ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗಣಿ ಸದ್ದಿಗೆ ಸಿಇಸಿ ಗ್ರೀನ್ ಸಿಗ್ನಲ್

Srinivasa Murthy VN
Updated On : 22 Aug 2013, 1:31 am

- ಶಶಿಧರ ಮೇಟಿ
ಬಳ್ಳಾರಿ:
ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಕೇವಲ ವಿವಾದ, ಶಾಕ್ ಸುದ್ದಿಗಳನ್ನೇ ಕೇಳಿ ಹೌಹಾರಿದ್ದ ಗಣಿ ಮಾಲೀಕರಿಗೊಂದು ಸಿಹಿ ಸುದ್ದಿ ಬಂದಿದೆ. ಕಾನೂನಾತ್ಮಕವಾಗಿ, ಆರ್ ಆ್ಯಂಡ್ ಆರ್ ನಿಯಮಗಳನ್ನು ಅನ್ವಯಿಸಿ ಹೊಸ ಗಣಿ ಗುತ್ತಿಗೆ ನೀಡಲು ಸಿಇಸಿ ಹಸಿರು ನಿಶಾನೆ ತೋರಿಸಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಸಿಇಸಿಯು (ಕೇಂದ್ರ ಉನ್ನತಾಧಿಕಾರ ಸಮಿತಿ) ಜು.18ರಂದು ಬರೆದ ಪತ್ರದಲ್ಲಿ ಗಣಿಗಾರಿಕೆ ಆರಂಭದ ಕುರಿತು ಮಾಹಿತಿ ರವಾನಿಸಿದ್ದು, ಸಿಇಸಿಯು ಡಿಎಂಜಿಗೆ ಬರೆದ ಪತ್ರದ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
ಈ ಹಿಂದಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ, ಮ್ಯಾನಿಟರಿಂಗ್ ಕಮಿಟಿಯ ಸಂಚಾಲಕ ಎಚ್.ಆರ್. ಶ್ರೀನಿವಾಸ್ ಅವರು (ಈ ವರ್ಷದ ಜುಲೈ ಕೊನೆಯಲ್ಲಿ ಶ್ರೀನಿವಾಸ್ ವರ್ಗಾವಣೆಯಾಗಿದ್ದಾರೆ) 2013, ಮೇ 31ರಂದು ಕೇಂದ್ರ ಉನ್ನತಾಧಿಕಾರ ಸಮಿತಿಗೆ ಪತ್ರ ಬರೆದು, ಹೊಸದಾಗಿ ಗಣಿ ಗುತ್ತಿಗೆ ನೀಡಬಾರದು ಎಂದು ತಿಳಿಸಿದ್ದರು. ಇದು ಗಣಿ ಮಾಲೀಕರ ಅಸಮಾಧಾನಕ್ಕೂ ಕಾರಣವಾಗಿತ್ತು. ಆದರೆ, ಶ್ರೀನಿವಾಸ್ ಅವರ ಪತ್ರಕ್ಕೆ 2013, ಜು.18ರಂದು ಕೇಂದ್ರ ಉನ್ನತಾಧಿಕಾರ ಸಮಿತಿಯ ಸದಸ್ಯ ಕಾರ್ಯದರ್ಶಿ ಎಂ.ಕೆ. ಜೀವ್ರಾಜ್ಕ ಅವರು ಮರುಪತ್ರ ಬರೆದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೊಸ ಗಣಿ ಗುತ್ತಿಗೆಯನ್ನು ಕಾನೂನಿನಡಿಯಲ್ಲಿ ಪರವಾನಗಿ ನೀಡಬಹುದು ಎಂದು ತಿಳಿಸಿದ್ದಾರೆ.
ಸಿಇಸಿ ಬರೆದ ಪತ್ರದಲ್ಲಿ ಏನಿದೆ?: ರಿಟ್ ಪಿಟಿಷನ್ (ನಂ.562/2009) ಪ್ರಕಾರ ಹೊಸ ಗಣಿ ಗುತ್ತಿಗೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು. ಈ ಆದೇಶ 2012, ನ.2ರವರೆಗೆ ಜಾರಿಯಲ್ಲಿತ್ತು. ಸುಪ್ರೀಂ ಕೋರ್ಟ್ 2013, ಏ.18ರಂದು ಮತ್ತೊಂದು ಆದೇಶ ಹೊರಡಿಸಿ, ಹೊಸ ಗಣಿ ಗುತ್ತಿಗೆ ಅರ್ಜಿ ಸಲ್ಲಿಸಿರುವವರು ಹಾಗೂ ಹೊಸ ಗಣಿ ಗುತ್ತಿಗೆ ಅರ್ಜಿಗಳನ್ನು ಕಾನೂನಿನಡಿ ಪರಿಗಣಿಸಬೇಕು. ಕಾನೂನು ಪ್ರಕಾರ ಪರವಾನಗಿ ನೀಡಬಹುದು ಎಂದು ಹೇಳಿತು. ಇನ್ನು ಕೇಂದ್ರ ಉನ್ನತಾಧಿಕಾರ ಸಮಿತಿಯು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ, ಆಯಾ ಜಿಲ್ಲೆಗೆ ನೀಡಿರುವ ಒಟ್ಟು ಅದಿರು ಉತ್ಪಾದನೆ, ಗಣಿ ಗುತ್ತಿಗೆ ಆಧಾರದ ಮೇಲೆ ವಾರ್ಷಿಕ ಅದಿರು ಉತ್ಪಾದನೆ ಮತ್ತು ಆರ್ ಆ್ಯಂಡ್ ಆರ್ (ಗಣಿ ಪರಿಸರದ ಪುನಶ್ಚೇತನ ಹಾಗೂ ಪುನರ್ ನಿರ್ಮಾಣ) ನಿಯಮಗಳ ಅಡಿ ಆರ್ ಆ್ಯಂಡ್ ಆರ್‌ನ್ನು ಅನುಷ್ಠಾನಗೊಳಿಸುವ ರೀತಿಯಲ್ಲಿ ಹೊಸ ಗಣಿ ಗುತ್ತಿಗೆಗೆ ಪರವಾನಗಿ ನೀಡಬಹುದು ಎಂಬ ಅಂಶವನ್ನು ಸಿಇಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ನಿಟ್ಟುಸಿರು ಬಿಟ್ಟ ಗಣಿ ಮಾಲೀಕರು: 2-3 ವರ್ಷಗಳಿಂದ ಗಣಿ ಮಾಲೀಕರು ಸಿಬಿಐ, ಸಿಇಸಿ, ಲೋಕಾಯುಕ್ತ ತನಿಖೆಯಿಂದ ಬೇಸತ್ತು ಹೋಗಿದ್ದು, ಇನ್ನು ಮುಂದೆ ಗಣಿಗಾರಿಕೆಯೇ ಮರೀಚಿಕೆ ಎನ್ನುವಂತಾಗಿತ್ತು. ಆದರೆ ಸಿಇಸಿಯು ಎ, ಬಿ, ಸಿ ವರ್ಗೀಕರಣ ಮಾಡುವ ಮೂಲಕ ಎ ಮತ್ತು ಬಿ ಕೆಟಗರಿಯ ಗಣಿಗಾರಿಕೆ ನಡೆಸಲು ಪರವಾನಗಿ ನೀಡಿದ ಬೆನ್ನಲ್ಲೇ, ಇದೀಗ ಹೊಸ ಗಣಿ ಗುತ್ತಿಗೆಗೆ ಕಾನೂನಿನಡಿಯಲ್ಲಿ ಪರವಾನಗಿ ನೀಡಬಹುದು ಎಂಬುದು ನಿಟ್ಟುಸಿರು ಬಿಡುವಂತಾಗಿದೆ.

ಕೇವಲ ಕೈಗಾರಿಕೆಗಳಿಗೆ ಹೊಸ ಗಣಿ ಗುತ್ತಿಗೆ ನೀಡಬೇಕೆಂಬುದು ಸರಿಯಲ್ಲ. ಇದರಿಂದಾಗಿ ಇಡೀ ಗಣಿ ಉದ್ಯಮವೇ ಅವರ ಕೈಯಲ್ಲಿ ಸೇರುತ್ತದೆ. ಕಾನೂನಿನಡಿ ಹೊಸ ಗಣಿ ಗುತ್ತಿಗೆ ನೀಡಬಹುದೆಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಹಾಗೂ ಈ ಕುರಿತು ಸಿಇಸಿ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ. ಈ ಹಿಂದಿನ ಡಿಎಂಜಿ ಅವರ ಹೊಸ ಗಣಿ ಗುತ್ತಿಗೆ ನೀಡಬಾರದು ಎಂಬ ನೀತಿ ಸರಿಯಲ್ಲ.
- ಟಪಾಲ್ ಗಣೇಶ್, ಗಣಿ ಉದ್ಯಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement