ದಾವಣಗೆರೆ ಚಿಗಟೇರಿ ಆಸ್ಪತ್ರೆಯಿಂದ ರೋಗಿ ನಾಪತ್ತೆ
ಹೂವಿನಹಡಗಲಿ: ದಾವಣಗೆರೆಯ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಕರೆ ತರಲಾಗಿದ್ದ ರೋಗಿಯೊಬ್ಬ ಮಾ. 6ರಂದು ನಾಪತ್ತೆಯಾಗಿರುವ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೀರಾಕೂರ್ನಹಳ್ಳಿಯ 68 ಇಳಿ ವಯಸ್ಸಿನ ಬಾರಿಕ ಹಾಲನಗೌಡ ನಾಪತ್ತೆಯಾಗಿರುವ ರೋಗಿ.
ಹಾಲನಗೌಡ ಕಳೆದ 6 ತಿಂಗಳಿನಿಂದ ದಮ್ಮು, ನರದೌರ್ಬಲ್ಯದಿಂದ ಬಳಲುತ್ತಿದ್ದರು. ದಾವಣಗೆರೆ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ಮಾ. 5ರಂದು 72ನೇ ವಾರ್ಡಿನ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಿದ ಬಳಿಕ ಮೂರನೇ ಮಹಡಿಯ 205ನೇ ವಾರ್ಡ್‌ಗೆ ರವಾನೆ ಮಾಡಲಾಗಿತ್ತು.
ಆದರೆ, ತಡರಾತ್ರಿ ಮಾ. 6ರಂದು ರಾತ್ರಿ 1 ಗಂಟೆ ಸುಮಾರಿಗೆ ಪತ್ನಿ ಎದ್ದು ನೋಡಿದಾಗ ಗಂಡ ಹಾಲನಗೌಡ ಅಲ್ಲಿರಲಿಲ್ಲ.
ಈ ವಿಷಯವನ್ನು ಜಯಮ್ಮ ತನ್ನ ಮಗ ಚಂದ್ರಗೌಡ ಹಾಗೂ ಕುಟುಂಬದವರಿಗೆ ತಿಳಿಸಿದ ಕೂಡಲೇ ದಾವಣಗೆರೆ ಸುತ್ತಮುತ್ತ ಎಲ್ಲ ಕಡೆಗೂ ಹುಡುಕಾಟ ನಡೆಸಿದರೂ ಯಾವ ಪ್ರಯೋಜನವಾಗಲಿಲ್ಲ. ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ದಾವಣಗೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೋಗಿಯ ಸಂಬಂಧಿಕರೂ ಈ ಕುರಿತು ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ರೋಗಿಯ ಚಹರೆ: ಹಾಲನಗೌಡ ತಂದೆ ಕೊಟ್ರಗೌಡ, 68 ವರ್ಷ, ಬಾರಿಕ ಜನಾಂಗದವನಾಗಿದ್ದು, ಸುಮಾರು 5.5 ಅಡಿ ಎತ್ತರ ಇದ್ದು, ಸಾಧಾರಣ ಮೈ ಕಟ್ಟು ಹೊಂದಿದ್ದಾನೆ. ತಲೆಯಲ್ಲಿ ಕಪ್ಪು-ಬಿಳಿ ಮಿಶ್ರಿತ ಕೂದಲಿವೆ. ತೊದಲುತ್ತಾ ಕನ್ನಡ ಭಾಷೆ ಮಾತನಾಡುತ್ತಾರೆ. ಹೋಗುವಾಗ ನೀಲಿ ಬಣ್ಣದ ಅಂಗಿ ಬಿಳಿ ಪಂಜೆ ಹಾಗೂ ಮಾಸಲು ಬಣ್ಣದ ಶಾಲು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.