ವಾರ್ಡ್ ಮತದಾರರ ಪಟ್ಟಿಯಲ್ಲಿ ಉಮಾಶ್ರೀ ಹೆಸರು ಮಾಯ
ರಬಕವಿ: ನಗರಸಭೆ ಚುನಾವಣೆಗೆ ನಗರದ ವಾರ್ಡ್ ನಂ. 28ರ ಮತದಾರರ ಪಟ್ಟಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉಮಾಶ್ರೀ ಹೆಸರು ನಾಪತ್ತೆಯಾಗಿತ್ತು.
ಉಮಾಶ್ರೀ 28ನೇ ವಾರ್ಡಿನ ನಿವಾಸಿಯಾಗಿದ್ದಾರೆ. ಮತದಾನ ಮಾಡಲು ಉಮಾಶ್ರೀ ಮತಗಟ್ಟೆಗೆ ಆಗಮಿಸಿದರೆ ಅವರು ಮತದಾರರ ಪಟ್ಟಿಯಲ್ಲಿ ಇರಲಿಲ್ಲ. ಚುನಾವಣಾಧಿಕಾರಿಗಳು ನೀಡಿದ ಮತದಾರರ ಪಟ್ಟಿಯ ಆಧಾರದಡಿ ಮತ ಚಲಾಯಿಸಲು ಮತಗಟ್ಟೆಗೆ ತೆರಳಿದರೆ, ಅಲ್ಲಿ ಅವರ ಹೆಸರೇ ನಾಪತ್ತೆಯಾಗಿತ್ತು.
ಉಮಾಶ್ರೀ ಚುನಾವಣಾಧಿಕಾರಿಗಳಿಂದ ಪಡೆದಿದ್ದ ಮತದಾರರ ಪಟ್ಟಿಯಲ್ಲೂ 28ನೇ ವಾರ್ಡ್ ಎಂದು ನಮೂದಾಗಿತ್ತು. ಈ ವಾರ್ಡಿಗೆ ಮೂರು ಮತಗಟ್ಟೆಗಳಿರುವುದರಿಂದ ಎಲ್ಲ ಮೂರು ಕೇಂದ್ರಗಳಲ್ಲೂ ಉಮಾಶ್ರೀ ಹೆಸರು ಪರಿಶೀಲಿಸಿದರೂ ಅವರ ಹೆಸರು ಪತ್ತೆಯಾಗಲಿಲ್ಲ.
ಈ ಬಗ್ಗೆ ಚುವಾವಣೆ ಅಧಿಕಾರಿಯೂ ಆಗಿರುವ ತಹಸೀಲ್ದಾರ ಗುರುಬಸಪ್ಪ ಮೇತ್ರಿ ಅವರನ್ನು ಸಂಪರ್ಕಿಸಿ, ಮಾಹಿತಿ ತಪ್ಪಾಗಿರುವ ಮತ್ತು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರದ ಬಗ್ಗೆ ಪ್ರಶ್ನಿಸಿದರು.
ತಹಸೀಲ್ದಾರ ಪರಿಶೀಲಿಸಿ ತಿಳಿಸುವ ಭರವಸೆ ನೀಡಿದರು. ಸಮಯ ಕಳೆಯುತ್ತಾ ಬಂದರೂ ತಹಸೀಲ್ದಾರ್ ಅವರಿಂದ ಉತ್ತರ ಬಾರದಾದಾಗ, ವಾರ್ಡ್ ನಂ. 28ರಿಂದ ಮುಂದಿನ ಎಲ್ಲ ಮೂರು ವಾರ್ಡ್ಗಳಲ್ಲಿನ ಮತದಾರರ ಪಟ್ಟಿ ಪರಿಶೀಲಿಸಲು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ನೀಲಕಂಠ ಮುತ್ತೂರ, ತೇರದಾಳ ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ಅಶೋಕ ಉಳ್ಳಾಗಡ್ಡಿ, ಧರೆಪ್ಪ ಉಳ್ಳಾಗಡ್ಡಿ ನಿರ್ಧರಿಸಿದರು.
ಪರಿಶೀಲನೆ ನಂತರ ರಬಕವಿಯ ವಾರ್ಡ್ ನಂ. 30ರ ಪಶ್ಚಿಮ ಭಾಗದ ಮತಗಟ್ಟೆಯಲ್ಲಿ ಉಮಾಶ್ರೀ ಹೆಸರು ದಾಖಲಾಗಿರುವುದು ಕಂಡು ಬಂತು.ಬೂತ್ನಿಂದ ಬೂತ್ಗೆ ಅಲೆದು ಬಸವಳಿದಿದ್ದ ಕಾಂಗ್ರೆಸ್ ನಾಯಕಿ ಮತದಾನ ಮಾಡಿ ವಿಜಯದ ನಗೆ ಬೀರಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.