ಅವೈಜ್ಞಾನಿಕ ಬಜೆಟ್ ಮಂಡನೆ: ಪ್ರಸನ್ನಕುಮಾರ್
ಬಳ್ಳಾರಿ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಿದ ಬಜೆಟ್ ಯಾವುದೇ ವೈಜ್ಞಾನಿಕ ನೆಲೆ ಇಲ್ಲದ ಬಜೆಟಾಗಿದ್ದು, ಇದರಿಂದಾಗಿ ಜನಸಾಮಾನ್ಯರಿಗೆ ಯಾವುದೇ ಲಾಭವಿಲ್ಲ ಎಂದು ಸಿಪಿಎಂನ ರಾಜ್ಯ ಮುಖಂಡ ಎಸ್. ಪ್ರಸನ್ನಕುಮಾರ್ ಆರೋಪಿಸಿದ್ದಾರೆ.
ಶನಿವಾರ ನಗರದ ಗಾಂಧಿ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಉದ್ದೇಶವಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ತಿಳಿಸಿದರು.
ರು. 52,284 ಕೋಟಿ ತೆರಿಗೆಯನ್ನು ರು. 59,638 ಕೋಟಿಗಳಿಗೆ ಏರಿಕೆ ಮಾಡಿದ್ದಾರೆ. ಮಾರಾಟ ತೆರಿಗೆಯಲ್ಲೂ ರು. 28 ಸಾವಿರ ಕೋಟಿಗಳಿಂದ ರು. 33 ಸಾವಿರ ಕೋಟಿಗಳಿಗೆ ಏರಿಸಲಾಗಿದೆ. ಅಬಕಾರಿ ಸುಂಕದಲ್ಲಿ ರು. 4 ಸಾವಿರ ಕೋಟಿಗಳಿಂದ ರು. 12,400 ಕೋಟಿಗಳಿಗೆ ಏರಿಕೆ ಮಾಡಲಾಗಿದೆ. ವಿದ್ಯುತ್ ತೆರಿಗೆಯನ್ನು ರು. 767 ಕೋಟಿಗಳಿಂದ ರು. 825 ಕೋಟಿಗಳಿಗೆ, ಸೇವಾ ತೆರಿಗೆಯನ್ನು ರು. 1490 ಕೋಟಿಗಳಿಂದ ರು. 1775 ಕೋಟಿಗಳಿಗೆ ಏರಿಕೆಯಾಗಿದೆ ಎಂದು ವಿವರಿಸಿದರು.
ಪಕ್ಷದ ಮುಖಂಡ ಆರ್.ಎಸ್.ಬಸವರಾಜ್, ಸತ್ಯಬಾಬು ಇದ್ದರು.
ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಆಹ್ವಾನ
ಹೊಸಪೇಟೆ: ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿ ಅರ್ಭ್ಯ್ಙಗಳು ಫೆ. 19ರೊಳಗೆ ಆಯಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬಳಿ ತಮ್ಮ ಅರ್ಜಿ ಸಲ್ಲಿಸಬೇಕೆಂದು ಬಳ್ಳಾರಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ರವೀಂದ್ರ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಫೆ. 23 ಕೊನೆ ದಿನವಾದ್ದರಿಂದ, ಬಳ್ಳಾರಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ವ್ಯಾಪ್ತಿಯ ಹಡಗಲಿ, ಸಿರುಗುಪ್ಪ, ಕಂಪ್ಲಿ, ಸಂಡೂರು ಪುರಸಭೆ, ಹೊಸಪೇಟೆ ನಗರಸಭೆ ಹಾಗೂ ತೆಕ್ಕಲಕೋಟೆ, ಕಮಲಾಪುರ, ಕೂಡ್ಲಿಗಿ, ಕೊಟ್ಟೂರು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಆಕಾಂಕ್ಷಿಗಳು ಕೂಡಲೇ ಸಂಭಂಧಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬಳಿ ಅರ್ಜಿ ಸಲ್ಲಿಸಬೇಕು. ತದನಂತರದಲ್ಲಿ ಜಿಲ್ಲಾ ಸಮಿತಿ ವತಿಯಿಂದ ಸ್ಥಳೀಯ ಮುಖಂಡರ ಹಾಗೂ ಉಸ್ತುವಾರಿಗಳ ಸಭೆ ಕರೆದು ಅರ್ಭ್ಯ್ಙಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ರವೀಂದ್ರ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿರುವುದು ಬಿಜೆಪಿ, ಕೆಜೆಪಿ, ಬಿಎಸ್ಸಾರ್ ಪಕ್ಷಗಳ ಜಂಟಿ ಸರ್ಕಾರ. ಮೂರು ಪಕ್ಷಗಳು ಆಂತರ್ಯದಲ್ಲಿ ಲೂಟಿ ಸಿದ್ಧಾಂತವನ್ನು ಒಪ್ಪಿಕೊಂಡಿರುವುದರಿಂದ ಜನಸಾಮಾನ್ಯರ ಹಿತ ಕಾಯುವವರೆ ಇಲ್ಲದಂತಿದೆ. ಇದರಿಂದಾಗಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪರಂಪರೆಗಳಿಗೆ ಪೆಟ್ಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ತಪ್ಪತಸ್ಥರಿಗೆ ತಕ್ಕಪಾಠ ಕಲಿಸಬೇಕು ಎಂದು ಮನವಿ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
ಕೊಟ್ಟೂರು: ಕೊಟ್ಟೂರು ಪಟ್ಟಣ ಪಂಚಾಯಿತಿಯ 20 ವಾರ್ಡ್ಗಳಿಗೆ ಮಾ. 7ರಂದು ಚುನಾವಣೆ ನಡೆಯಲಿದ್ದು, ಶನಿವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಕೂಡ್ಲಿಗಿ ತಹಸೀಲ್ದಾರ್ ಜವರೇಗೌಡ ತಿಳಿಸಿದರು.
ಶನಿವಾರ ಚುನಾವಣಾ ಸಿದ್ಧತಾ ಪರಿಶೀಲಿಸಲು ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿ, 1ರಿಂದ 10ನೇ ವಾರ್ಡಿನ ಚುನಾವಣಾಧಿಕಾರಿಯನ್ನಾಗಿ ಲೋಕೋಪಯೋಗಿ ಇಲಾಖೆಯ ಎಇಇ ಸಲೀಂ ಹಲಗೇರಿಯವರನ್ನು, ಸಹಾಯಕ ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಮಂಜುನಾಥ ಕಾರ್ಯನಿರ್ವಹಿಸಿದರೆ, 11 ರಿಂದ 20 ನೇ ವಾರ್ಡ್ಗಳ ಚುನಾವಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಯೋಗೀಶ್ವರ, ಸಹಾಯಕ ಚುನಾವಣಾಧಿಕಾರಿಯಾಗಿ ಎಪಿಎಂಸಿ ಸಹಕಾರ್ಯದರ್ಶಿ ಹುಲುಗಪ್ಪ ಕಾರ್ಯನಿರ್ವಹಿಸಲಿದ್ದಾರೆ.
ಪಪಂ ಸಭಾಭವನದಲ್ಲಿ 1 ರಿಂದ 10 ವಾರ್ಡ್ಗಳ ನಾಮಪತ್ರಗಳನ್ನು ಸ್ವೀಕರಿಸಿದರೆ. 11 ರಿಂದ 20 ವಾರ್ಡ್ಗಳ ನಾಮಪತ್ರಗಳ ಸಲ್ಲಿಕೆಗೆ ಪಪಂ ಅಧ್ಯಕ್ಷರ ಕಾರ್ಯಾಲಯವನ್ನು ನಿಗದಿಗೊಳಿಸಲಾಗಿದೆ. ಬೆಳಗ್ಗೆ 11 ರಿಂದ 3ರ ವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದು ಎಂದರು.
ಮತಕೇಂದ್ರಗಳು: 20 ವಾರ್ಡ್ಗಳಿಗೆ 20 ಮತ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ವಾ.ನಂ. 1 ಕೊಟ್ಟೂರೇಶ್ವರ ಪ್ರೌಢಶಾಲೆ ಸಿರಿಮಠ, ವಾ. 2 ಪಪಂ ಕಾರ್ಯಾಲಯ, ವಾ.3 ಕೆಬಿಕೆ ಶಾಲೆ, ವಾ. 4 ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದುಶಾಲೆ ಚಿರಿಬಿ ರಸ್ತೆ, ವಾ. 5 ಪ್ರಾಥಮಿಕ ಆರೋಗ್ಯ ಕೇಂದ್ರ ಕಳೆಗೇರಿ ಎಡಭಾಗ, ವಾ. 6 ಉಜ್ಜಯಿನಿ ಜಗದ್ಗುರು ಐಟಿಐ ಕೇಂದ್ರ ಸಂಖ್ಯೆ 1 ಚಿರಿಬಿ ರಸ್ತೆ, ವಾ. 7 ಸರ್ಕಾರಿ ಬಾಲಕರ ಪ್ರೌಢಶಾಲೆ, ವಾ. 8 ಸರ್ಕಾರಿ ಬಾಲಕೀಯರ ಪ್ರಾಥಮಿಕ ಶಾಲೆ ಜಿಪಿ ನಗರ, ವಾ. 9 ಪಪಂ ಹಳೆ ಸರ್ಕಾರಿ ಆಸ್ಪತ್ರೆ, ವಾ. 10 ಸರ್ಕಾರಿ ಹಿರಿಯ ಪ್ರಾಥಮಿಕ ಕರಿಬಸವೇಶ್ವರ ಶಾಲೆಯ 5ನೇ ಕೋಣೆ ಎಡಭಾಗ, ವಾ. 11 ಸರ್ಕಾರಿ ಹಿರಿಯ ಪ್ರಾಥಮಿಕ ಕರಿಬಸವೇಶ್ವರ ಶಾಲೆಯ 12ನೇ ಕೋಣೆ ಬಲಭಾಗ, ವಾ. 12 ಗ್ರಾಮ ಛಾವಡಿ ನಾಡಕಚೇರಿ, ವಾ.13 ಸರ್ಕಾರಿ ಹಿರಿಯ ಪ್ರಾಥಮಿಕ ನಾಗರಾಜ ಶಾಲೆ, ವಾ. 14 ಈಶ್ವರ್ ನಾಯ್ಕ ಐಟಿಐ ಕಾಲೇಜು, (ಡ್ರಾಯಿಂಗ್ ರೂಂ) ವಾ. 15 ಈಶ್ವರ್ ನಾಯ್ಕ ಐಟಿಐ ಖಾಸಗಿ ಕಾಲೇಜು (ಉಪನ್ಯಾಸ ಕೊಠಡಿ) ವಾ.16 ಎಪಿಎಂಸಿ ಕಾರ್ಯಾಲಯ, ವಾ.17 ಕೋಲಶಾಂತೇಶ್ವರ ಖಾಸಗಿ ಐಟಿಐ ಕಾಲೇಜು, ವಾ.18 ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಎಲ್.ಬಿ.ಶಾಸ್ತ್ರಿ ಬಡಾವಣೆ, ವಾ. 19 ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಮೂರ್ಕಲ್ಮಠದ ಹಿಂಭಾಗ, ವಾ. 20 ಸರ್ಕಾರಿ ಹಿರಿಯ ಪ್ರಾಥಮಿಕ ಹರಿಜನಕೇರಿ ಶಾಲೆಗಳನ್ನು ಮತ ಕೇಂದ್ರಗಳನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು. ಮುಖ್ಯಾಧಿಕಾರಿ ಹನುಮಂತಮ್ಮ ಇದ್ದರು.
ಕೊಟ್ಟೂರು ಜಾತ್ರೆ: ನಾಳೆ ಸಭೆ
ಕೊಟ್ಟೂರು: ಇಲ್ಲಿನ ಪ್ರಸಿದ್ಧ ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ವಾರ್ಷಿಕ ರಥೋತ್ಸವ ಮಾರ್ಚ್ 6ರಂದು ಜರುಗಲಿದೆ. ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಮಾರ್ಚ್ 3ರಿಂದ 11ರ ವರೆಗೆ ಜರುಗಲಿದ್ದು, ಪೂರ್ವಭಾವಿ ಸಿದ್ಧತಾ ಸಭೆಯನ್ನು ಫೆ. 18ರಂದು ಮಧ್ಯಾಹ್ನ 3 ಗಂಟೆಗೆ ನಿಗದಿಗೊಳಿಸಲಾಗಿದೆ. ಹೊಸಪೇಟೆ ಸಹಾಯಕ ಆಯುಕ್ತ ಡಾ ಡಿ.ಆರ್. ಅಶೋಕ್ ಸಭೆಯ ನೇತೃತ್ವ ವಹಿಸಲಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸುತಗುಂಡಿ ತಿಳಿಸಿದ್ದಾರೆ.
ಇಂದು ಯುವಜನ ಸಮಾವೇಶ
ಹೊಸಪೇಟೆ: ಸ್ಲಂ ಜನಾಂದೋಲನ ಕರ್ನಾಟಕ, ಸ್ಲಂ ಜನಜಾಗೃತಿ ಆಂದೋಲನ ಸಮಿತಿಯ ಯುವ ಘಟಕದಿಂದ ಹೊಸಪೇಟೆ ಯುವಜನರ ಸಮಾವೇಶ ನಗರದ ಎಂ.ಪಿ. ಪ್ರಕಾಶ್ ಕಲಾಮಂದಿರದಲ್ಲಿ ಫೆ. 17 ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಬೆಂಗಳೂರಿನ ನಿಡುಮಾಮಿಡಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಮಾವೇಶ ಉದ್ಘಾಟಿಸುವರು. ಸ್ಲಂ ಜನಜಾಗೃತಿ ಅಂದೋಲ ಸಮಿತಿಯ ಯುವ ಘಟಕದ ಮುಖಂಡ ರಾಜೇಶ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಹಾಯಕ ಆಯುಕ್ತ ಡಾ. ಡಿ.ಆರ್. ಅಶೋಕ್, ತಹಸೀಲ್ದಾರ್ ಬಸವರಾಜ್ ಸೋಮಣ್ಣನವರ್, ಮರಿಯಮ್ಮನಹಳ್ಳಿಯ ಚಿಂತಕ ಎಸ್.ಬಿ. ಚಂದ್ರಶೇಖರ್, ಸ್ಲಂ ಜನಾಂದೋಲನ ಸಮಿತಿ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ಸರ್ಕಾರಿ ಪದವಿ ಕಾಲೇಜಿನ ಡಾ. ಕೆ. ವೆಂಕಟೇಶ್, ಉಪನ್ಯಾಸಕ ಸೀನಾ ನಡಾವಳಿ, ಶಿಕ್ಷಕ ಜಮೀಲ್, ರಾಮಚಂದ್ರ, ಎಚ್. ಶೇಷು, ನೂರ್ ಜಹಾನ್, ಎನ್. ವೆಂಕಟೇಶ್, ಜಿಲಾನ್, ಅಂಜಿನಿ, ಜಿ. ಮುಕ್ಕಣ್ಣ, ಡಿ. ಪರುಶುರಾಮ್, ಎಸ್. ವೆಂಕೋಬಿ, ವಿ. ಪರುಶುರಾಮ್ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
12 ಕೆಜಿ ಗಾಂಜಾ ವಶ
ಬಳ್ಳಾರಿ: ತಾಲೂಕಿನ ಬಾದನಹಟ್ಟಿ ಗ್ರಾಮದ ಆಗನೂರಪ್ಪ ಎಂಬುವವರ ಮನೆಯಲ್ಲಿದ್ದ 12 ಕೆಜಿ ಗಾಂಜವನ್ನು ಕುರುಗೋಡು ಠಾಣೆ ಪ್ರಭಾರಿ ಸಿಪಿಐ ಭೂಪಯ್ಯ ಹಾಗೂ ಪಿಎಸ್ಐ ರಂಗಪ್ಪ ನೇತೃತ್ವದ ತಂಡ ಬಂಧಿಸಿ ಗಾಂಜ ವಶಪಡಿಸಿಕೊಂಡಿದೆ. ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
75ರ ಹಂಪಣ್ಣಗೆ ಇಂದು ಅಭಿನಂದನೆ
ಬಳ್ಳಾರಿ: ಸಾಹಿತ್ಯ, ಪತ್ರಿಕೋದ್ಯಮ, ಸಿನಿಮಾರಂಗ, ಸಾಮಾಜಿಕ ರಂಗ ಸೇರಿದಂತೆ ಹಲವು ರಂಗದಲ್ಲಿ ಸೇವೆ ಸಲ್ಲಿಸಿದರೂ, ಎಲೆಮರೆಕಾಯಿಯಾಗಿ ಈಗಲೂ ಅಕ್ಷರದೊಂದಿಗೆ ಅಂಟಿಕೊಂಡಿರುವ ಪತ್ರಕರ್ತ ಸಿ.ಜಿ. ಹಂಪಣ್ಣನವರಿಗೆ 75ರ ಸಂಭ್ರಮ. ಸರಳ ಸಜ್ಜನಿಕೆಯ ಮೂಲಕ ಪತ್ರಿಕೋದ್ಯಮದಲ್ಲಿ 5 ದಶಕಗಳಿದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆಗಾಗಿ ಫೆ. 17ರಂದು ಅಭಿನಂದನಾ ಸಮಾರಂಭ ಬಳ್ಳಾರಿಯಲ್ಲಿ ನಡೆಯಲಿದೆ. ಹಿರಿಯ ಪತ್ರಕರ್ತ ಸಿ.ಜಿ. ಹಂಪಣ್ಣ ಬಳ್ಳಾರಿ ತಾಲೂಕು ಚೇಳ್ಳಗುರ್ಕಿ ಗ್ರಾಮದವರು. 52 ವರ್ಷ ಪತ್ರಕರ್ತರಾಗಿ ಸುಧೀರ್ಘ ಸೇವೆ ಸಲ್ಲಿಸಿದ ಇವರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಸಿ.ಜಿ. ಹಂಪಣ್ಣನವರ ಅಭಿನಂದನಾ ಸಮಿತಿ ಜಂಟಿಯಾಗಿ ಫೆ. 17ರಂದು ಬೆಳಗ್ಗೆ 10ಕ್ಕೆ ನಗರದ ರಾಘವ ಕಲಾಮಂದಿರದಲ್ಲಿ 75 ವಸಂತಗಳನ್ನು ಪೂರೈಸಿದ ನೆನಪಿಗಾಗಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಂಡೂರು ವಿರಕ್ತಮಠದ ಶ್ರೀ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಜಿ. ಸೋಮಶೇಖರ ರೆಡ್ಡಿ ಅಧ್ಕಕ್ಷತೆ ವಹಿಸಲಿದ್ದಾರೆ. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ (ಮಾಜಿ ಸಿಎಂ ಬಿ.ಡಿ. ಜತ್ತಿ ಪುತ್ರ) ಪಾಲ್ಗೊಳ್ಳಲ್ಲಿದ್ದಾರೆ.
ಬಿಜೆಪಿಗೆ ಹಾಲಪ್ಪ ರಾಜಿನಾಮೆ
ಹೂವಿನಹಡಗಲಿ: ಬಿಜೆಪಿ ಪಕ್ಷದ ಮುಖಂಡ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪನವರಿಗೆ ಹಾಲಪ್ಪ ರಾಜಿನಾಮೆ ಪತ್ರ ರವಾನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಹಾಲಪ್ಪ 2008ರಲ್ಲಿ ಬಿಜೆಪಿ ಸೇರಿದ್ದರು. ಈಗ ಬೇರೆ ಪಕ್ಷದ ಕಡೆ ಮುಖ ಮಾಡಿದ್ದಾರೆ.