ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು: ಬಿಸ್ವಾಸ್

Srinivasa Murthy VN
Updated On : 9 Mar 2013, 11:32 am

ಮಾ. 11ರಂದು ನಡೆಯುವ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮಹಾನಗರ ಪಾಲಿಕೆಯ ಮತ ಎಣಿಕೆಯನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯವಸ್ಥಿತವಾಗಿ ನಡೆಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.  
ಶುಕ್ರವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಚುನಾವಣಾಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಿಗದಪಡಿಸಿದ ಸ್ಥಳಗಳಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಮತ ಎಣಿಕೆಯನ್ನು ನಡೆಸಲಾಗುತ್ತದೆ.
ಮತಎಣಿಕೆ ಕಾರ್ಯವು ಬೆಳಗ್ಗೆ 8ರಿಂದ ಆರಂಭವಾಗಲಿದೆ. ಅಭ್ಯರ್ಥಿಗಳು ಹಾಗೂ ಪ್ರವೇಶಪತ್ರವನ್ನು ಪಡೆದ ಮತಎಣಿಕೆ ಏಜೆಂಟ್‌ರಿಗೆ ಮಾತ್ರ ಮತಎಣಿಕೆ ಕೇಂದ್ರಕ್ಕೆ ಪ್ರವೇಶ ಕಲ್ಪಿಸಲಾಗುವುದು. ಪಕ್ಷಗಳ ಆಧಾರದಡಿ ಚುನಾಯಿತ ಪ್ರತಿನಿಧಿಗಳಿಗೆ ಮತಎಣಿಕೆ ಏಜೆಂಟ್‌ರಾಗಲು ಅವಕಾಶ ಇರುವುದಿಲ್ಲ ಎಂದರು.
ಈ ಏಜೆಂಟ್‌ರಿಗೆ ನೀಡುವ ಪಾಸುಗಳಲ್ಲಿ ಕಡ್ಡಾಯವಾಗಿ ಹಾಲೋಮಾರ್ಕ್ ಮತ್ತು ಅದರ ಸಂಖ್ಯೆ ಅಳವಡಿಸಬೇಕು. ಪಾಸ್‌ನಲ್ಲಿ ಭಾವಚಿತ್ರವನ್ನು ಅಂಟಿಸಿ ಕಡ್ಡಾಯವಾಗಿ ಪಾಸ್ ಮತ್ತು ಭಾವಚಿತ್ರಗಳೆರಡರ ಮೇಲೆ ಅಡ್ಡ ಸಹಿ ಮಾಡಿರಬೇಕು. ಮತಗಟ್ಟೆ ಕೇಂದ್ರಗಳಲ್ಲಿ ಅಗತ್ಯ ಟೇಬಲ್‌ಗಳನ್ನು ಅಳವಡಿಸಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಮತ ಎಣಿಕೆ ಸಿಬ್ಬಂದಿ ವರ್ಗದವರಿಗೆ ಸೂಕ್ತ ತರಬೇತಿ ನೀಡಲಾಗುವುದು. ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮತದಾನವಾಗಿರುವುದರಿಂದ ಮತ ಎಣಿಕೆಯು ಸುಸೂತ್ರವಾಗಿ ಶೀಘ್ರವಾಗಿ ಪೂರ್ಣಗೊಳ್ಳಲಿದೆ.
ಪಾಲಿಟೆಕ್ನಿಕ್ ಕಾಲೇಜಿನ ಮುಂಭಾಗದ ದ್ವಿಪಥ ರಸ್ತೆಯ ಒಂದು ಕಡೆ ಸಂಚಾರ ನಿಷೇಧಿಸಲಾಗುವುದು. ವಾಹನಗಳನ್ನು ಪಾರ್ಕಿಗ್ ಸ್ಥಳದಲ್ಲಿಯೇ ನಿಲ್ಲಿಸಬೇಕು.  ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಜವಾಬ್ದಾರಿಯನ್ನರಿತು ವ್ಯವಸ್ಥಿತವಾಗಿ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತಾ ಮಾತನಾಡಿ, ಮತ ಎಣಿಕೆ ಸಂದರ್ಭದಲ್ಲಿ ಅಗತ್ಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ನೇಮಿಸಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದು. ಚುನಾವಣಾಧಿಕಾರಿ ನೀಡಿದ ಪ್ರವೇಶ ಪತ್ರಗಳನ್ನು ಹೊರತುಪಡಿಸಿ ಉಳಿದ ಯಾರಿಗೂ ಪ್ರವೇಶ ನೀಡಲಾಗುವುದಿಲ್ಲ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸೂಕ್ತ ಭದ್ರತೆ ಒದಗಿಸಲಾಗುವುದು ಎಂದರು.   ಸಭೆಯಲ್ಲಿ ಪಾಲಿಕೆ ಆಯುಕ್ತ ಡಿ.ಎಲ್. ನಾರಾಯಣ, ಚುನಾವಣಾಧಿಕಾರಿಗಳಾದ ರಾಜಪ್ಪ, ಬಿ.ಎಸ್. ಕಲಾದಗಿ, ಹಟ್ಟೆಪ್ಪ, ನಗರ ಡಿವೈಎಸ್ಪಿ ಟಿ.ಎಸ್. ಮುರುಗಣ್ಣನವರ್, ತಹಸೀಲ್ದಾರ್ ಶರಣಪ್ಪ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಚಾಂದ್‌ಬಾಷಾ, ಎನ್‌ಐಸಿ ಅಧಿಕಾರಿ ವಸ್ತ್ರದ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಡಿಸಿ ಪರಿಶೀಲನೆ: ಬಳ್ಳಾರಿ ಮಹಾನಗರ ಪಾಲಿಕೆಯ ಮತ ಎಣಿಕೆ ನಡೆಯಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಜಿಲ್ಲಾ ಚುನಾವಣಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಭೇಟಿ ನೀಡಿ ಪರಿಶೀಲಿಸಿದರು. ಭದ್ರತಾ ಕೊಠಡಿ (ಸ್ಟ್ರಾಂಗ್ ರೂಂ) ಮತ ಎಣಿಕೆ ಕೊಠಡಿಗಳು, ಭದ್ರತಾ ವ್ಯವಸ್ಥೆ, ಪ್ರವೇಶ ದ್ವಾರ ಸೇರಿದಂತೆ ವಿವಿಧ ಸ್ಥಳಗಳನ್ನು ಪರಿಶೀಲಿಸಿದ ಅವರು ದಾಖಲಾತಿಗಳನ್ನು ಸಹ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಡಿ.ಎಲ್. ನಾರಾಯಣ, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಕಾರ್ತಿಕ ರೆಡ್ಡಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement