ಶಿಕ್ಷಣ ಸುಧಾರಣೆಗೆ ಚಿಂತಿಸದ ರಾಜ್ಯಪಾಲರು
ಬೆಳಗಾವಿ: ರಾಜ್ಯದಲ್ಲಿರುವ ವಿಶ್ವ ವಿದ್ಯಾಲಯಗಳ ಕುಲಾಧಿಪತಿಯಾಗಿರುವ ರಾಜ್ಯಪಾಲರು ಶಿಕ್ಷಣ ಸುಧಾರಣೆಗಾಗಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಎಬಿವಿಪಿ ರಾಷ್ಟ್ರೀಯ ಸಹ ಸಂಘಟನೆ ಕಾರ್ಯದರ್ಶಿ ಕೆ.ಎನ್. ರಘುನಂದನ್ ಕಳವಳ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 32ನೇ ರಾಜ್ಯ ಮಟ್ಟದ ಸಮ್ಮೇಳನದ ಎರಡನೇ ದಿನವಾದ ಶನಿವಾರ ಅವರು 'ಇಂದಿನ ವ್ಯವಸ್ಥೆಯ ಬದಲಾವಣೆ ನಾಳೆಯ ಸಮೃದ್ಧ ಭಾರತ' ವಿಷಯ ಕುರಿತು ಉಪನ್ಯಾಸ ನೀಡಿದರು.
ರಾಜ್ಯಭವನದಲ್ಲಿ ಶಿಕ್ಷಣದ ವಿಷಯವಾಗಿ ಇಂದಿನವರೆಗೂ ಒಂದೆ ಒಂದೂ ಕಾರ್ಯಾಗಾರವನ್ನು ರಾಜ್ಯಪಾಲರು ಏರ್ಪಡಿಸಿಲ್ಲ. ಹೀಗಾಗಿ ವಿವಿಗಳು ಜಗತ್ತಿಗೆ ಜ್ಞಾನ ನೀಡುವ ದೇಗುಲಗಳಾಗದೆ, ಬರೀ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಕೇಂದ್ರಗಳಾಗಿವೆ. ಇಂತಹ ಸ್ಥಿತಿಯಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತೆರಬೇಕಾಗಿದೆ ಎಂದರು.
ಕೇಂದ್ರದ ದ್ವಂದ್ವ ನೀತಿ: ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವಂತಾಗಲಿ ಎಂದು ಕೇಂದ್ರ ಸರ್ಕಾರ (ಆರ್ಟಿಎ) ಕಡ್ಡಾಯ ಶಿಕ್ಷಣ ಮಸೂದೆಯನ್ನು ಜಾರಿಗೊಳಿಸಿದ್ದರೂ, ಈ ಕಾಯಿದೆ ವ್ಯಾಪ್ತಿಯಿಂದ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಹೊರಗಿಡುವ ಮೂಲಕ ಕೇಂದ್ರ ಸರ್ಕಾರ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು.
ಮೊದಲು ಭಾರತ ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾಗಿದೆ. ಈಗಿರುವ ಸಂವಿಧಾನ ನಮ್ಮ ಸ್ವಂತ ಸಂವಿಧಾನವಲ್ಲ. ಇದರಲ್ಲಿರುವ ಒಂದೇ ಒಂದೂ ಕಾನೂನು ಭಾರತೀಯರ ವಾಸ್ತವ ಬದುಕಿಗೆ ಸಂಬಂಧಿಸಿಲ್ಲ. ಬದಲಾಗಿ ವಿದೇಶ 5-6 ದೇಶಗಳು ರಚಿಸಿದ ಸಂವಿಧಾನದ ಕಾನೂನಗಳನ್ನು ಒಟ್ಟುಗೊಡಿಸಿ ಸಂವಿಧಾನ ರಚಿಸಲಾಗಿದೆ. ಹೀಗಾಗಿ ಭಾರತದ ನೆಲೆಗಟ್ಟಿನಲ್ಲಿ ಸಂವಿಧಾನ ರಚಿಸಬೇಕಾಗಿದೆ ಎಂದರು.
ದೇಶದಲ್ಲಿ ಇಂದಿಗೂ ಬ್ರಿಟಿಷರ ಕಾಲದ ಪೊಲೀಸ್ ವ್ಯವಸ್ಥೆ ಜಾರಿಯಲ್ಲಿದೆ. ಮೊದಲು ದೇಶಿಯ ಪೊಲೀಸ್ ವ್ಯವಸ್ಥೆ ಬದಲಾಗಬೇಕು. ನೂತನ ಪೊಲೀಸ್ ವ್ಯವಸ್ಥೆಯಲ್ಲಿ ತನಿಖಾ ಮತ್ತು ಕಾನೂನು ಸುರಕ್ಷತೆ ಎಂಬ ಎರಡು ವಿಧಗಳನ್ನು ರಚಿಸಬೇಕು. ಈ ಎರಡರಲ್ಲೂ ರಾಜಕಾರಣಿಗಳ ಹಸ್ತಕ್ಷೇಪ ಮಾಡದಂತೆ ಎಚ್ಚರ ವಹಿಸಬೇಕಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಪ್ರಪಂಚದಲ್ಲಿ ಭಾರತ, ಅಮೆರಿಕಾ, ಚೀನಾ ದೇಶಗಳು ಆಳ್ವಿಕೆ ನಡೆಸಲಿವೆ. ಅದರಲ್ಲೂ ಭಾರತ ಯುವಶಕ್ತಿಯಿಂದ ಜಾಗತಿಕ ಶಕ್ತಿಯಾಗಿ ಪರಿವರ್ತನೆಯಾಗಿ, ಸಮಗ್ರ ಮತ್ತು ಸಮೃದ್ಧ ಭಾರತವಾಗಿ ನಿರ್ಮಾಣವಾಗಲಿದೆ. ಭಾರತದ ಬಳಿ ಅಣು ಶಕ್ತಿಯಿದ್ದರೂ ಪ್ರಪಂಚವನ್ನು ಆಧ್ಯಾತ್ಮ ಮತ್ತು ಭಾರತೀಯ ಸಂಸ್ಕೃತಿಯಿಂದ ಆಳ್ವಿಕೆ ನಡೆಸಲಿದೆ ಎಂದು ಹೇಳಿದರು.
ಡಾ. ರಾಜೇಂದ್ರ ಭಾಂಡನಕನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎಬಿಪಿವಿ ರಾಜ್ಯಾಧ್ಯಕ್ಷ ಡಾ. ಬಿ.ವಿ. ವಸಂತಕುಮಾರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜಗಜಂಪಿ, ಸ್ವಾಗತ ಸಮಿತಿ ಸಂಚಾಲಕ ಬಿ.ಎನ್. ಚಿಕ್ಕನಗೌಡರ ಮೊದಲಾದವರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.