ಬೆಂಗಳೂರು: ಭಾರತವನ್ನು ಸದೃಢವಾಗಿಸಲು ಇಂದಿರಾಗಾಂಧಿ ಅವರ ನೀಡಿದ ಕೊಡುಗೆ ಅಪಾರ ಎಂದು ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್ ಹೇಳಿದರು.
ಅಂತಾರಾಷ್ಟ್ರೀಯ ಸಮಗ್ರತೆ ಶಾಂತಿ ಮತ್ತು ಸ್ನೇಹಿತರ ಸಂಘದಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ 'ಪ್ರಿಯದರ್ಶಿನಿ ಇಂದಿರಾಗಾಂಧಿ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಮಾತನಾಡಿದರು. ಇಂದಿರಾಗಾಂಧಿ ಪ್ರಧಾನ ಮಂತ್ರಿ ಆಗಿದ್ದಾಗ ತಮ್ಮ ಅವಧಿಯಲ್ಲಿ ದೇಶವನ್ನು ಸಮಗ್ರವಾಗಿ ಮುನ್ನಡೆಸಿದರು. ಅವರು ನೀಡಿದ್ದ ಮಾರ್ಗದರ್ಶನ ಹಾಗೂ ಬಿಟ್ಟುಹೋಗಿರುವ ಆಡಳಿತ ತಂತ್ರಗಳು ಇಂದಿನ ರಾಜಕಾರಣಿಗಳಿಗೆ ಮಾರ್ಗದರ್ಶನವಾಗಿವೆ. ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ನಿಜಕ್ಕೂ ಶ್ಲಾಘನೀಯ ಎಂದ ಅವರು, ಪ್ರತಿಯೊಬ್ಬರೂ ಅವರ ತತ್ವಗಳನ್ನು ಅನುಸರಿಸಿದರೆ ಒಳಿತು ಎಂದರು.ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿರುವ ಡಿಐಜಿ ವಿ.ಎಸ್. ರಾಜಾ, ಸಮಾಜ ಸೇವಕ ಶ್ರೀಕಾಂತ, ಡಿ.ಟಿ.ಪ್ರಕಾಶ್, ಕೆ.ಎನ್.ಶ್ರೀನಿವಾಸ್, ಕೆ.ಆರ್.ರಾಮಚಂದ್ರ, ಡಿ.ಸುರೇಶ್ ಕುಮಾರ್, ಎನ್.ಆರ್.ಪಾಂಚಲ್ ಅವರಿಗೆ ಪ್ರಿಯದರ್ಶಿನಿ ಇಂದಿರಾಗಾಂಧಿ ಹಾಗೂ ಬಿ.ಎಲ್.ನಿಜಲಿಂಗಪ್ಪ, ಅತ್ತಲೂರಿ ನಾಗಮಲ್ಲೇಶ್ವರ ರಾವ್ ಅವರಿಗೆ ರಾಜೀವ್ ಗಾಂಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯೆ ಬಿಂಬ ರಾಯ್‌ಕರ್ ಇತರರು ಉಪಸ್ಥಿತರಿದ್ದರು.