ಕ.ಪ್ರ. ವಾರ್ತೆ ಬೆಂಗಳೂರು, ಮಾ. 30
ಸಿಇಟಿ, ಕಾಮೆಡ್-ಕೆ ಪರೀಕ್ಷೆ ಬರೆಯದಿದ್ದರೂ ಪ್ರತಿಷ್ಠಿತ ಕಾಲೇಜಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಪಶ್ಚಿಮ ಬಂಗಾಳ ಮೂಲದ ಯುವತಿಯಿಂದ 28 ಲಕ್ಷ ನಗದು ಪಡೆದು ವಂಚಿಸಿದ್ದ ಮೂವರು ಆರೋಪಿಗಳನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ.ನಗರ 5ನೇ ಹಂತದ ನಿವಾಸಿ ಮುಜಾಮಿಲ್ ಅಮೀನ್ (24), ಕೆ.ಜಿ.ಹಳ್ಳಿ ಕುಶಾಲನಗರದ ತನ್ವೀರ್ ಪಾಷಾ (33) ಹಾಗೂ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಸೈಯ್ಯದ್ ಅಯೂಬ್ ಅಲಿ ಬಂಧಿತರು.
ಇವರಿಂದ 1 ಲಕ್ಷ ನಗದು, ಒಂದು ಮಾರುತಿ ಬೋಲೋನೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ, ಸೀಟು ಆಕಾಂಕ್ಷಿಯಿಂದ 20 ಲಕ್ಷಕ್ಕೂ ಅಧಿಕ ಹಣ ಪಡೆದ ಹರ್ಷ ಎಂಬಾತ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಘಟನೆ: ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ರಿಯಾ ಸರ್ಕಾರ್ ಎಂಬವರು ಪಿಯು ಶಿಕ್ಷಣ ಮುಗಿಸಿ ಮೆಡಿಕಲ್ ಶಿಕ್ಷಣಕ್ಕಾಗಿ ಸೀಟು ಪಡೆಯಲು ಕೊಲ್ಕತ್ತಾದಲ್ಲಿರುವ ತನ್ನ ಸ್ನೇಹಿತೆಯ ಮೂಲಕ ಬೆಂಗಳೂರಿನ ಮುಜಾಮಿಲ್ ಅಮೀನ್ ಪರಿಚಯ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಮೆಡಿಕಲ್ ಸೀಟು ಪಡೆಯಲು ಸಹಾಯ ಮಾಡುವಂತೆ ಮುಜಾಮಿಲ್ ಬಳಿ ಕೇಳಿದ್ದರು. ಈ ಸಂಬಂಧ ಮುಜಾಮಿಲ್ ತನ್ನ ಸ್ನೇಹಿತ ತನ್ವೀರ್ ಪಾಷಾನೊಂದಿಗೆ ಮಾತುಕತೆ ನಡೆಸಿ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ರಿಯಾ ಅವರಿಗೆ ತಿಳಿಸಿದ್ದ.
ಬಳಿಕ ಇಬ್ಬರು ಆರೋಪಿಗಳು ಮಧ್ಯವರ್ತಿಯಾಗಿರುವ ಅಯೂಬ್ ಅಲಿ ಭೇಟಿ ಮಾಡುತ್ತಾರೆ. ಆತ ಮಲ್ಲೇಶ್ವರದಲ್ಲಿರುವ ಇಮೆನ್‌ಸಾಫ್ಟ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕನ್ಸಲ್ಟೇಷನ್ ಸರ್ವೀಸಸ್‌ನಲ್ಲಿ ಹರ್ಷ ಎಂಬವರ ಪರಿಚಯ ಮಾಡಿಸುತ್ತಾನೆ. ಮೂವರು ಆರೋಪಿಗಳು ಮೆಡಿಕಲ್ ಸೀಟು ವಿಚಾರವಾಗಿ ಹರ್ಷನೊಂದಿಗೆ ಮಾತುಕತೆ ನಡೆಸುತ್ತಾರೆ. ಮಾತುಕತೆ ಬಳಿಕ ಹರ್ಷ ಚಿತ್ರದುರ್ಗದಲ್ಲಿರುವ ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಭರವಸೆ ನೀಡಿದ್ದಾನೆ.
ಸೀಟಿನ ಆಸೆಗೆ ರಿಯಾ ಆರಂಭದಲ್ಲಿ ಮುಜಾಮಿಲ್‌ನ ಅಕೌಂಟ್‌ಗೆ ಬ್ಯಾಂಕ್ ಮೂಲಕ ಲಕ್ಷಾಂತರ ರುಪಾಯಿ ಹಣ ವರ್ಗಾವಣೆ ಮಾಡಿದ್ದಾರೆ. ಸೀಟು ಸಿಗುವುದು ಖಚಿತ ಎನ್ನುವ ಆಸೆಯಿಂದ ರಿಯಾ ಬೆಂಗಳೂರಿಗೆ ಆಗಮಿಸಿದ್ದಾರೆ. ಮೊದಲ ವರ್ಷದ ಫೀ ಎಂದು ಸುಮಾರು 3 ಲಕ್ಷ ನಗದನ್ನು ನೀಡಿದ್ದಾರೆ.
ಬಳಿಕ ಎಚ್‌ಬಿಆರ್ ಲೇಔಟ್ ಹೊಟೇಲ್ ಒಂದರ ಬಳಿ ಒಮ್ಮೆಗೆ 23 ಲಕ್ಷ ನಗದು ನೀಡಿದ್ದಾರೆ.
ಈ ಸಂಬಂಧ ಹರ್ಷ, ಮುಜಾಮಿಲ್, ರಿಯಾ ಸರ್ಕಾರ್ ಸೇರಿದಂತೆ ಎಲ್ಲಾ ಆರೋಪಿಗಳು ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿಗೆ ತೆರಳಿದ್ದಾರೆ. ಆದರೆ ಕಾಲೇಜಿನಲ್ಲಿ ಮಾತುಕತೆಯ ವೇಳೆ ಹರ್ಷ ಮಾತ್ರ ಕಾಲೇಜು ಸಿಬ್ಬಂದಿಯೊಂದಿಗೆ ಕೊಠಡಿಯೊಳಗೆ ಮಾತುಕತೆ ನಡೆಸುತ್ತಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ಜೂನ್ ತಿಂಗಳು ಕಳೆದು ಡಿಸೆಂಬರ್ ಆಗುತ್ತಾ ಬಂದರೂ ಹಣ ಪಡೆದವರಿಗೆ ಮೆಡಿಕಲ್ ಸೀಟು ಕೊಡಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ನಾಳೆ ಕೊಡಿಸುವುದು ಎಂದು ಸುಳ್ಳು ಕಾರಣಗಳನ್ನು ಹೇಳುತ್ತಾ ರಿಯಾ ಅವರಿಗೆ ವಂಚಿಸುತ್ತಾ ಬರುತ್ತಿದ್ದರು. ಕೊನೆಗೆ ಆರೋಪಿಗಳು ಸೀಟು ಕೊಡಿಸುವುದು ಅಸಾಧ್ಯ ಎಂದು ಅರಿತ ರಿಯಾ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸೀಟು ಕೊಡಿಸುವುದಾಗಿ ನಂಬಿಸಿ 20 ಲಕ್ಷಕ್ಕೂ ಹೆಚ್ಚು ಹಣ ಪಡೆದು ನಾಪತ್ತೆಯಾಗಿರುವ ಪ್ರಮುಖ ಆರೋಪಿ ಹರ್ಷ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಸಾಲ ಮಾಡಿದ ಹಣ: ಯುವತಿ ರಿಯಾ ಸರ್ಕಾರ್‌ಗೆ ತಂದೆ ಇಲ್ಲ, ತಾಯಿ ಕೊಲ್ಕತ್ತಾದಲ್ಲಿ ಜನರೇಟರ್‌ಗಳನ್ನು ಬಾಡಿಗೆ ನೀಡುವ ವ್ಯವಹಾರ ನಡೆಸುತ್ತಾರೆ. ಶಿಕ್ಷಣಕ್ಕಾಗಿ ಕೂಡಿಟ್ಟ ಸ್ವಲ್ಪ ಹಣ ಹಾಗೂ ಉಳಿದ ಹಣ ಹೊಂದಿಸಲು ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದರು. ಕೊಲ್ಕಾತ್ತಾದಿಂದ ನಗರಕ್ಕೆ ಬರುವಾಗ ತಾನು ಸಾಗಿಸುತ್ತಿರುವ ಹಣ ವೈದ್ಯಕೀಯ ಶಿಕ್ಷಣಕ್ಕೆ ಫೀ ಕಟ್ಟಲು ಎಂದು ಕೊಲ್ಕತ್ತಾ ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ತನಿಖೆಯ ವೇಳೆ ಬಸವೇಶ್ವರ ಮೆಡಿಕಲ್ ಕಾಲೇಜು ಸಿಬ್ಬಂದಿ 'ತಾವು ಮೆಡಿಕಲ್ ಸೀಟು ನೀಡುವ ಬಗ್ಗೆ ಯಾರೊಂದಿಗೂ ಮಾತುಕತೆ ನಡೆಸಿಲ್ಲ' ಎಂದು ಪೊಲೀಸರಿಗೆ ಸ್ಪಷ್ಟಪಡಿಸಿದ್ದಾರೆ.