ಬೆಂಗಳೂರು: ಬೇಗ ವಿವಾಹವಾಗಿಲ್ಲವೆಂದು ಮನನೊಂದ ವ್ಯಕ್ತಿಯೊಬ್ಬ ಮದ್ಯದೊಂದಿಗೆ ವಿಷ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯಾಟರಾಯನಪುರದ ಭಾಗ್ಯರಾಜು (30) ಮೃತ ವ್ಯಕ್ತಿ. ಭಾಗ್ಯರಾಜು ಜೇಬಿನಲ್ಲಿ ದೊರೆತ ಮರಣಪತ್ರದಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ವಿಷಯ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಟರಾಯನಪುರ ಟಿಂಬರ್‌ಯಾರ್ಡ್ ಬಳಿ ಇರುವ ಸ್ಮಶಾನದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಆತ ಮದ್ಯದೊಂದಿಗೆ ವಿಷ ಬೆರೆಸಿ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು: ಬನ್ನೇರುಘಟ್ಟ ರಸ್ತೆ ಸಾಗರ್ ಅಪೋಲೊ ಆಸ್ಪತ್ರೆ ನೌಕರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಪೂಜಿನಗರದ ಗೀತಾ ಆಶ್ರಮದ ಬಳಿ ನಡೆದಿದೆ. ರವಿಕುಮಾರ್ (36) ಆತ್ಮಹತ್ಯೆಗೆ ಶರಣಾದವರು. ಶುಕ್ರವಾರ ರಾತ್ರಿ ಚೌಡಪ್ಪ ಲೇಔಟ್‌ನ ಗೀತಾ ಆಶ್ರಮದ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.