ಬೆಂಗಳೂರು: ರಾಜ್ಯ ಗುಪ್ತಚರ ಇಲಾಖೆ ಮುಖ್ಯ ಪೇದೆ ನಾನಿಯಪ್ಪಗೌಡ (53) ಕುಮಾರಕೃಪಾ ಅತಿಥಿಗೃಹ ವಿಶ್ರಾಂತಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅತಿಥಿಗೃಹದ ಭದ್ರತಾ ಸಿಬ್ಬಂದಿಯಾಗಿ ನಾನಿಯಪ್ಪಗೌಡ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೋರಮಂಗಲ ಪೊಲೀಸ್ ವಸತಿಗೃಹದಲ್ಲಿ ವಾಸವಿದ್ದರು.
ನಾನಿಯಪ್ಪ ಬುಧವಾರ ಮನೆಗೆ ವಾಪಸಾಗಿರಲಿಲ್ಲ. ಪತ್ನಿ ಮೊಬೈಲ್ ಫೋನ್‌ಗೆ ಕರೆ ಮಾಡಿದ್ದರು. ಸ್ವೀಕರಿಸದ ಹಿನ್ನೆಲೆಯಲ್ಲಿ ಅವರ ಸಹೋದ್ಯೋಗಿಗಳಿಗೆ ಕರೆ ಮಾಡಿದ್ದಾರೆ. ಸಹೋದ್ಯೋಗಿಗಳು ಹುಡುಕಾಟ ನಡೆಸಿ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಉತ್ತರಿಸಿದ ಹಿನ್ನೆಲೆಯಲ್ಲಿ ಅತಿಥಿಗೃಹಕ್ಕೆ ಬಂದು ಬಾಗಿಲು ಒಡೆದು ನೋಡಿದಾಗ ನಾನಿಯಪ್ಪ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ.
ನಾನಿಯಪ್ಪ ಕೆಲ ವರ್ಷಗಳಿಂದ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು. ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.