ದೇಶದಲ್ಲಿ ಕೇಸರಿ ಭಯೋತ್ಪಾದನೆ ಇಲ್ಲ: ಬಿದರೆ
ದೇಶದಲ್ಲಿ ಕೇಸರಿ ಭಯೋತ್ಪಾದನೆ ಇಲ್ಲ. ಬದಲಾಗಿ ಕೆಂಪು ಮತ್ತು ಹಸಿರು ಭಯೋತ್ಪಾದನೆ ನೆಲೆಸಿದೆ...
ಬೆಳಗಾವಿ: ದೇಶದಲ್ಲಿ ಕೇಸರಿ ಭಯೋತ್ಪಾದನೆ ಇಲ್ಲ. ಬದಲಾಗಿ ಕೆಂಪು ಮತ್ತು ಹಸಿರು ಭಯೋತ್ಪಾದನೆ ನೆಲೆಸಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ವಿನಯ ಬಿದರೆ ಹೇಳಿದರು.
ಶನಿವಾರ ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ಕಾರ್ಯಕರ್ತರ ಶೋಭಾಯಾತ್ರೆ ಮತ್ತು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಸುಶೀಲಕುಮಾರ ಸಿಂಧೆ ಅವರು ದೇಶದಲ್ಲಿ ಕೇಸರಿ ಭಯೋತ್ಪಾದನೆ ಇದೆ ಎಂದು ಹಗುರವಾದ ಹೇಳಿಕೆ ನೀಡಿದ್ದಾರೆ. ಅದೇ, ಅವರು ಓಎಂಸಿಯಂತಹ ದೇಶದ್ರೋಹಿ ನೀಡುವ ಹೇಳಿಕೆ ಬಗ್ಗೆಯಾಗಲಿ ಅಥವಾ ಕೇರಳ ಸೇರಿದಂತೆ ಅನೇಕ ಕಡೆ ಹಿಂದೂಗಳ ಹತ್ಯೆ ಮಾಡುತ್ತಿರುವ ಸಂಘಟನೆಗಳ ವಿರುದ್ಧ ಹೇಳಿಕೆ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಅದರಲ್ಲೂ ಕೇಸರಿ ಬಣ್ಣ ತ್ಯಾಗ, ಶೌರ್ಯ ಮತ್ತು ಪರಾಕ್ರಮದ ಸಂಕೇತ ಪ್ರತಿಪಾದಿಸುತ್ತದೆ. ಜತಗೆ ಕೇಸರಿಗಾಗಿ ಲಕ್ಷ್ಯಾಂತರ ಹಿಂದೂಗಳು ಹುತ್ಮಾರಾಗಿದ್ದಾರೆ. ಹೀಗಾಗಿ ಕೇಸರಿ ದೇಶ ರಕ್ಷಣೆಗೆ, ದೇಶದ್ರೋಹಿಗಳ ವಿರುದ್ಧ ಹೋರಾಡುತ್ತಿದೆ ಎಂದು ಹೇಳಿದರು.
ಹಿಂದಿ ನಟ ಶಾರುಖ್ಖಾನ್ ಅವರನ್ನು ಬಾಲಿವುಡ್ ಬಾದಷಾಹ್ ಮಾಡಿದ್ದು ಭಾರತೀಯರು. ಅಂತಹ ನಟನಿಗೆ ದೇಶದಲ್ಲಿ ಅಭದ್ರತೆ ಕಾಡುತ್ತೀದೆ. ಹೀಗಾಗಿ ಪಾಕಿಸ್ತಾನಿಗಳು ಶಾರುಖ್ಗೆ ರಕ್ಷಣೆ ಒದಗಿಸಬೇಕೆಂದು ಹೇಳಿಕೆ ನೀಡುವಷ್ಟು ದರ್ಪ ಪ್ರದರ್ಶಿಸುತ್ತಿದ್ದಾರೆ. ಇದಕ್ಕೆಲ್ಲ ದೇಶದ ಚುಕ್ಕಾಣಿ ಹಿಡದಿರುವ ಬಲಹೀನ ರಾಜಕಾರಣಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದ ವಿಚಾರಗಳು ದೇಶ ಮತ್ತು ಸಮಾಜ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅಂತಹ ಮಹಾನ್ ಚೇತನರ ವಿಚಾರಗಳ ಮಾರ್ಗದಲ್ಲಿ ಸಾಗುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ತನ್ನ ಕಾರ್ಯಕರ್ತರಿಗೆ ದೇಶ ಪ್ರೇಮ, ರಾಷ್ಟ್ರೀಯ ಚಿಂತನೆಯನ್ನು ಭಿತ್ತುತ್ತಿದೆ. ಹೀಗಾಗಿ ಎಬಿವಿಪಿ ಸದಾ ದೇಶದ್ರೋಹಿ ಹಾಗೂ ಭ್ರಷ್ಟಾಚಾರಿಗಳ ವಿರುದ್ಧ ಹೋರಾಟ ಮುಂದುವರೆಸಿಕೊಂಡು ಹೋಗುವ ಸಂಘಟನೆಯಾಗಿದೆ ಎಂದು ಹೇಳಿದರು.
ಪಾಕಿಸ್ತಾನ ಮತ್ತು ಅಪಘಾನಿಸ್ತಾನ ದೇಶಗಳು ತನ್ನ ಐಎಸ್ಐ ಸಹಚರರಿಂದ ದೇಶದ ಯುವಶಕ್ತಿಯನ್ನು ನಾಶ ಮಾಡುವುದಕ್ಕಾಗಿ ಮಾದಕ ವಸ್ತುಗಳನ್ನು ಪೂರೈಸುತ್ತಿದೆ. ಎಲ್ಲ ವಿವಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ವಿದ್ಯಾರ್ಥಿಗಳು ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.
ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಎಬಿವಿಪಿ ಕಾರ್ಯಕರ್ತರಾದ ನೇತ್ರಾ, ಮಹಿಪಾಲ, ಸಂತೋಷ ಸೇರಿದಂತೆ ಮೊದಲಾದವ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಮೊದಲು ನಗರದ ಗಾಂಧಿಭವನ ಆವರಣದಿಂದ ಆರಂಭವಾದ ಶೋಭಾಯಾತ್ರೆ ಕಾಕತಿವೆಸ್, ಶನಿವಾರಕೂಟ, ಗಣಪತಗಲ್ಲಿ, ಮಾರುತಿಗಲ್ಲಿ, ಕಿರ್ಲೋಸ್ಕರ ರಸ್ತೆ, ಸಮಾದೇವಿ ಗಲ್ಲಿ ಮಾರ್ಗವಾಗಿ ಸರದಾರ ಮೈದಾನದ ಸಾರ್ವಜನಿಕ ಸಭೆಗೆ ಬಂದು ತಲುಪಿತು.
ಎಬಿವಿಪಿ ರಾಜ್ಯಾಧ್ಯಕ್ಷ ಡಾ. ಬಿ.ವಿ. ವಸಂತಕುಮಾರ ಅಧ್ಯಕ್ಷತೆ ವಹಿಸಿದ್ದರು. ನಗರಾಧ್ಯಕ್ಷ ಸಂದೀಪ ನಾಯರ, ನಗರ ಕಾರ್ಯದರ್ಶಿ ಪ್ರಶಾಂತ ಅಮ್ಮಿನಭಾವಿ ಮೊದಲಾದವರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.