ಅನಿಲ್ ಲಾಡ್ ಅತ್ತಿಗೆ ವಿರುದ್ಧ ಚಾರ್ಜ್ಶೀಟ್
- ಶಶಿಧರ ಮೇಟಿ
ಕ.ಪ್ರ. ವಾರ್ತೆ ಬಳ್ಳಾರಿ ಆ.1
ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ರೆಸಾರ್ಟ್ ನಿರ್ಮಿಸಿದ್ದಾರೆ ಎಂದು ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರ ಅತ್ತಿಗೆ ರಜನಿ ಎ. ಲಾಡ್ (ಅನಿಲ್ ಲಾಡ್ ಸಹೋದರ ದಿ.ಅಶೋಕ್ ಲಾಡ್ ಪತ್ನಿ) ವಿರುದ್ಧ ಬಳ್ಳಾರಿಯ ಅರಣ್ಯಾಧಿಕಾರಿಗಳು ಸುಮಾರು 10 ಪುಟಗಳ ದೋಷಾರೋಪಣ (ಚಾರ್ಜ್ಶೀಟ್) ಪಟ್ಟಿಯನ್ನು ಸಂಡೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 62 (ಬಿ) ಅಡಿಯಲ್ಲಿ ನೀಡಿದ ಅಧಿಕಾರಿದಡಿಯಲ್ಲಿ ಅರಣ್ಯ ಅಧಿಕಾರಿಗಳು ಈ ಚಾರ್ಜ್ಶೀಟ್ ಸಲ್ಲಿಸಿದ್ದು, ಆ.3ರಿಂದ ವಿಚಾರಣೆ ನಡೆಯಲಿದೆ. 'ಕನ್ನಡಪ್ರಭ'ಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ರಜನಿ 47.24 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಇದು ಅರಣ್ಯ ಕಾಯ್ದೆ 1963ರ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ.
ಹೈಕೋರ್ಟ್ನಲ್ಲಿ ಪಿಐಎಲ್: ಅರಣ್ಯ ಇಲಾಖೆಗೆ ಸಂಬಂಧಿಸಿದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸಂಡೂರು ತಾಲೂಕಿನ ನಾರಿಹಳ್ಳಿಯ ಕೋಲ್ಲಾರಮ್ಮ ದೇವಸ್ಥಾನದ ಸಮೀಪದಲ್ಲಿ ಸರ್ವೆ ನಂ.4 ಮತ್ತು 10ರಲ್ಲಿ 47.24 ಎಕರೆ ಪ್ರದೇಶದಲ್ಲಿ ಅಮೇಜಿಂಗ್ ವ್ಯಾಲಿ ಎಂಬ ರೆಸಾರ್ಟ್ ಸ್ಥಾಪಿಸಿ, ಉದ್ಯಮ ನಡೆಸುತ್ತಿದ್ದರು. ಈ ಕುರಿತು ಅರಣ್ಯ ಒತ್ತುವರಿ ಮಾಡಿಕೊಂಡು, ರೆಸಾರ್ಟ್ ನಿರ್ಮಿಸಿದ್ದಾರೆ ಎಂದು ಆರೋಪಿಸಿ 2011ರಲ್ಲಿ ಹೈಕೋರ್ಟ್ನಲ್ಲಿ (43/825) ಮೈಸೂರಿನ ಸೋಮಶೇಖರ್ ಎಂಬವರು ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಕುರಿತು ಕ್ರಮ ಕೈಗೊಳ್ಳಲು ಬಳ್ಳಾರಿಯ ಅರಣ್ಯ ಇಲಾಖೆಗೆ ನಿರ್ದೇಶಿಸಿದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ರಜನಿ ಎ. ಲಾಡ್ ಅವರ ವಿರುದ್ಧ ಫೆ. 22, 2012ರಂದು ದೂರು ದಾಖಲಿಸಿ, ವಿಚಾರಣೆ ಕೈಗೊಂಡಿದ್ದರು.
ಅರಣ್ಯ, ಕಂದಾಯ ಇಲಾಖೆಯಿಂದ ಜಂಟಿ ಸರ್ವೆ: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೆ ನಡೆಸಿದ್ದು, ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ವಾಸ್ತವ ಸ್ಥಿತಿ ಪತ್ತೆಯಾಗಿದೆ. ಇನ್ನು ಕಂದಾಯ ಇಲಾಖೆ 1998ರಲ್ಲಿ ಇದನ್ನು ಕಂದಾಯ ಭೂಮಿಯೆಂದು ಹೇಳಿ ತಾರಾನಗರ ವ್ಯಾಪ್ತಿಯ ಸರ್ವೆ ನಂ.4 ಮತ್ತು 10ರ 47.24 ಎಕರೆ ಭೂಮಿಗೆ ಎನ್ಒಸಿ ನೀಡಿತ್ತು. ಆದರಿದು ಅರಣ್ಯ ಇಲಾಖೆಗೆ ಸೇರಿದ ಭೂಮಿಯಾಗಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ನೀಡಿರುವ ಎನ್ಒಸಿಯನ್ನು 2012ರ ಮೇನಲ್ಲಿ ಹಿಂಪಡೆದಿದೆ.
10 ಪುಟಗಳ ಚಾರ್ಚ್ಶೀಟ್, 13 ಸಾಕ್ಷಿಗಳ ವಿಚಾರಣೆ: ಬಳ್ಳಾರಿ ಅರಣ್ಯಾಧಿಕಾರಿಗಳು ಜೂ.10ರಂದು ಪ್ರಾಸಿಕ್ಯೂಷನ್ ನಡೆಸುವಂತೆ ಇಲಾಖೆಯ ಕೆಳಗಿನ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ಹಿಂದಿನ ಬಳ್ಳಾರಿಯ ಉಪವಿಭಾಗಾಧಿಕಾರಿ ಶಶಿಕಾಂತ್ ಸೆಂಥಿಲ್, ಸಂಬಂಧಪಟ್ಟ ತಹಸೀಲ್ದಾರ್, ರೇಂಜ್ ಆಫೀಸರ್, ಸರ್ವೆಯರ್, ನಿವೃತ್ತ ತಹಸೀಲ್ದಾರ್, ಗಾರ್ಡ್ಗಳು ಸೇರಿದಂತೆ 13 ಮಂದಿಯನ್ನು ಸಾಕ್ಷಿಯಾಗಿ ಪರಿಗಣಿಸಿ, 10 ಪುಟಗಳ ಚಾರ್ಜ್ಶೀಟ್ನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಜೂನ್ ಅಂತ್ಯದಲ್ಲಿ ಸಂಡೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸಿವಿಲ್ ದಾವೆ ವಿಚಾರಣೆ ಹಂತದಲ್ಲಿ: ಸಂಡೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ದಾವೆ ನಡೆಯುತ್ತಿದ್ದರೆ, ಅರಣ್ಯ ಇಲಾಖೆಯಲ್ಲಿ ಇದೇ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ದಾವೆ ನಡೆಯುತ್ತಿದೆ. ಕರ್ನಾಟಕ ಅರಣ್ಯ ಅಧಿನಿಯಮ 1963 (ತಿದ್ದುಪಡಿ 1998) 64ಎ ಅಡಿಯಲ್ಲಿ ಮೀಸಲು ಅರಣ್ಯ ಭೂಮಿಯನ್ನು ಅನಧಿಕೃತವಾಗಿ ತೆಗೆದುಕೊಳ್ಳಲು ಬರುವುದಿಲ್ಲ. ಕರ್ನಾಟಕ ಅರಣ್ಯ ಅಧಿನಿಯಮ 1963ರ ಕಲಂ 4 ಅಡಿ ಅರಣ್ಯವೆಂದು ಘೋಷಣೆಯಾದ ಬಳಿಕ ಕರ್ನಾಟಕ ಅರಣ್ಯ ಅಧಿನಿಯಮ 1963 ಕಲಂ 6ರ ಅಡಿಯಲ್ಲಿ ಇಂಥ ಪ್ರದೇಶದ ಮೇಲೆ ಯಾರಿಗೂ ಯಾವ ಹಕ್ಕೂ ಇರುವುದಿಲ್ಲ. ಇನ್ನು ರಾಜ್ಯ ಸರ್ಕಾರ ಪೂರ್ವ ಮಂಜೂರಾತಿ ಇಲ್ಲದೆ ಇಂಥ ಅರಣ್ಯ ಭೂಮಿ ವಿಚಾರದಲ್ಲಿ ಯಾವುದೇ ಪಟ್ಟವನ್ನು ಅಥವಾ ಭೋಗದ ಹಕ್ಕನ್ನು ಮಂಜೂರಾತಿ ಮಾಡತಕ್ಕದಲ್ಲ ಎಂಬ ನಿಯಮಗಳನ್ನು ಪರಿಗಣಿಸಲಾಗಿದೆ. ಅಮೇಜಿಂಗ್ ವ್ಯಾಲಿ ರೆಸಾರ್ಟ್ ವಶಪಡಿಸಿಕೊಂಡಿರುವ 47.24 ಎಕರೆ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ನೀಡಲು ಅಧಿಕೃತ ಅಧಿಕಾರಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಬಳ್ಳಾರಿ ಉಪವಿಭಾಗ ನ್ಯಾಯಾಲಯ ನಡುವಳಿಯನ್ನು ಜ. 24, 2013ರಲ್ಲಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಜನಿ ಎ. ಲಾಡ್ ಸಿಸಿಎಫ್ಗೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.