ಕುಡಿತಿನಿ ಅಪಘಾತ: ಮೃತರ ಸಂಖ್ಯೆ ಆರಕ್ಕೇರಿಕೆ
ಬಳ್ಳಾರಿ: ಇತ್ತೀಚೆಗೆ ತಾಲೂಕಿನ ಕುಡಿತಿನಿ ಸಮೀಪದಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ ಮೋಹನ್ ಕೋತಿ ಎಂಬ 2ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಮೃತಪಟ್ಟಿದ್ದು, ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಶನಿವಾರ ತಾಲೂಕಿನ ಕುಡಿತಿನಿ ಸಮೀಪ ಕುಡಿತಿನಿಯಿಂದ ಸುಲ್ತಾನಪುರಕ್ಕೆ ಹೋಗುತ್ತಿದ್ದ ಶಾಲಾ ವಾಹನಕ್ಕೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿ ಟಾಟಾ ಏಸ್ ಚಾಲಕ ಹಾಗೂ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದರೆ, ಆಸ್ಪತ್ರೆಯಲ್ಲಿ ಮೂವರು ಮೃತಪಟ್ಟಿದ್ದರು. ಮೋಹನ್ ತಂದೆ ಕೆಪಿಸಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರದು ಮೂಲತಃ ಬಿಜಾಪುರ ಜಿಲ್ಲೆಯ ಆಲಮಟ್ಟಿ.
ಅರ್ಚಕ ನರಸ ರಾಜಭಟ್ ಶೀಘ್ರದಲ್ಲೇ ಬಂಧನ: ಎಸ್ಪಿ
ಮೇಲುಕೋಟೆ: ದೇವಾಲಯದ ಲಕ್ಷಾಂತರ ರು. ಬೆಲೆ ಬಾಳುವ ರತ್ನಾಂಗಿ ಆಭರಣ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಅರ್ಚಕ ನರಸರಾಜಭಟ್ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ತಿಳಿಸಿದರು.
ತಮ್ಮನ್ನು ಭೇಟಿಯಾದ 'ಕನ್ನಡಪ್ರಭ'ಕ್ಕೆ ಈ ಮಾಹಿತಿ ನೀಡಿದ ಜಿಲ್ಲಾ ಎಸ್ಪಿ, ರತ್ನಾಂಗಿ ಆಭರಣದ ಅವ್ಯವಹಾರದ ಸಂಬಂಧ ಸರ್ಕಾರದ ಸೂಚನೆಯಂತೆ ಮೇಲುಕೋಟೆ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಪ್ರಕರಣದ ಉನ್ನತ ತನಿಖೆಯನ್ನು ಡಿಸಿಐಬಿ ಜಿಲ್ಲಾ ಅಪರಾಧ ತನಿಖಾ ದಳದ ಇನ್ಸ್‌ಪೆಕ್ಟರ್‌ಗೆ ವಹಿಸಲಾಗಿದೆ. ತನಿಖೆಯೂ ಈಗ ಪ್ರಗತಿಯಲ್ಲಿದೆ ಎಂದರು. ಜುಲೈ 18ರಂದು ಪ್ರಕರಣ ದಾಖಲಾದ ನಂತರ ಅರ್ಚಕ ನರಸರಾಜಭಟ್ ತಲೆಮರೆಸಿಕೊಂಡಿದ್ದರು. ಜಿಲ್ಲೆಯಲ್ಲಿ ಲೋಕಸಭಾ ಉಪ ಚುನಾವಣೆ ನಡೆಯುತ್ತಿದ್ದ ಕಾರಣಕ್ಕಾಗಿ ಪ್ರಕರಣದ ಬಗ್ಗೆ ಗಮನ ನೀಡಲು ಆಗಿರಲಿಲ್ಲ. ಕೆಳಹಂತದ ಅಧಿಕಾರಿಗಳು ಏನು ಕ್ರಮ ಜರುಗಿಸಲಿಲ್ಲ ಎಂಬುದನ್ನು ಪರಿಶೀಲಿಸಿ, ಆರೋಪಿಯ ಬಂಧನಕ್ಕೆ ಸೂಕ್ತ ಕ್ರಮ ವಹಿಸುತ್ತೇನೆ ಎಸ್ಪಿ ಬೊರೆಸೆ ಎಂದರು.