ಅಂಬೇಡ್ಕರ್ ಚಿತ್ರವಿರುವ ತಟ್ಟೆ ಬಳಕೆ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 29
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ರ ಭಾವಚಿತ್ರಕ್ಕೆ ಅವಮಾನಗೊಳಿಸಿರುವುದನ್ನು ಖಂಡಿಸಿ ಸ್ಥಳೀಯ ದಲಿತಪರ ಸಂಘಟನೆಗಳು ಸೋಮವಾರ ರಾತ್ರಿ ನಗರದಲ್ಲಿ ಪ್ರತಿಭಟನೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿವೆ.
ನಗರದ ರೇಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸಾಲಿಟೇರ್ ರಾಯಲ್ ಇನ್ಸ್ ಹೋಟೆಲ್ ಅಂಡ್ ರೆಸಾರ್ಟ್ಸ್ನ ನವರುಚಿ ಹೋಟೆಲ್ವೊಂದರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ರ ಭಾವಚಿತ್ರವನ್ನು ಹೊಂದಿರುವ ಕಾಗದದ ತಟ್ಟೆಗಳಲ್ಲಿ ಉಪಾಹಾರ ಹಾಕಿ ಕೊಡುತ್ತಿದ್ದು, ತಿಂದ ನಂತರ ಅಂಬೇಡ್ಕರ್ ಭಾವಚಿತ್ರವಿರುವ ತಟ್ಟೆಯನ್ನು ಕಸದ ತೊಟ್ಟೆಗೆ ಹಾಕಲಾಗುತ್ತದೆ. ಅಂಬೇಡ್ಕರ್ ಭಾವಚಿತ್ರವಿರುವ ತಟ್ಟೆ ಬಳಕೆ ಸರಿಯಲ್ಲ. ಅಂಬೇಡ್ಕರ್ ಭಾವಚಿತ್ರವಿರುವ ತಟ್ಟೆಗಳನ್ನು ಮುದ್ರಿಸಿರುವುದು, ಅಂತಹ ಪ್ಲೇಟ್ಗಳನ್ನು ಹೋಟೆಲ್ನಲ್ಲಿ ಬಳಕೆ ಮಾಡುವುದು ತಪ್ಪು. ಹೋಟೆಲ್ ಮಾಲೀಕರನ್ನು ಬಂಧಿಸಬೇಕು ಎಂದು ದಲಿತ ಪರ ಸಂಘಟನೆಗಳು ಒತ್ತಾಯಿಸಿವೆ.
ಅಂಬೇಡ್ಕರ್ರ ಭಾವಚಿತ್ರಕ್ಕೆ ಅವಮಾನ ಮಾಡಿದವರನ್ನು, ಹೋಟೆಲ್ ಮಾಲೀಕರನ್ನು ಬಂಧಿಸಬೇಕು ಮತ್ತು ಹೋಟೆಲ್ನ್ನು ಸೀಜ್ ಮಾಡಬೇಕು ಎಂದು ಒತ್ತಾಯಿಸಿ ನಗರ ಪೊಲೀಸ್ ಠಾಣೆಯಲ್ಲಿ ದಲಿತ ಮುಖಂಡರು ಪ್ರಕರಣ ದಾಖಲಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ವೀರಸ್ವಾಮಿ, ದಲಿತ ಸಂಘಟನೆಯ ಮುಖಂಡರಾದ ಯಂಕಪ್ಪ, ಮೈಶಾಕ್ ಅಂಕಾಲಿ, ಹುಲುಗಪ್ಪ, ಚಿದಾನಂದಪ್ಪ, ಎಚ್. ಶೇಷು, ನಿಂಬುಗಲ್ ರಾಮಕೃಷ್ಣ, ದೇವದಾಸ್, ಪಂಪಾಪತಿ, ಪಾಂಡು, ಶ್ರೀನಿವಾಸ, ತಿಪ್ಪಣ್ಣ ಸೇರಿದಂತೆ ನೂರಾರು ಮುಖಂಡರು ಪ್ರತಿಭಟನೆಯಲ್ಲಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಹೋಟೆಲ್ನ ಇಬ್ಬರನ್ನು ಪೊಲೀಸರು ವಿಚಾರಣೆಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಸಹಾಯಕ ಆಯುಕ್ತ ಡಾ. ಡಿ.ಆರ್. ಅಶೋಕ್, ತಹಸೀಲ್ದಾರ್ ರಮೇಶ್ ಕೋನರಡ್ಡಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಅನಿಲ್ಲಾಡ್ ಪರ ಮತಯಾಚನೆ
ಬಳ್ಳಾರಿ: ಗಣಿ ಉದ್ಯಮಿ ಇಕ್ಬಾಲ್ ಅಹಮದ್ ಹೊತ್ತೂರು ಅವರು ನಗರದ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿ, ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿ ಅನಿಲ್ಲಾಡ್ ಪರವಾಗಿ ಮತಯಾಚಿಸಿದರು. ವಿವಿಧ ವಾರ್ಡ್ಗಳಲ್ಲಿ ಅನಿಲ್ಲಾಡ್ ಪರವಾಗಿ ಮತಯಾಚನೆ ಮಾಡಿದರು. ಕಾಂಗ್ರೆಸ್ ಪಕ್ಷವು ಎಂದಿಗೂ ಮುಸ್ಲಿಂ ಸಮುದಾಯವನ್ನು ಬೆಂಬಲಿಸುತ್ತ ಬಂದಿದೆ. ಇದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು. ಕಾಂಗ್ರೆಸ್ನಿಂದ ಮಾತ್ರ ಮುಸ್ಲಿಂ ಸಮುದಾಯದ ರಕ್ಷಣೆ ಸಾಧ್ಯ ಎಂದರು. ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ಲಾಡ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.
ಸ್ಥಳೀಯ ಮುಖಂಡರ ಕಡೆಗಣನೆ: ಆರೋಪ
ಹೊಸಪೇಟೆ: ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಿ. ವೀರೇಶ್ ಕೆಜೆಪಿ ಸ್ಥಳೀಯ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಕಡೆಗಣಿದ್ದಾರೆ ಎಂದು ಕೆಜೆಪಿ ತಾಲೂಕು ಅಧ್ಯಕ್ಷ ಹೊನ್ನೂರವಲಿ ಸಾಹೇಬ್ ಆರೋಪಿಸಿದರು. ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಜೆಪಿ ಅಭ್ಯರ್ಥಿ ಬಿ. ವೀರೇಶ್ ಪಕ್ಷದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಕೆಜೆಪಿಯವರನ್ನು ಬಿಟ್ಟು ಬೇರೆಯವರನ್ನು ಕರೆದುಕೊಂಡು ಪ್ರಚಾರ ನಡೆಸುತ್ತ ಹಿಟ್ಲರ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕೆಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಚುನಾವಣೆಯಲ್ಲಿ ಹೋರಾಟ ನಡೆಸುತ್ತಿದ್ದರೆ ಇಲ್ಲಿನ ಕೆಜೆಪಿ ಅಭ್ಯರ್ಥಿ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳದೆ ಗ್ರಾಮೀಣ ಪ್ರದೇಶದ ಕೆಲ ಹಳ್ಳಿಗಳಲ್ಲಿ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ. ಹೊಸಪೇಟೆ ನಗರದಲ್ಲಿ ಇಲ್ಲಿವರೆಗೂ ಚುನಾವಣಾ ಪ್ರಚಾರ ನಡೆಸಿಲ್ಲ ಎಂದು ಅವರು ಹೇಳಿದರು. ಕೆಜೆಪಿ ಮುಖಂಡರಾದ ಗುಜ್ಜಲ್ ಹುಲುಗಪ್ಪ, ಮಸ್ತಾನಪ್ಪ, ರಾಧಾ ದೇವಿ, ಇಂಧು, ಎಂ. ಹುಲಿಗಮ್ಮ ಉಪಸ್ಥಿತರಿದ್ದರು.