ಬೆಂಗಳೂರು ನಗರ

ತಪ್ಪಿತಸ್ಥರು ಭ್ರಷ್ಟರಲ್ಲ, ಅವರನ್ನು ನಂಬುವ ನಾವು!

ನಮ್ಮ ದೇಶವನ್ನು ಕಾಡುತ್ತಿರುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸುಲಭ ಮಾರ್ಗವೊಂದಿದೆ. ಅದಕ್ಕಾಗಿ ನಾವು ಮಾಡಬೇಕಿರುವುದು ಇಷ್ಟೆ- ಕೇಂದ್ರ ಸರ್ಕಾರದ ನಾಯಕತ್ವದ ರಚನೆಯಲ್ಲಿ ತುಸು ಬದಲಾವಣೆ ತರುವುದು. ಕೇಂದ್ರ ಕ್ಯಾಬಿನೆಟ್‌ನಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಇರಬೇಕು. ಪಕ್ಷದ ಹೈಕಮಾಂಡ್‌ನಲ್ಲಿ ಸೋನಿಯಾ ಗಾಂಧಿ, ರಾಬರ್ಟ್ ವಾದ್ರಾ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಬರ್ಟ್ ವಾದ್ರಾ. ಇನ್ನು ಮಾಧ್ಯಮಗಳಲ್ಲಿ ಆ್ಯಂಕರ್ ಆಗಿ ಕೇವಲ ರಾಬರ್ಟ್ ವಾದ್ರಾ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿಯಷ್ಟೇ ಇರಬೇಕು. ಸದ್ಯಕ್ಕೆ ಇರುವ ಪತ್ರಿಕೆಗಳ ಅಂಕಣಕಾರರನ್ನೆಲ್ಲ ಕಿತ್ತೆಸೆದು ಅವರ ಜಾಗದಲ್ಲಿ ರಾಹುಲ್, ರಾಬರ್ಟ್, ಸೋನಿಯಾ ಮತ್ತು ಪ್ರಿಯಾಂಕಾರನ್ನು ತಂದು ಕೂರಿಸಬೇಕು! ಈ ರೀತಿಯಲ್ಲಿ ರಚನೆಯಾದ ಭಾರತ "ಸುಮಂಗಳಂ, ಸುಭದ್ರಂ, ಶುಶೋಭನಂ" ಆಗಿರುತ್ತದೆ ಮತ್ತು ನಮ್ಮಂಥ ಹುಲುಮಾನವರ ಜೀವನ ಸಂತೋಷದಿಂದ ತುಂಬಿ ತುಳುಕತೊಡಗುತ್ತದೆ.
ಇಂಥ ವ್ಯವಸ್ಥೆಯನ್ನು ರೂಪಿಸುವುದರಿಂದ ಆಗುವ ಪ್ರಯೋಜನವೆಂದರೆ, ಅವಿವೇಕತನ ಮತ್ತು ಅಪರಾಧಗಳನ್ನೆಲ್ಲ ಆಗ 'ಕೆಟ್ಟದ್ದು' ಎಂದು ಭಾವಿಸುವ ಪ್ರಮೇಯವೇ ಬರುವುದಿಲ್ಲ. ಕಳಂಕಿತ ಶಾಸಕರು ಮತ್ತು ಸಂಸದರನ್ನು ರಕ್ಷಿಸಲು ಸಿದ್ಧವಾಗಿದ್ದ, ಕ್ಯಾಬಿನೆಟ್‌ನ ಅನುಮತಿ ಪಡೆದಿದ್ದ ಸುಗ್ರೀವಾಜ್ಞೆಯ ಬಗ್ಗೆ ರಾಹುಲ್ ಮಾತನಾಡಿದ ರೀತಿಯನ್ನು ದೇಶವಾಸಿಗಳೆಲ್ಲರೂ ತಪ್ಪು ಎನ್ನುತ್ತಿದ್ದಾರೆ. ಆದರೆ ರಾಹುಲ್‌ಗೆ ತಮ್ಮ ವರ್ತನೆಯಲ್ಲಿ ತಪ್ಪು ಕಂಡಿತೇ? ತಾವು ಬಳಸಿದ ಪದಗಳು ಸಮಂಜಸವಾಗಿರಲಿಲ್ಲ ಎನ್ನುವ ಹಾರಿಕೆಯ ಉತ್ತರವನ್ನು ಅವರು ಕೊಡುತ್ತಿದ್ದಾರೆ. ಆದರೆ ದೇಶದ ಪ್ರಧಾನಿಯೊಬ್ಬರನ್ನು ಹೀಗೆ ಕಡೆಗಣಿಸುವುದು ಸರಿಯೇ? ಅದೂ ಅವರು ವಿದೇಶದಲ್ಲಿರುವಾಗ? ಈ ಸುಗ್ರೀವಾಜ್ಞೆಗೆ ಒಪ್ಪಿಗೆ ಕೊಟ್ಟ ಕೋರ್ ಸಮಿತಿಯನ್ನು ಮೂರ್ಖರ ಗುಂಪಿನ ಹಾಗೆ ಕಾಣುವಂತೆ ಮಾಡಿದ್ದು ಎಷ್ಟು ಸರಿ ? ಇನ್ನು ಅವರ ತಾಯಿಯೇ ಆ ಸಮಿತಿಯಲ್ಲಿದ್ದಾರೆ! ರಾಹುಲ್ ಬಳಸಿದ ತಪ್ಪು ಪದಗಳ ಹಿಂದೆ 'ಸರಿಯಾದ ಉದ್ದೇಶವಿದೆ' ಎನ್ನುವ ಕಾರಣಕ್ಕೆ ಅವರನ್ನು ಪ್ರಶ್ನಿಸಲಾಗಿಲ್ಲ ಎನ್ನುತ್ತಿದ್ದಾರೆ ಕೆಲವರು. ಆದರೆ ರಾಹುಲ್ ವಿರುದ್ಧ ಇವರುಗಳೆಲ್ಲ ತುಟಿಪಿಟಕ್ ಅನ್ನದೇ ಇರುವುದಕ್ಕೆ, ಅವರ ಕುಟುಂಬದ ಹೆಸರೇ ಕಾರಣ ಎನ್ನುವ ವಿಷಯವನ್ನಂತೂ ಮುಚ್ಚಿಡಲಿಕ್ಕಾಗದು.
ರಾಹುಲ್ ನಿಜಕ್ಕೂ ಜನರ ಭಾವನೆಗಳಿಗೆ ಸ್ಪಂದಿಸಿ ಸುಗ್ರೀವಾಜ್ಞೆಯ ವಿರುದ್ಧ ಹರಿಹಾಯ್ದರೆ? ಅಥವಾ ಅವರೂ ಕೂಡ ಕಾಂಗ್ರೆಸ್‌ನ ಅದೇ ಹಳೆಯ ಟ್ರಿಕ್ ತೋರಿಸಿ ನಮ್ಮನ್ನು ಬೇವಕೂಫ್ ಮಾಡಲು ಪ್ರಯತ್ನಿಸಿದರೆ? 1986ರಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಸಾರ್ವಜನಿಕ ವಿರೋಧದ ನಡುವೆಯೂ ಅಂದಿನ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಿತು. ಆ ನಿರ್ಧಾರವನ್ನು ಕೈಗೊಂಡ ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಿದ್ದವರು ರಾಜೀವ್ ಗಾಂಧಿ. ಬೆಲೆ ಏರಿಕೆ ಘೋಷಣೆಯಾದ ನಂತರ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ನೇತೃತ್ವ ವಹಿಸಿಕೊಂಡ ಅವರು ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿದರು. ಬೆಲೆಯನ್ನು ಮೊದಲು ನಿಗದಿಪಡಿಸಿದ್ದಕ್ಕಿಂತ ಅರ್ಧಕ್ಕೆ ಏರಿಸಬೇಕು, ಇದರಿಂದಾಗಿ "ಸಾರ್ವಜನಿಕರ ಮೇಲಿನ ಹೊರೆ ಕಡಿಮೆಯಾಗುತ್ತದೆ" ಎಂದರು. ಬೆಲೆ ಏರಿಕೆ ಮಾಡಿದ್ದೂ ಅವರೇ, ಅದನ್ನು ಖಂಡಿಸಿದವರೂ ಅವರೇ! ಆದರೂ ರಾಜೀವ್ ಜನರಿಂದ ಬಹಳ ಮೆಚ್ಚುಗೆ ಗಿಟ್ಟಿಸಿಕೊಂಡರು.
ದುರದೃಷ್ಟವಶಾತ್ ಅಂದಿನ ಗಿಮಿಕ್‌ಗಳೆಲ್ಲ ಇಂದು ನಡೆಯುವುದಿಲ್ಲ. ಮುಗ್ಧತೆಯ ಆ ದಿನಗಳೆಲ್ಲ ಆಗಲೇ ದೂರವಾಗಿವೆ. ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಕಾಮನ್‌ವೆಲ್ತ್ ಹಗರಣದಿಂದ ಹಿಡಿದು 2 ಜಿ ಸ್ಪೆಕ್ಟ್ರಂವರೆಗೆ, ಅಲ್ಲಿಂದ ಹಿಡಿದು ಕಲ್ಲಿದ್ದಲು ಹಗರಣದವರೆಗೆ...ಹೀಗೆ ಒಂದಾದ ನಂತರ ಒಂದರಂತೆ, ದೇಶವನ್ನು ಹಳ್ಳಹಿಡಿಸುತ್ತಾ ಸಾಗಿದ ಹಗರಣಗಳನ್ನೆಲ್ಲ ನೋಡಿ ಜನತೆ ಎಚ್ಚೆತ್ತುಕೊಂಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿಯವರು, "ಈ ಸುಗ್ರೀವಾಜ್ಞೆಯನ್ನು ಹರಿದುಹಾಕಿ" ಎಂದು ಅಬ್ಬರಿಸಿದಂತೆ, ಕಲ್ಲಿದ್ದಲು ಘಟಕಗಳ ಹಂಚಿಕೆಯ ಫೈಲುಗಳ ಕಳೆದುಹೋಗಿರುವ ಬಗ್ಗೆ ಅಬ್ಬರಿಸಲಾರರು. ಐಎಎಸ್-ಐಪಿಎಸ್ ಅಧಿಕಾರಿಗಳು ಜನತೆಯ ತೆರಿಗೆ ಹಣದಲ್ಲಿ ವಿದೇಶಗಳಿಗೆ ಹೋಗಿ ಚಿಕಿತ್ಸೆ ತೆಗೆದುಕೊಂಡ ವಿಷಯದ ಬಗ್ಗೆಯೂ  ಅವರು ಆರ್ಭಟಿಸಲಾರರು.
ಈ ಕುಟುಂಬ ರಾಜಕಾರಣದ ಕರಾಳ ಛಾಯೆ, ಗುಣಾತ್ಮಕ ಅಭಿವೃದ್ಧಿಯ ಮೇಲೂ ಆವರಿಸಿಬಿಟ್ಟಿದೆ. ಬೇರೇ ಸಮಯದಲ್ಲಾಗಿದ್ದರೆ, ಲಾಲು ಪ್ರಸಾದ್ ಯಾದವ್ ಮತ್ತು ರಶೀದ್ ಮಸೂದ್‌ರ ಬಂಧನದ ಸುದ್ದಿ ಸಡಗರಕ್ಕೆ  ಕಾರಣವಾಗುತ್ತಿತ್ತು. ಎಷ್ಟೇ ಪ್ರಭಾವಿ ರಾಜಕಾರಣಿ ಆಗಿರಲಿ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು ಎನ್ನುವ ಸಂದೇಶ ಇವರಿಬ್ಬರ ಬಂಧದಿಂದ ಹೊರಬಿದ್ದಿದೆ. ಆದರೆ ಶಿಕ್ಷೆಗೊಳಗಾದವನಿಗೆ ತಾನು ಮಾಡಿದ್ದು ತಪ್ಪು ಎನ್ನುವ ಅರಿವೇ ಆಗದಿದ್ದರೆ ಶಿಕ್ಷೆಗೆ ಅರ್ಥವಾದರೂ ಏನಿದೆ? ಈಗೇನಾಗುತ್ತಿದೆಯೋ ನೋಡಿ. ಮಸೂದ್: "ನಾನು ಅಮಾಯಕ...ನೂರು ಪ್ರತಿಶತ ಅಮಾಯಕ" ಅಂದರೆ, ಲಾಲೂ ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ.
ಈ ವ್ಯಕ್ತಿಗಳೆಲ್ಲ ಅತ್ಯಂತ ಅಸಹ್ಯಕರ ರೀತಿಯಲ್ಲಿ ಭ್ರಷ್ಟಾಚಾರವೆಸಗಿದವರು. ಲಾಲು ಪ್ರಸಾದ್ ಯಾದವ್,  ನಕಲಿ ರಶೀದಿಗಳು ಮತ್ತು ನಕಲಿ ಹಂಚಿಕೆಯ ಪತ್ರಗಳಗನ್ನು ತಮ್ಮ ಖಜಾನೆಯಲ್ಲಿ ತುಂಬಿಸಿಕೊಳ್ಳುತ್ತಾದುಂಡಗಾದರು. ಇನ್ನು ಕೇಂದ್ರ ಆರೋಗ್ಯ ಸಚಿವರಾಗಿದ್ದ ಮಸೂದ್, ತ್ರಿಪುರಾದ ವಿದ್ಯಾರ್ಥಿಗಳಿಗಾಗಿ ಮೀಸಲಾಗಿದ್ದ ಎಮ್‌ಬಿಬಿಎಸ್ ಸೀಟುಗಳನ್ನು ತಮಗೆ ಬೇಕಾದವರಿಗೆ ಕೊಟ್ಟುಬಿಟ್ಟರು. ಅಧಿಕಾರ ಸಿಕ್ಕರೆ ಇಂಥವರೆಲ್ಲ ಹೀಗೇ ಮಾಡುವುದು. ಸುರೇಶ್ ಕಲ್ಮಾಡಿ, ಎ. ರಾಜಾ, ಓಂಪ್ರಕಾಶ್ ಚೌಟಾಲಾ, ಜನಾರ್ಧನ ರೆಡ್ಡಿ, ಪವನ್ ಬನ್ಸಲ್, ಅಶ್ವಿನಿ ಕುಮಾರ್- ಇವರೆಲ್ಲರನ್ನೂ ಮಾತನಾಡಿಸಿ ನೋಡಿ. 'ತಾವು ನೂರು ಪ್ರತಿಶತ ಅಮಾಯಕರು' ಎಂದೇ ಹೇಳುತ್ತಾರೆ. ಹೌದು ಇವರೆಲ್ಲ ಅಮಾಯಕರೇ! ಆಸಾರಾಂ ಬಾಪು ಕೂಡ ನೂರಕ್ಕೆ ನೂರು ಪ್ರತಿಶತ ಅಮಾಯಕ. ನಮ್ಮಂಥ ನಾಗರಿಕರು ಮಾತ್ರ ನೂರು ಪ್ರತಿಶತ ತಪ್ಪಿತಸ್ಥರು!

ಟಿ.ಜೆ.ಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ