಿಸಬೇಕು ಎಂದು ಪೀಠ ತಿಳಿಸಿದೆ.
ತಪ್ಪಿದ್ದರೂ ಸರಿ ಎಂದ ಸಿಎಟಿ: ಅರ್ಜಿದಾರರ ವರ್ಗಾವಣೆಯಲ್ಲಿ ಪಿಇಬಿಯನ್ನು ಪರಿಗಣಿಸಿಲ್ಲ ಎಂಬುದನ್ನು ಅರಿತ ಸಿಎಟಿ, ಪ್ರಕ್ರಿಯೆಯಲ್ಲಿ ತಪ್ಪಾಗಿರುವುದು ನಿಜ. ಅದನ್ನು ಮುಂದಿನ ದಿನಗಳಲ್ಲಿ ಪುನರಾವರ್ತಿಸಬೇಡಿ ಎಂಬ ಸೂಚನೆ ನೀಡಿ ವರ್ಗಾವಣೆ ಆದೇಶವನ್ನು ಎತ್ತಿಹಿಡಿದಿರುವ ಸಿಎಟಿ ಕ್ರಮಕ್ಕೆ ಪೀಠ ತೀವ್ರ ಅಚ್ಚರಿ ವ್ಯಕ್ತಪಡಿಸಿದೆ. ಒಂದು ಸಾಂವಿಧಾನಿಕ ಪೀಠ ಇಂತಹದೊಂದು ಆದೇಶ ಹೊರಡಿಸಿರುವುದು ಸರಿಯಲ್ಲ. ಸ್ಪಷ್ಟ ಆದೇಶ ಹೊರಡಿಸಬೇಕಿತ್ತು. ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯೇ(ಕೆಎಟಿ) ದೃಢ ಹೆಜ್ಜೆ ಇಟ್ಟು, ನಿಯಮ ಬಾಹಿರ ವರ್ಗಾವಣೆ ಪ್ರಕ್ರಿಯೆಗೆ ತತಡೆಯಾಜ್ಞೆ ನೀಡಿದೆ ಎಂದು ಪೀಠ ತಿಳಿಸಿದೆ.
3 ವರ್ಷ ಸೇವೆ ಕಡ್ಡಾಯ: ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಹಿರಿಯ ಶ್ರೇಣಿಯ ಅಧಿಕಾರಿಗಳ ಮೂರು ವರ್ಷಗಳ ಸೇವೆಯ ನಂತರವೇ ಅವರನ್ನು ವರ್ಗಾವಣೆ ಮಾಡಬೇಕು. ಅಧಿಕಾರಿಗಳಾದ ಸುನೀಲ್ಕುಮಾರ್ 2 ವರ್ಷ, 6 ತಿಂಗಳು ಹಾಗೂ ಅಲೋಕ್ಕುಮಾರ್ 1 ವರ್ಷ 6 ತಿಂಗಳ ಕಾಲ ಮಾತ್ರ ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಈ ವರ್ಗಾವಣೆ ನಿಯಮ ಬಾಹಿರ ಎಂದು ಪೀಠ ಅಭಿಪ್ರಾಯಪಟ್ಟಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.