ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ
ಚಿಕ್ಕೋಡಿ: ಶಿಕ್ಷಕೇತರ ಸಿಬ್ಬಂದಿಗೆ ಮೂಲ ವೇತನ ಶೇ.10 ರಷ್ಟು ವಿಶೇಷ ಭತ್ಯೆ, ನಿವೃತ್ತಿ ವೇತನ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಖಿಲ ಭಾರತ ನವೋದಯ ವಿದ್ಯಾಲಯ ಸಂಘಟನೆ ಪದಾಧಿಕಾರಿಗಳು ಶನಿವಾರ ತಾಲೂಕಿನ ಕೋಥಳಿ ಗ್ರಾಮದ ನವೋದಯ ವಿದ್ಯಾಲಯದ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಸೇವಾ ಅವಧಿ ಸೀಮಿತಗೊಳಿಸುವುದು, 500 ವಿದ್ಯಾರ್ಥಿಗಳಿಗೆ ಕೇವಲ 10 ಜನ ಶಿಕ್ಷಕರಿದ್ದು, ಅವರ ಸಂಖ್ಯೆ ಹೆಚ್ಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಗಳಿಕೆ ರಜೆ ಸೌಲಭ್ಯ ಮಂಜೂರು, ಸ್ನಾತಕೋತ್ತರ ಹುದ್ದೆಗಳನ್ನು ಮಂಜೂರು, ನಿಗಧಿತ ಅವಧಿಗೆ ವರ್ಗಾವಣೆ, ವೇತನ ತಾರತಮ್ಯ ನಿವಾರಣೆ, ಅಕಾಲಿಕ ಮರಣ ಹೊಂದಿದ ಜವಾಹರ ನವೋದಯ ವಿದ್ಯಾಲಯ ಸಿಬ್ಬಂದಿಯ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ವಿಮೆ ಯೋಜನೆ ಸೌಲಭ್ಯ, ಕಡ್ಡಾಯವಾಗಿ ವಾರದ ರಜೆ ನೀಡುವಂತೆ ಶಿಕ್ಷಕರು ಒತ್ತಾಯಿಸಿದ್ದಾರೆ. ಜವಾಹರ ನವೋದಯ ವಿದ್ಯಾಲಯಗಳಲ್ಲಿ ಡಿ ದರ್ಜೆ ನೌಕರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಳಿಸಬೇಕು. ಫೆ. 10 ರಂದು ನಡೆಯಲಿರುವ ಜವಾಹರ ನವೋದಯ ವಿದ್ಯಾಲಯದ ಪುಸ್ತಕ ವರ್ಷದ ಪ್ರವೇಶ ಪರೀಕ್ಷೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಶಿಕ್ಷಕರು ಎಚ್ಚರಿಸಿದ್ದಾರೆ. ಜವಾಹರ ನವೋದಯ ವಿದ್ಯಾಲಯದ ಸಿಬ್ಬಂದಿ ಆರಂಭಿಸಿರುವ ಧರಣಿ ಸತ್ಯಾಗ್ರಹಕ್ಕೆ ಪಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಜವಾಹರ ನವೋದಯ ವಿದ್ಯಾಲಯದ ಕಚೇರಿ ಅಧೀಕ್ಷಕ ಎಸ್.ಎಸ್.ನಾಡ, ಎ. ವಿ. ಕೊಳ್ಳಿ, ಎಸ್.ಬಿ. ಪ್ರಸಾದ, ಕೆ.ಸಿ. ಹುಬ್ಬಳ್ಳಿ, ಮಾನಪಾ ಹವಾಲ್ದಾರ, ಮಹಾವೀರ ಜೈನ, ಎಸ್.ಎಸ್. ನಾಯಿಕ, ಡಿ.ಪಿ. ನಿಂಬಾಳಕರ, ಎ. ಎಂ.ಚೌಗಲೆ, ಬಿ.ಎಸ್. ಮುತ್ತೂರ, ಟಿ.ಆರ್. ಸಾವಿತ್ರಿಗೋಳ ಇತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.