ಬೆಂಗಳೂರು: ಇಂಗ್ಲೆಂಡಿನ ಕುಂಟಿಕಾನಮಠ ಸಂಸ್ಥೆ ಹಲವು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ 'ಲಂಡನ್ ಯಕ್ಷಗಾನ ಸ್ಪರ್ಧೆ'ಯನ್ನು 2014ರ ಜುಲೈ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಿದೆ ಎಂದು ಸಂಸ್ಥೆ ನಿರ್ದೇಶಕ ಕುಮಾರ್ ಕುಂಟಿಕಾನಮಠ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ, ಸಂಗೀತ, ಸಾಹಿತ್ಯ ಎಲ್ಲಾ ಕ್ಷೇತ್ರಗಳಲ್ಲಿ ಕಲಾವಿದರನ್ನು ಗುರುತಿಸಿ ಮನ್ನಣೆ ನೀಡಲಾಗುತ್ತದೆ. ಆದರೆ ಯಕ್ಷಗಾನ ಕಲಾವಿದರಿಗೆ ಸಿಗಬೇಕಾದ ಮಾನ್ಯತೆ ದೊರೆಯುತ್ತಿಲ್ಲ. ಆದ್ದರಿಂದ ಯಕ್ಷಗಾನವನ್ನು ಇನ್ನೂ ಹೆಚ್ಚಿನ ಜನರಿಗೆ ತಲುಪಲು ಮಾಧ್ಯಮವನ್ನು ಬಳಸಿ ಕಲಾವಿದರ ಬೆಳವಣಿಗೆಗೆ ಪ್ರಯತ್ನ ಮಾಡಿದ್ದೇವೆ. ಕಲಾವಿದರನ್ನು ಸ್ಪರ್ಧೆಯ ಹೆಸರಿನಲ್ಲಿ ದುಡಿಸಿಕೊಳ್ಳುವ ಉದ್ದೇಶ ಆಯೋಜಕರಿಗಿಲ್ಲ ಬದಲಾಗಿ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ತಗಲುವ ಖರ್ಚುಗಳು, ಕಲಾವಿದರ ಗೌರವಧನವನ್ನು ಅಯೋಜಕರೇ ನೀಡಲು ವ್ಯವಸ್ಥೆ ರೂಪಿಸಲಾಗಿದೆ ಎಂದರು. ಸಂಸ್ಥೆಯ ಕಾರ್ಯನಿರ್ವಹಕ ನಿರ್ದೇಶಕ ಗಣೇಶ್ ಭಟ್ ಮಾತನಾಡಿ, ಯಕ್ಷಗಾನ ಅಪೂರ್ವ ಕಲೆ. ಯಕ್ಷಗಾನದಲ್ಲಿ ತೆಂಕು ಮತ್ತು ಬಡಗು ತಿಟ್ಟಿನ ಕಲಾ ತಂಡಗಳಿಗೆ ಉತ್ತಮ ಭಾಗವತರಿಗೆ, ಮದ್ದಳೆ, ಚೆಂಡೆ, ನೃತ್ಯ, ಅಭಿನಯ, ಮಾತುಗಾರಿಕೆ, ಹಾಸ್ಯ, ಸ್ತ್ರೀ ವೇಷ ಸೇರಿದಂತೆ ಎಲ್ಲ ಪ್ರಕಾರಗಳ ಅಭಿವ್ಯಕ್ತಿಗೆ ಬಹುಮಾನ ನೀಡಲಾಗುವುದು. ಗೆದ್ದ ತಂಡಕ್ಕೆ 40 ಲಕ್ಷ ಬಹುಮಾನ ನೀಡಲಾಗುವುದು. ಆಸಕ್ತರು ಹೆಸರನ್ನು ನೊಂದಾಯಿಸಲು ಜನವರಿ 2014ರ ತನಕ ಸಮಯ ನೀಡಲಾಗಿದೆ ಎಂದು ತಿಳಿಸಿದರು.