ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಳಗಾವಿ

ಎಲ್ಲರ ಚಿತ್ತ ಪಾಲಿಕೆ ಮೇಯರ್ ಚುನಾವಣೆಯತ್ತ

Parashurama
Updated On : 17 Mar 2013, 12:37 pm

ಬೆಳಗಾವಿ:  ನಾಡದ್ರೋಹಿ, ಕನ್ನಡ ವಿರೋಧಿ ಎಂಇಎಸ್‌ಗೆ ಕೊನೆಗೂ ಜ್ಞಾನೋದಯವಾದಂತಿದೆ. ಸದಾ ಬೆಳಗಾವಿಯ ಅಭಿವೃದ್ಧಿಗೆ ಅಡ್ಡಗಾಲಾಗುತ್ತಿದ್ದ ಕೇವಲ ಭಾಷೆ, ಗಡಿ ವಿಚಾರವನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದ ಎಂಇಎಸ್ ಇದೀಗ ಅಭಿವೃದ್ಧಿಯ ಮಾತನಾಡುತ್ತಿದೆ. ಕನ್ನಡ, ಉರ್ದು ಭಾಷಿಕರಿಗೂ ಗೌರವ ನೀಡುವ ಹೇಳಿಕೆ ನೀಡುತ್ತಿದೆ. ಅಷ್ಟರ ಮಟ್ಟಿಗೆ ಮಹಾನಗರ ಪಾಲಿಕೆ ಚುನಾವಣೆ ಎಂಇಎಸ್‌ನಲ್ಲಿ ಬದಲಾವಣೆ ಮಾಡಿದೆ.
ಹೌದು ಇತ್ತೀಚಿಗೆ ನಡೆದ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ (ಸೀಮಾ ಸಂಗ್ರಾಮ ಸಮಿತಿ) ಗೆದ್ದಿದ್ದು ಕೇವಲ 3 ಸ್ಥಾನ ಮಾತ್ರ. ಇದೀಗ ಜಯ ದಾಖಲಿಸಿರುವ ಮರಾಠಿ ಭಾಷಿಕರೂ ಎಂಇಎಸ್‌ನ್ನು ಕ್ಯಾರೆ ನ್ನುತ್ತಿಲ್ಲ. ಎಂಇಎಸ್ ಸಲಹೆ, ಸೂಚನೆ ಕೇಳುತ್ತಿಲ್ಲ. ಅದು ಅವರನ್ನು ಕಂಗಾಲು ಮಾಡಿದ್ದು, ಎಲ್ಲಿ ಎಂಇಎಸ್ ಐಸೋಲೇಟ್ ಆಗಿಬಿಡಬಹದೇ ಎಂಬ ಆತಂಕದಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ, ಕನ್ನಡ, ಉರ್ದು ಭಾಷಿಕರಿಗೂ ಗೌರವ ಕೊಡುವ, ಅಭಿವೃದ್ಧಿಯ ಮಾತನಾಡುತ್ತಿದೆ.
ಈ ಬಾರಿಯ ಪಾಲಿಕೆ ಫಲಿತಾಂಶ ಎಂಇಎಸ್‌ಗೆ ಸಂಭ್ರಮ ತಂದಿಲ್ಲ. ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವಿಜೇತ ಮರಾಠಿ ಭಾಷಿಕ ಸದಸ್ಯರ ಸಭೆ ಕರೆದು ಅವರನ್ನೆಲ್ಲ ಭಾವನಾತ್ಮಕವಾಗಿ, ಭಾಷೆ, ಗಡಿ ವಿವಾದದ ಹೆಸರಿನಲ್ಲಿ ಒಂದುಗೂಡಿಸುವ ಕೆಲಸ ಎಂಇಎಸ್ ಮಾಡಿತ್ತು. ಆದರೆ ಮರಾಠಿ ಭಾಷಿಕ ನೂತನ ಸದಸ್ಯರ ಸಭೆಯಲ್ಲೇ ಎಂಇಎಸ್‌ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಅಭಿವೃದ್ಧಿಯತ್ತ ಚಿಂತಿಸುವಂತೆ ಸಲಹೆ ನೀಡಲಾಗಿದೆ. ಮಹಾನಗರದ ಅಭಿವೃದ್ಧಿಗೆ 200 ಕೋಟಿ ವಿಶೇಷ ಅನುದಾನ ನೀಡಿದ ಸರ್ಕಾರದ ಕ್ರಮ ಸ್ವಾಗತಿಸುವಂತೆ ಇನ್ನೂ ಹೆಚ್ಚಿನ ಅನುದಾನ ಕೋರಿ ಬೆಳಗಾವಿ ಅಭಿವೃದ್ಧಿಗೆ ಸಹಕರಿಸುವಂತೆ ಮರಾಠಿ ಸದಸ್ಯರೇ ತಿಳಿ ಹೇಳಿದ್ದಾರೆ.
ಎಂಇಎಸ್ ಸದಸ್ಯರ ವಿರುದ್ಧವೇ ಸ್ಪರ್ಧಿಸಿ ಜಯ ದಾಖಲಿಸಿದ ಮರಾಠಿ ಭಾಷಿಕ ಸದಸ್ಯರಂತೂ ಎಂಇಎಸ್‌ನ್ನು ಅಸ್ಪಶ್ಯರಂತೆ ನೋಡಿದ್ದಾರೆ. ಭಾಷೆ, ಗಡಿ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುವುದಾದಲ್ಲಿ ಯಾವುದೇ ಬೆಂಬಲ ನೀಡುವುದಿಲ್ಲ ಎಂದು ನಿಷ್ಠುರವಾಗಿಯೂ ಹೇಳಿದ್ದಾರೆ.
ಈ ಎಲ್ಲ ಬೆಳವಣಿಗೆಯಿಂದ ದಿಗಿಲುಗೊಂಡ ಎಂಇಎಸ್‌ನ ಮುಖವಾಣಿ, ಎಂಇಎಸ್ ಥಿಂಕ್‌ಟ್ಯಾಂಕ್ ಎಂದೇ ಬಿಂಬಿತವಾಗಿರುವ ಪತ್ರಿಕೆಯೊಂದು ಅಭಿವೃಧ್ಧಿಯ ವಿಚಾರವಾಗಿ ಮಾತನಾಡಿದೆ. ಕನ್ನಡ, ಉರ್ದು ಭಾಷಿಕರಿಗೂ ಸಮಾನ ಗೌರವ ನೀಡುವುದಾಗಿ ಹೇಳಿಕೊಂಡಿದೆ.
ಇದು ಎಂಇಎಸ್‌ನಲ್ಲಿ ಆಗಿರುವ ಅರ್ಥಪೂರ್ಣ ಬದಲಾವಣೆ. ಎಂಇಎಸ್ ನಾಯಕರೂ ಸಹ ಪರಿಸ್ಥಿತಿ ಅರಿತುಕೊಂಡು ಭಾಷೆ, ಗಡಿ ವಿವಾದವನ್ನು ಹೆಚ್ಚಾಗಿ ಪ್ರಸ್ತಾಪಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲೇ ಎಂಇಎಸ್ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಸೌಮ್ಯವಾದಿ ಮರಾಠಿಗರು ಸ್ಪಷ್ಟವಾಗಿಯೇ ಇದನ್ನು ವಿರೋಧಿಸಿದ್ದರಲ್ಲದೇ, ಪರ್ಯಾಯ ಅಭ್ಯರ್ಥಿ ಕಣಕ್ಕಿಳಿಸುವ ಎಚ್ಚರಿಕೆ ನೀಡಿದ್ದರು.
ಇದರಿಂದ ಅಂಜಿದ ಎಂಇಎಸ್ ಸೀಮಾ ಸಂಗ್ರಾಮ ಸಮಿತಿ ಹೆಸರಿನಲ್ಲಿ ಸ್ಪರ್ಧಿಸಿತ್ತು. ಅಲ್ಲಿಯೂ ತೀವ್ರ ಮುಖಭಂಗ ಅನುಭವಿಸಿತ್ತು. ಸಮಿತಿಯ ಕೇವಲ 3 ಅಭ್ಯರ್ಥಿಗಳು ಮಾತ್ರ ಜಯಿಸಿದ್ದರು. ಹಲವೆಡೆ ಸಮಿತಿ ಅಭ್ಯರ್ಥಿ ವಿರುದ್ಧ ಮರಾಠಿ ಭಾಷಿಕರೇ ಗೆದ್ದಿದ್ದಾರೆ. ಇವೆಲ್ಲ ಝಾಪಾಗಳಿಗೆ ತೀವ್ರ ಮುಖಭಂಗವನ್ನುಂಟು ಮಾಡಿತ್ತು. ಇದೀಗ ಎಂಇಎಸ್ ಸಹ ಭಾಷೆ, ಗಡಿ ವಿವಾದದಿಂದ ಹೊರ ಬಂದು ಅಭಿವೃದ್ಧಿಯ ಮಾತನಾಡುತ್ತಿದೆ.
ಮೇಯರ್ ಚುನಾವಣೆಯತ್ತ ಚಿತ್ತ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ನೂತನ ಮೇಯರ್ ಆಯ್ಕೆಯ ಸುತ್ತ ಎಲ್ಲ ದೃಷ್ಟಿ ನೆಟ್ಟಿದೆ. ಪಾಲಿಕೆ ಚುನಾವಣೆ ಫಲಿತಾಂಶ ಹೊರಬಿದ್ದ ಎರಡು ದಿನ ಎರಡೂ ಪಾಳೆಯದಲ್ಲಿ ತ್ವರಿತ ರಾಜಕೀಯ ಚಟುವಟಿಕೆ ನಡೆದಿದ್ದವು. ಇದೀಗ ಮೇಯರ್ ಚುನಾವಣೆ ಮೀಸಲಾತಿ, ದಿನಾಂಕ ಪ್ರಕಟವಾಗುವುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.
ಪಾಲಿಕೆಯ 58 ವಾರ್ಡ್‌ಗಳಲ್ಲಿ ಕನ್ನಡಿಗರು 22 ಹಾಗೂ ಉರ್ದು ಭಾಷಿಕರು 6 ಸ್ಥಾನ ಗೆದ್ದಿದ್ದಾರೆ. 30 ಸ್ಥಾನಗಳಲ್ಲಿ ಮರಾಠಿ ಭಾಷಿಕರು ಜಯ ಸಾಧಿಸಿದ್ದಾರೆ. (ಸೀಮಾ ಸಂಗ್ರಾಮ ಸಮಿತಿಯಿಂದ ಗೆದ್ದವರು ಕೇವಲ 3). ಈ ಬಾರಿ ಪಾಲಿಕೆಗೆ ಗೆದ್ದವರಲ್ಲಿ ಶೇ.70 ರಷ್ಟು ಹೊಸ ಮುಖ. ಗಡಿ ವಿವಾದ, ರಾಜ್ಯ ವಿರೋಧಿ ನಿಲುವು, ಕನ್ನಡಿಗರ ಬಗ್ಗೆ ತಾತ್ಸಾರ ಮನೋಭಾವನೆ ತಾಳಿದ್ದ ಮರಾಠಿ ಭಾಷಿಕ ಪ್ರಮುಖರನ್ನು ಮತದಾರ ಸೋಲಿಸಿದ್ದಾನೆ. ಅದೇ ರೀತಿ ಕನ್ನಡಿಗರಾಗಿ, ಕನ್ನಡಪರ ಮತದಾರರಿಂದ ಗೆದ್ದು ಬಳಿಕ ಎಂಇಎಸ್ ಅಭ್ಯರ್ಥಿ ಮೇಯರಾಗಲು ನೆರವು ನೀಡಿದ ಮೂವರು ಕನ್ನಡ ದ್ರೋಹಿಗಳಿಗೂ ಮತದಾರ ತಕ್ಕ ಪಾಠ ಕಲಿಸಿದ್ದಾನೆ. ಇದೆಲ್ಲ ಗೆದ್ದ ಅಭ್ಯರ್ಥಿಗಳಲ್ಲಿ ಹೊಸ ಚಿಂತನೆ, ಆಲೋಚನೆಗೆ ಅವಕಾಶ ಮಾಡಿಕೊಟ್ಟಿದೆ.
ಈ ಮಧ್ಯೆ ಮೇಯರ್, ಉಪ ಮೇಯರ್ ಚುನಾವಣೆ ವಿಳಂಬವಾಗಲಿದೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆ ವೇಳಾಪಟ್ಟಿ ಇನ್ನೆರಡು ದಿನದಲ್ಲಿ ಪ್ರಕಟವಾಗುವ ಸಾಧ್ಯತೆ ಇದ್ದು, ಬಳಿಕವೇ ಮೇಯರ್ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ನಗರಾಭಿವೃದ್ಧಿ ಇಲಾಖೆ ಮೀಸಲಾತಿ ಪ್ರಕಟಿಸಬೇಕಾಗಿದೆ.
2007ರಲ್ಲಿ ಮೇಯರ್, ಉಪಮೇಯರ್ ಆಯ್ಕೆ ಪಾಲಿಕೆ ಚುನಾವಣೆ ನಡೆದ 5 ತಿಂಗಳ ಬಳಿಕ         ನಡೆದಿತ್ತು. ಸೆಪ್ಟಂಬರ್ ತಿಂಗಳಲ್ಲಿ ಚುನಾವಣೆ ನಡೆದಿದ್ದರೂ  ಮಾರ್ಚ್ 2ರಂದು ಮೇಯರ್ ಚುನಾವಣೆ ನಡೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments