ಜೆಡಿಎಸ್ ಅಭ್ಯರ್ಥಿಗೆ ಮುಸ್ಲಿಮರ ಬೆಂಬಲ
ಬಳ್ಳಾರಿ: ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿತ್ತು, ಆದರೆ ನೀಡಲಿಲ್ಲ. ಜೆಡಿಎಸ್ ಮುಸ್ಲಿಂ ಸಮುದಾಯದ ಮುನ್ನಭಾಯಿ ಅವರಿಗೆ ಟಿಕೆಟ್ ನೀಡಿದ್ದು, ಮುಸ್ಲಿಂ ಸಮುದಾಯದವರು ಮುನ್ನಾ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ರಾಜ್ಯ ಹಜ್ ಕಮಿಟಿ ಮಾಜಿ ಅಧ್ಯಕ್ಷ ಮಹ್ಮದ್ ಗೌಸ್ (ದಾದಾ) ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಶಕಗಳಿಂದ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ. ಇಕ್ಬಾಲ್ ಅಹಮದ್ ಹೊತ್ತೂರ್ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿತ್ತು ಎಂದು ಹೇಳಿದರು. ಕೇವಲ ಮುಸ್ಲಿಂ ಸಮುದಾಯದವರು ಮಾತ್ರ ಬೆಂಬಲ ಸೂಚಿಸದೆ, ಎಲ್ಲ ಸಮುದಾಯದವರೂ ಜೆಡಿಎಸ್ ಅಭ್ಯರ್ಥಿ ಮುನ್ನಾಭಾಯಿ ಅವರನ್ನು ಬೆಂಬಲಿಸುವಂತೆ ಕೋರಲಾಗುತ್ತದೆ. ಮುನ್ನಾ ಉತ್ತಮ, ಸರಳ ವ್ಯಕ್ತಿ ಎಂದು ಹೇಳಿದರು.
ಜೆಡಿಎಸ್ ಮುಖಂಡ ಮುಂಡ್ರಿಗಿ ನಾಗರಾಜ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ, ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದಾರೆ. ಅವರ ಗಣಿ ಕಂಪನಿ ಪರವಾನಗಿಯನ್ನು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ರಾಜ್ಯಸಭಾ ಸದಸ್ಯರಾಗಿ ಅನಿಲ್ ಲಾಡ್ ಬಳ್ಳಾರಿ ಅಭಿವೃದ್ಧಿಗೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಲ್ಲ. ಅದಕ್ಕಾಗಿ ಜೆಡಿಎಸ್ ಅಭ್ಯರ್ಥಿ ಮುನ್ನಾಭಾಯಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ತಮಗೆ ಬಿಎಸ್ಆರ್ ನೇರ ಸ್ಪರ್ಧಿಯಲ್ಲ. ಕಾಂಗ್ರೆಸ್ ಪಕ್ಷವೇ ನೇರ ಸ್ಪರ್ಧಿ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಜೆಡಿಎಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ ತಮಗಿದೆ ಎಂದು ಮುಂಡ್ರಗಿ ನಾಗರಾಜ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಮುನ್ನಾಭಾಯಿ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಳಮ್ಮ ಬಸವರಾಜ್, ಜಿ. ಗೋವಿಂದರಾಜುಲು, ರಸೂಲ್ಸಾಬ್, ಕಾಸಿಂ ಪಟೇಲ್, ಅಯೂಬ್, ಬಿಸ್ಮಿಲ್ಲಾ ಮಾಬುಸಾಬ್, ರಫೀಕ್, ಅಂಜುಂ, ಮಲ್ಲಿಕಾರ್ಜುನ, ಡಾ. ಶರ್ಮಾ ಇತರರು ಇದ್ದರು.