ಬೆಂಗಳೂರು ನಗರ

ಯಾಸೀನ್ ಕೊಲೆ ಪ್ರಕರಣ ಮೂರು ಆರೋಪಿಗಳ ಸೆರೆ

Parashurama

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾ.19ರಂದು ಕಾಡುಗೊಂಡನಹಳ್ಳಿಯ ಗೋವಿಂದಪುರ
ಕ್ರಾಸ್ ಬಸ್ ನಿಲ್ದಾಣದ ಬಳಿ ಹಾಡಹಗಲೇ ನಡೆದ ಮಹಮ್ಮದ್ ಯಾಸೀನ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಮಮೂರ್ತಿನಗರದ ತೌಸಿಫ್ (24), ಡಿ.ಜೆ.ಹಳ್ಳಿ ನಿವಾಸಿಗಳಾದ ಹಸನ್ (25), ಸಲೀಂ ಅಹಮದ್ (22) ಹಾಗೂ ಸಲೀಂ (22) ಬಂಧಿತರು. ಆರೋಪಿಗಳಿಂದ ಎರಡು ದ್ವಿಚಕ್ರ ವಾಹನಗಳು ಹಾಗೂ 3 ಮಚ್ಚುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಈ ಹಿಂದೆಯೂ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿ, ಪೊಲೀಸರಿಗೆ ಬೇಕಾಗಿದ್ದರು ಎಂದು ಕೆ.ಜಿ.ಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಘಟನೆ: ಮಾ.19ರಂದು ಕೊಲೆಯಾದ ಮಹಮ್ಮದ್ ಯಾಸೀನ್ ಹಾಗೂ ಪೊಲೀಸ್ ಮಾಹಿತಿದಾರನಾಗಿದ್ದ ಮಹಮ್ಮದ್ ಅಮೀನ್ ಸಹೋದರರು.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ತೌಸಿಫ್ ತಂಡದ ಬಗ್ಗೆ ಅಮೀನ್ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ತೌಸಿಫ್ ತಂಡ ಅಮೀನ್ ಕೊಲೆಗೆ ಸಂಚು ರೂಪಿಸಿತ್ತು.
ಮಾ.19ರಂದು ಅಮೀನ್ ಹಾಗೂ ಯಾಸೀನ್ ಸಹೋದರರು ಗೋವಿಂದಪುರ ಕ್ರಾಸ್ ಬಸ್ ನಿಲ್ದಾಣದ ಬಳಿ ನಿಂತಿದ್ದರು. ಈ ವೇಳೆ ನಾಲ್ವರು ಮುಸುಕುಧಾರಿಗಳು ಮಾರಕಾಸ್ತ್ರಗಳೊಂದಿಗೆ ಆಗಮಿಸಿ ಅಮೀನ್ ಕೊಲೆಗೆ ಯತ್ನಿಸಿದರು. ಈ ವೇಳೆ ಸಹೋದರನ ರಕ್ಷಣೆಗೆ ಬಂದ ಯಾಸೀನ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಡಿದ್ದ ಯಾಸೀನ್‌ನನ್ನು ಡಾ.ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಕೊಲೆ ನಡೆದ ದಿನವೇ ಪೊಲೀಸರು ಹಸನ್‌ನ್ನು ಬಂಧಿಸಿದ್ದರು.
ಆರೋಪಿಗಳು ಯಾಸೀನ್ ಹತ್ಯೆಯ ಬಳಿಕ ಡಿ.ಜೆ.ಹಳ್ಳಿಯ ಇರ್ಫಾನ್ ಅಲಿಯಾಸ್ ಬೂಂದಿ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದರು ಎನ್ನುವ ಅಂಶ ಪೊಲೀಸರ ತನಿಖೆಯ ವೇಳೆ ಕಂಡು ಬಂದಿದೆ.

SCROLL FOR NEXT