ಬಳ್ಳಾರಿ: ಕಾಂಗ್ರೆಸ್ಮುಖಂಡನ ಮೇಲೆ ಹಲ್ಲೆ
ಬಳ್ಳಾರಿ: ನಗರದ ಎಸ್ಪಿ ವೃತ್ತದ ಸಮೀಪದಲ್ಲಿ ಶುಕ್ರವಾರ ರಾತ್ರಿ ಕಾಂಗ್ರೆಸ್ನ ಮುಖಂಡ ಜಿಮ್ ಗೋವಿಂದನ ಮೇಲೆ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಕೆಲವರು ದೈಹಿಕ ಹಲ್ಲೆ ನಡೆಸಿದ್ದು, ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯರ್ತರು ಜಿಲ್ಲಾಧಿಕಾರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.
ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಆಂಜನೇಯಲು ಹಾಗೂ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಸೇರಿದಂತೆ ಹಲವು ಮುಖಂಡರು ಮನವಿ ಸಲ್ಲಿಸಿ, ಚುನಾವಣೆ ಮುನ್ನ ನಗರದಲ್ಲಿ ಭಯಭೀತ ವಾತಾವರಣ ನಿರ್ಮಿಸಲು ಬಿಎಸ್ಸಾರ್ ಕಾಂಗ್ರೆಸ್ನವರು ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ. ಜನರಲ್ಲಿ ಭೀತಿ ಹುಟ್ಟಿಸುವ ತಂತ್ರ ಇದಾಗಿದೆ. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಬೆದರಿಕೆ ಒಡ್ಡುವ ತಂತ್ರಗಾರಿಕೆ, ಷಡ್ಯಂತ್ರಗಳು ನಡೆಯುತ್ತಿದ್ದು, ಇಂತಹ ಘಟನೆಗೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗುವ ಮೂಲಕ ನಿರ್ಭೀತಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಬಿಎಸ್ಸಾರ್ ಸಹಿಸುತ್ತಿಲ್ಲ: ಈಗಾಗಲೇ ಕಾಂಗ್ರೆಸ್ ಪಕ್ಷದ ನಾಯಕರು ಗಲ್ಲಿ ಗಲ್ಲಿಗಳಲ್ಲಿ ತೆರಳಿ ಪಕ್ಷದ ಕಾರ್ಯಕ್ರಮಗಳನ್ನು ಹಾಗೂ ಆಡಳಿತರೂಢ ಪಕ್ಷದ ವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಾಂಗ್ರೆಸ್ ಬಗ್ಗೆ ಎಲ್ಲಾ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾರ್ವಜನಿಕರಿಗೆ ಕಾಂಗ್ರೆಸ್ ಬಗ್ಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಸಹಿಸದ ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆಯೊಡ್ಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಬಿಸ್ವಾಸ್ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎ. ಮಾನಯ್ಯ, ಬಿ. ರಾಂಪ್ರಸಾದ್, ಎಚ್.ಅರ್ಜುನ್, ಶರ್ಮಾಸ್, ಬೆಣಕಲ್ ಬಸವರಾಜಗೌಡ, ಎಲ್. ಮಾರೆಣ್ಣ, ವಂಡ್ರಿ, ಅಶೋಕ, ಪಾಟೀಲ್, ಪದ್ಮಾವತಿ ಇದ್ದರು.