ಕಾರ್ಣಿಕ ಗೊರವಯ್ಯನ ಹೃದಯ ಚಿಕಿತ್ಸೆಗೆ ನೆರವು: ಕೋರಿಕೆ
ಹೂವಿನಹಡಗಲಿ: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ನುಡಿಯುವ ಗೊರವಯ್ಯನಿಗೆ ಪಾರ್ಶ್ವವಾಯು, ಹೃದಯ ಸಂಬಂಧಿ ಖಾಯಿಲೆ, ದಮ್ಮು(ಕ್ಷಯ) ಸೇರಿ ಆರೋಗ್ಯ ಗಂಭೀರ ಸ್ಥಿತಿ ತಲುಪಿದೆ. ನಾಡಿನ ಆಗು ಹೋಗುಗಳ ಕುರಿತು ಭವಿಷ್ಯ ನುಡಿಯುವ ಗೊರವಯ್ಯನ ಭವಿಷ್ಯವೇ ಅತಂತ್ರದಲ್ಲಿದ್ದು ಚಿಕಿತ್ಸೆ ಪಡೆಯಲು ಹಣವಿಲ್ಲದೆ ದಿಕ್ಕು ಕಾಣದಂತಾಗಿದೆ. ಕಾರ್ಣಿಕ ನುಡಿಯುವ ಮೈಲಾರದ ಮಾಲತೇಶ ಮಲ್ಲಪ್ಪ ಕಾರ್ಣಿಕದ ಕಳೆದೊಂದು ವಾರದಿಂದ ಪಾರ್ಶ್ವವಾಯು ಹಾಗೂ ಹೃದಯ ಸಂಬಂಧಿ ಖಾಯಿಲೆಗೆ ಒಳಗಾಗಿದ್ದು, ಸದ್ಯ ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖನಾಗಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲು ಮಾಡಲು ಮುಂದಾದ ಆತನ ಕುಟುಂಬ ಸದಸ್ಯರು ಕೈಯಲ್ಲಿ ಕಾಸಿಲ್ಲದೆ ದಿಕ್ಕು ತೋಚದಂತಾಗಿದ್ದಾರೆ. ಚಿಕಿತ್ಸೆಗಾಗಿ ಧನ ಸಹಾಯ ಮಾಡುವವರು ಮೈಲಾರ ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಎಸ್‌ಬಿ ಖಾತೆ ಸಂಖ್ಯೆ 10763100503242 ಐಋಖ ್ಛ್ಟಜಜ-ಈಃಖಇ 000ಕಿಎಇ1ಗೆ ಹಣ ಜಮಾ ಮಾಡಬಹುದು. ಅಥವಾ 99012 13237, 99024 95396ಗೆ ಸಂಪರ್ಕಿಸಬಹುದು.
ಗಂಡು ಚಿರತೆ ಸೆರೆ
ಗಂಗಾವತಿ: ತಾಲೂಕಿನ ದೇವಾಲಪುರ ಬಳಿ ಗಂಡು ಚಿರತೆ ಸೆರೆ ಸಿಕ್ಕಿದೆ. 15 ದಿನಗಳಿಂದ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯಲು ಬಲೆ ಬೀಸಿತ್ತು. 7 ವರ್ಷದ ಗಂಡು ಚಿರತೆಯಿಂದಾಗಿ ಗದ್ದೆ ಕೆಲಸಕ್ಕೆ ಹೋಗುವವರು ಭಯಭೀತರಾಗಿದ್ದರು. ಗುಡ್ಡಗಾಡು ಪ್ರದೇಶವಾಗಿದ್ದ ದೇವಾಪುರ, ಗೌರಿಪುರ, ಕರಡಿಗುಡ್ಡ, ಮುಸ್ಲಾಪುರ, ಕನ್ನೇರಮಡುವು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಈ ಚಿರತೆ ನಿರ್ಭಯವಾಗಿ ತಿರುಗಾಡುತ್ತಿದ್ದು, ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಇಲಾಖೆ ಸಿಬ್ಬಂದಿ 15 ದಿನಗಳಿಂದ ಬೋನ್ ಹಾಕಿ ಚಿರತೆ ಸೆರೆಗೆ ಕಾದಿದ್ದರು. ಬುಧವಾರ ಬೆಳಗಿನ ಜಾವ 5.30ರ ಸುಮಾರಿಗೆ ಚಿರತೆ ಬಲೆಗೆ ಬಿದ್ದ ಸುದ್ದಿ ತಿಳಿಯುತ್ತಲೇ ಅರಣ್ಯ ಇಲಾಖೆಯವರು ಧಾವಿಸಿ ವಡ್ಡರಹಟ್ಟಿ ಅರಣ್ಯ ಇಲಾಖೆಗೆ ತಂದಿದ್ದಾರೆ. ನಂತರ ಜಿಲ್ಲಾ ಅರಣ್ಯಾಧಿಕಾರಿ ಸೂಚನೆ ಮೇರೆಗೆ ದಾಂಡೇಲಿ ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ಅರಣ್ಯಾಧಿಕಾರಿ ಗುರುನಗೌಡ ತಿಳಿಸಿದ್ದಾರೆ.
ಸಿಎಂ ಜನತಾದರ್ಶನ 27ರಿಂದ ಮತ್ತೆ ಆರಂಭ
ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಮತ್ತು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮುಖ್ಯಮಂತ್ರಿಯವರ ಜನತಾದರ್ಶನ ಆ.27ರಿಂದ ಮತ್ತೆ ಆರಂಭವಾಗಲಿದೆ. ಪ್ರತಿ ಮಂಗಳವಾರ ಬೆಳಗ್ಗೆ 9ರಿಂದ 12 ಗಂಟೆವರೆಗೆ ಜನತಾ ದರ್ಶನ ನಡೆಯಲಿದೆ ಎಂದು ಮುಖ್ಯಮಂತ್ರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.