ಕೌಜಲಗಿ ತಾಲೂಕು ರಚನೆಗೆ ಒತ್ತಾಯಿಸಿ ಮನವಿ
ಗೋಕಾಕ: ತಾಲೂಕಿನ ಕೌಜಲಗಿ ಹೋಬಳಿಯನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ನಿಯೋಜಿತ ಕೌಜಲಗಿ ತಾಲೂಕು ರಚನಾ ಹೋರಾಟ ಚಾಲನಾ ಸಮಿತಿ ಪದಾಧಿಕಾರಿಗಳು ಬುಧವಾರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
200 ಕ್ಕೂ ಹೆಚ್ಚು ಸದಸ್ಯರ ನಿಯೋಗ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸುವಂತೆ ಮನವಿ ಮಾಡಿದೆ.
1973ರಿಂದ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಕಳೆದ 40 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವ ಕೌಜಲಗಿಗೆ ತಾಲೂಕು ಸ್ಥಾನ ಸಿಕ್ಕಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗೋಕಾಕ ತಾಲ್ಲೂಕಿನಲ್ಲಿಯೇ ದೊಡ್ಡ ಪಟ್ಟಣವಾಗಿರುವ ಕೌಜಲಗಿ ತಾಲೂಕು ಸ್ಥಳಕ್ಕೆ ಅರ್ಹವಾಗಿದೆ. ಈ ಹಿಂದೆ ಸರ್ಕಾರಗಳು ನೇಮಿಸಿದ್ದ ವಾಸುದೇವರಾವ್, ಹುಂಡೇಕರ್, ಗದ್ದಿಗೌಡರ್ ಹಾಗೂ ಚಿರಂಜೀವಿ ಸಿಂಗ್ ನೇತೃತ್ವದ ತಾಲೂಕು ಪುನರ್ ವಿಂಗಡನಾ ಸಮಿತಿಗಳು ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸುವುದು ಸೂಕ್ತ ಎಂದು ಆಗಿನ ಸರ್ಕಾರಗಳಿಗೆ ಶಿಫಾರಸ್ಸು ಮಾಡಿದ್ದವು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ತಾಲೂಕು ರಚನೆ ಬಗ್ಗೆ ಪರಿಶೀಲಿಸುವದಾಗಿ ಭರವಸೆ ನೀಡಿದರು. ಸಮಿತಿ ಅಧ್ಯಕ್ಷ ಮಹದೇವಪ್ಪ ಭೋವಿ, ಕಾರ್ಯಾಧ್ಯಕ್ಷ ಅಶೋಕ್ ಪಾರುಶೆಟ್ಟಿ, ಪ್ರ. ಕಾರ್ಯದರ್ಶಿ ಡಾ. ರಾಜೇಂದ್ರ ಸಣ್ಣಕ್ಕಿ, ಜಿಪಂ ಸದಸ್ಯರಾದ ಪರಮೇಶ್ವರ ಹೊಸಮನಿ, ವಾಸುದೇವ್ ಸೇವತಿಕಾಯಿ, ಗೋವಿಂದ ಕೊಪ್ಪದ, ಮಾಜಿ ಜಿಪಂ ಸದಸ್ಯರಾದ ರಂಗಪ್ಪ ಇಟ್ಟಣ್ಣವರ, ಮುಖಂಡರಾದ ಎಂ.ಐ. ನೀಲನ್ನವರ, ನಾರಾಯಣ ಅರಮನಿ, ಶಿವಾನಂದ ಲೋಕಣ್ಣವರ, ಈಶ್ವರ ಕತ್ತಿ, ಬಸನಗೌಡ ಪಾಟೀಲ, ಸುಭಾಸ್ ಹಾವಾಡಿ, ರಾಮಯ್ಯ ಮಠದ, ಪ್ರಕಾಶೆ ಮಾವಿನತೋಟ್, ಅಡಿವೆಪ್ಪ ದಳವಾಯಿ, ರಂಜಾನ್ ಮುಲ್ತಾನಿ, ರಾಮಣ್ಣ ಮಹಾರೆಡ್ಡಿ, ಮಕ್ತುಂಸಾಬ ಖಾಜಿ, ಹನುಮಂತ ಅಳಗೋಡಿ, ಕರೆಪ್ಪ ಬಿಸಗುಪ್ಪಿ, ಕೌಜಲಗಿ ಹೋಬಳಿ ಮಟ್ಟದ ಮುಖಂಡರು ನಿಯೋಗದಲ್ಲಿ ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.