ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಲಕ್ ಇಲ್ಲದಿದ್ದರೆ ಲಕ್ವ ಹೊಡೆಯುತ್ತಾ..!

Parashurama
Updated On : 27 Mar 2013, 12:44 pm

ಬೆಂಗಳೂರು: ಪಕ್ಷವಾತ ಎಂದು ಪಕ್ಕಕ್ಕೆ ಸರಿಸಬೇಡಿ...
ಕಡೇ ಪಕ್ಷ ಚಿಕಿತ್ಸಾ ಕ್ರಮಗಳ ಕುರಿತು ಲಕ್ಷ್ಯವಹಿಸಿ. ಮಿತಿ ಮೀರಿದರೆ ಮರಣವೇ ಗ್ಯಾರೆಂಟಿ.
ಹೌದು. ಪಾರ್ಶ್ವವಾಯು ಸಮಸ್ಯೆ ಉಲ್ಬಣಿಸುತ್ತಿದೆ. ರೋಗದ ಪ್ರಮಾಣ ಹೆಚ್ಚುವುದರೊಂದಿಗೆ ಮೂಢನಂಬಿಕೆಯೂ ಹೆಚ್ಚುತ್ತಿದೆ. ಇದಕ್ಕೆ ಚಿಕಿತ್ಸೆಯೇ ಇಲ್ಲ ಎಂಬ ತಪ್ಪು ತಿಳಿವಳಿಕೆ ಜನರನ್ನು ಮತ್ತಷ್ಟು ಕುಗ್ಗಿಸುತ್ತಿದೆ. ಆದರೆ ನಂಬಿ, ಲಕ್ವ ಹೊಡೆದವರಿಗೆ ಮತ್ತೆ ಸರಿಹೋಗುವ ಲಕ್ ಇದೆ. ಸರಿಯಾದ ಸಮಯಕ್ಕೆ ಲಕ್ಷ್ಯ ವಹಿಸಬೇಕಷ್ಟೇ. ಪಾರ್ಶ್ವವಾಯು ಇಂದು ನಿನ್ನೆಯ ಸಮಸ್ಯೆಯಲ್ಲ. ಈ ರೋಗದ ಪರಿಚಯ ಮೊದಲೇ ಇದೆ. ಹಳೇರೋಗ ಎಂದೇ ಇದರೊಂದಿಗೆ ಮೂಢನಂಬಿಕೆಗಳ ಹುತ್ತ ಬೆಳೆದುಕೊಂಡಿದೆ. ಒಮ್ಮೆ ಲಕ್ವ ಹೊಡೆಯಿತೆಂದರೆ ಅದೇ ಸ್ಥಿತಿಯಲ್ಲಿ ಜೀವಮಾನ ಕಳೆಯುತ್ತಿದ್ದಾರೆ.
ಏನಿದು ಪಾರ್ಶ್ವವಾಯು?: ಇದೊಂದು ನರ ಸಂಬಂಧಿ ಖಾಯಿಲೆ. ನರ ದೌರ್ಬಲ್ಯದ ಪರಿಣಾಮ ಇದು. ಹೃದಯಾಘಾತದ ಮಾದರಿಯಲ್ಲಿಯೇ ಆಕ್ರಮಿಸಿಕೊಳ್ಳುವ ರೋಗ. ಹೃದಯಕ್ಕೆ ರಕ್ತ ಪಂಪ್ ಮಾಡುವ ನರ ಕಾರ್ಯ ಸ್ಥಗಿತಗೊಳಿಸಿದರೆ ಹೃದಯಾಘಾತವಾಗುವಂತೆ ಮೆದುಳಿಗೆ ರಕ್ತ ಪೂರೈಕೆ ಮಾಡುವ ನರ ಸ್ಥಗಿತಗೊಂಡರೆ ಲಕ್ವ.
ಇದರಲ್ಲೂ 2 ವಿಧಗಳಿವೆ.
ಪ್ರಾಥಮಿಕ ಪಾರ್ಶ್ವವಾಯು(ಇಸ್ಕೆಮಿಕ್)ಗೆ ಇಂದು ಹೆಚ್ಚಿನ ಜನರು ತುತ್ತಾಗುತ್ತಿದ್ದಾರೆ. ಒಟ್ಟು ರೋಗಿಗಳಲ್ಲಿ ಶೇ.87ರಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ಜಿಲ್ಲಾ ಆಸ್ಪತ್ರೆಗಳಲ್ಲಿ ಚುಚ್ಚುಮದ್ದುಗಳ ಮೂಲಕ ಗುಣಪಡಿಸಬಹುದು. ಜೊತೆಗೆ ತುಸು ಉತ್ತಮ ಚಿಕಿತ್ಸೆ ಪಡೆದರೆ ಮತ್ತೆ ಬರದಂತೆ ತಡೆಯಲೂ ಬಹುದು. ಆದರೆ ಹೆಮರಾಜಿಕ್ ಸಮಸ್ಯೆಗೆ (ಅಂತಿಮ ಹಂತ) ಚಿಕಿತ್ಸೆ ನೀಡುವ ಆಸ್ಪತ್ರೆಗಳು ಅತಿ ಕಡಿಮೆ ಪ್ರಮಾಣದಲ್ಲಿದೆ. ಸರಿಯಾದ ಸಮಯಕ್ಕೆ ರೋಗ ಪತ್ತೆಯಾದರೆ ಶಸ್ತ್ರ ಚಿಕಿತ್ಸೆಯ ಮೂಲಕ ಗುಣ ಪಡಿಸಬಹುದು ಎಂಬುದು ತಜ್ಞರ ಅಭಿಪ್ರಾಯ.
ಚಿಕಿತ್ಸೆ ಹೇಗೆ?: ರೋಗ ಉಲ್ಬಣಗೊಂಡಾಗ ಎಂಡೋವಾಸ್ಕ್ಯುಲರ್ ಎಂಬ ಚಿಕಿತ್ಸೆ ನೀಡಲಾಗುತ್ತದೆ. ಅಪಧಮನಿಯ ರಕ್ತ ಸಂಚಾರ ಉತ್ತಮಗೊಳ್ಳಲು, ಸ್ಟೆಂಟ್ ಎಂಬ ಸಣ್ಣ ಟ್ಯೂಬ್ ಅಳವಡಿಸಲಾಗುತ್ತದೆ.  ಅಪದಮನಿಯನ್ನು ಸದಾ ತೆರೆದಿಡುವ ಉದ್ದೇಶದಿಂದ ಈ ಟ್ಯೂಬ್‌ನ್ನು ಶಾಶ್ವತವಾಗಿ ಅಳವಡಿಸಲಾಗುತ್ತದೆ. ಆದರೆ ಹಲವು ರಕ್ತನಾಳದ ಗಾತ್ರದ ವ್ಯತ್ಯಾಸದಿಂದ ಎಲ್ಲ ರೋಗಗಿಳಿಗೂ ಈ ಚಿಕಿತ್ಸೆ ಸುಲಭವಾಗುವುದಿಲ್ಲ. ಇದಕ್ಕೆ ನೂತನವಾಗಿ ಕ್ರಾಸೋವರ್ ಬಲೂನ್ ಟೆಕ್ನಿಕ್ ಎಂಬ ಚಿಕಿತ್ಸೆಯೂ ಇದೆ. ಭಾರತದಲ್ಲಿ ಮೊದಲ  ಬಾರಿಗೆ ನಾರಾಯಣ ಹೃದಯಾಲಯದ ಡಾ.ವಿಕ್ರಮ್ ಹುಡೇದ್ ಅವರು ಈ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ. ಅಪದಮನಿಯಲ್ಲಿ ತೂತುನಳಿಗೆಗೆ ಜೋಡಿಸಿದ ಹೈಪರ್‌ಗ್ರಿಡ್ ಬಲೂನ್ ಅನ್ನು ಬಳಸಲಾಗುತ್ತದೆ. ಇದರಲ್ಲಿ ಗಾಳಿ ತುಂಬಿದಾಗ ಪಾರ್ಶ್ವವಾಯುವಿಗೆ ಕಾರಣವಾಗುವ ಹೆಪ್ಪುಗಟ್ಟಿದ ರಕ್ತವನ್ನು ಎಳೆದುಕೊಂಡು ಕ್ಯಾತಿಟರ್ ಹಿಗ್ಗುತ್ತದೆ. ಈ ವಿಧಾನದ ಮೂಲಕ ಚಿಕ್ಕ ರಕ್ತನಾಳ ಇರುವವರಿಗೂ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು.

-ಅರ್ಪಿತಾ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments