ವಿಕೃತ ಮನಸ್ಸಿಗೆ ಕೆಟ್ಟ ಸಾಹಿತ್ಯ, ಸಿನಿಮಾ ಕಾರಣ
ಮನುಷ್ಯನ ವಿಕೃತ ಮನಸ್ಸಿಗೆ ಕೆಟ್ಟ ಸಿನಿಮಾ ಸಾಹಿತ್ಯ, ದೃಶ್ಯಗಳೇ ಕಾರಣವಾಗಿದೆ ಎಂದು ಎಐಎಂಎಸ್ಎಸ್ನ ಜಿಲ್ಲಾಧ್ಯಕ್ಷೆ ಮಂಜುಳಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ಐಎಂಎ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 102ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರಗಳು ಜನರಿಗೆ ಸಮರ್ಪಕ ಮೂಲ ಸೌಕರ್ಯಗಳನ್ನು ಕಲ್ಪಿಸದೆ ಇದ್ದರೂ, ನೂರಾರು ಚಾನೆಲ್ಗಳನ್ನು ಮಾತ್ರ ನೀಡಿದೆ. ಬಹುತೇಕ ಚಾನೆಲ್ಗಳಲ್ಲಿ ಅಶ್ಲೀಲ ದೃಶ್ಯಗಳು, ಜಾಹೀರಾತುಗಳೇ ರಾರಾಜಿಸುತ್ತಿವೆ. ಇಂತಹ ಸಾಮಾಜಿಕ ಬದ್ಧತೆಯಿಲ್ಲದೆ ಚಾನೆಲ್ಗಳಿಂದ ಮತ್ತು ಸರ್ಕಾರಕ್ಕೆ ಭಾರಿ ಲಾಭ ನೀಡುತ್ತಿರುವ ಮದ್ಯದಿಂದ ನಷ್ಟವೇ ಹೆಚ್ಚಾಗಿದೆ ಎಂದು ತಿಳಿಸಿದರು.
ಹತ್ತಿರದ ಸಂಬಂಧಿಗಳಿಂದಲೇ ಮಹಿಳೆ ಮತ್ತು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚು ನಡೆಯುತ್ತಿವೆ. ವಾಣಿಜ್ಯ ದೃಷ್ಟಿಯಿಂದ ಪ್ರತಿಯೊಂದು ಚಲನಚಿತ್ರ, ಧಾರವಾಹಿಗಳಲ್ಲೂ ಇಂದು ಅಶ್ಲೀಲ ದೃಶ್ಯಗಳನ್ನು ತುರುಕಲಾಗುತ್ತಿದೆ. ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರಕ್ಕೆ ಬದ್ಧತೆ ಬೇಕು. ಅದೇ ರೀತಿ ಸಿನಿಮಾ ನಿರ್ಮಿಸುವ ನಿರ್ಮಾಪಕ, ನಿರ್ದೇಶಕರಿಗೂ ಸಾಮಾಜಿಕ ಬದ್ಧತೆ ಇರಬೇಕು. ಪ್ರಕರಣಗಳ ವಿರುದ್ಧ ಕೇವಲ ಕಮಿಟಿ ರಚಿಸಿ, ವರದಿ ತಯಾರಿಸಿದರೆ ಸಾಲದು. ವರದಿಯಲ್ಲಿದ್ದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅತ್ಯಾಚಾರ ಹಾಗೂ ಹಲ್ಲೆಯಂತಹ ಅಪರಾಧಗಳಿಗೆ ಗಲ್ಲು ಶಿಕ್ಷೆ ವಿಧಿಸಬಾರದು. ಅದರಿಂದ ಅಪರಾಧಿ ಕೇವಲ ಒಂದು ನಿಮಿಷದಲ್ಲಿ ಸಾವನ್ನಪ್ಪುತ್ತಾನೆ. ಬದಲಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಅದರಿಂದಾಗಿ ನರಕಯಾತನೆ ಅನುಭವಿಸಬೇಕು. ಇಂದಿನ ಮಹಿಳೆಯರ ಮೇಲೂ ಸಾಮಾಜಿಕ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಟ್ಟ ಸಂಸ್ಕೃತಿ ವಿರುದ್ಧ ಸಮರ ಸಾರಬೇಕು. ಅಂದಾಗ ಸಮಾಜದಲ್ಲಿ ಆಳವಾಗಿ ಬೇರೂರಿರುವ ಕೆಟ್ಟ ಸಂಪ್ರದಾಯವನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ. ಈ ಬಾರಿಯ ಮಹಿಳಾ ದಿನಾಚರಣೆ ಅಂಗವಾಗಿ ಮಾ. 8ರಿಂದ ಮಾ. 14ರ ವರೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ದೇಶಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಮಂಜುಳಾ ಹೇಳಿದರು.
ಇದೇ ವೇಳೆ ಸ್ತ್ರೀ ಸುರಕ್ಷಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಕಾರ್ಯಕ್ರಮದಲ್ಲಿ ಭುವನೇಶ್ವರಿ, ಶಾಂತಾ ಮತ್ತು ನಗರದ ನರ್ಸಿಂಗ್, ಡಿಎಡ್, ಬಿಎಡ್ ವಿದ್ಯಾರ್ಥಿಗಳು ಇದ್ದರು.