ಮೈಲಾರ ನಿರಾಳ, ಸಮಸ್ಯೆ ಬಹಳ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮಾ. 12
ನಾಡಿನ ಸುಕ್ಷೇತ್ರ ಮೈಲಾರ ಜಾತ್ರೆ ಮುಗಿದು 15 ದಿನ ಕಳೆದಿವೆ, ಇಂದು ಮೈಲಾರ ನಿರಾಳವಾಗಿದೆ, ಆದರೆ ಸಮಸ್ಯೆಗಳು ಮಾತ್ರ ಇನ್ನು ಜೀವಂತವಾಗಿವೆ.
ಮೈಲಾರ ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರು. ತೆರಿಗೆ ಸಂಗ್ರಹವಾಗಿದೆ. ಇನ್ನು ದೇವಸ್ಥಾನಕ್ಕೂ ಕೋಟ್ಯಾಂತರ ರು. ಆದಾಯವು ಭಕ್ತರಿಂದ ಸಂಗ್ರಹವಾಗುತ್ತಿದೆ. ಆದರೆ ಜಾತ್ರೆ ಮುಗಿದ ಮೇಲೆ ಗ್ರಾಮದ ಹೊರವಲಯದಲ್ಲಿ ಬಿದ್ದಿರುವ ಕಸ, ಕಲುಷಿತ ನೀರು ಸಂಗ್ರಹದಿಂದ ಸೊಳ್ಳೆ ಸಾಮ್ರಾಜ್ಯ ನಿರ್ಮಾಣವಾಗಿ ಸೊಳ್ಳೆ ಪರದೆಯಲ್ಲೇ ಗ್ರಾಮಸ್ಥರು ಊಟ ಮಾಡಬೇಕಿದೆ. ಜಾನುವಾರುಗಳಿಗೆ ಸೊಳ್ಳೆ ಪರದೆಯನ್ನು ಕಟ್ಟುತ್ತಿದ್ದಾರೆ.
ನಾಡಿನ ಮೂಲೆ ಮೂಲೆಗಳಿಂದ ಜಾತ್ರೆಗೆ ಬಂದ ಭಕ್ತರಿಗೆ ಜಾತ್ರೆಯಲ್ಲಿ ತಂಗಲು ಸರಿಯಾದ ವ್ಯವಸ್ಥೆ ಇಲ್ಲದೇ ಸುತ್ತಮುತ್ತಲಿನ 700-800 ಎಕರೆ ಜಮೀನುಗಳಲ್ಲಿ ಸುಮಾರು 8-10 ಲಕ್ಷಕ್ಕೂ ಅಧಿಕ ಪರಿಷೆ ಸೇರಿದ ಭಕ್ತರು ಮತ್ತು ಅಂಗಡಿಕಾರರು ಮಾಡಿ ಹೋಗಿರುವ ಹೊಲಸು ಮತ್ತು ನಿರುಪಯುಕ್ತ ವಸ್ತುಗಳು ಬಿಸಾಡಲಾಗಿದೆ. ಆದರೆ ಗ್ರಾಪಂ ಮಾತ್ರ ಸ್ವಚ್ಛ ಮಾಡುವ ಗೋಜಿ ಇನ್ನೂ ಹೋಗಿಲ್ಲ.
ಮೈಲಾರ ಸುತ್ತ ದುರ್ನಾತ: ಜಾತ್ರೆಗೆಂದು ಮಾಡಲಿದ್ದ ತಾತ್ಕಾಲಿಕ ಶೌಚಗಳಿಗೆ ನೀರಿನ ಬಳಕೆ ಇಲ್ಲದೇ ಬಯಲು ಕಡೆ ಶೌಚಕ್ಕೆ ಹೋಗಿದ್ದರಿಂದ ದುರ್ನಾತ ವಾತವರಣವಿದೆ. ಮೈಲಾರ ಜನತೆ ಈ ಹೊಲಸು ವಾತವರಣದಿಂದ ಮುಕ್ತರಾಗಲು ಸುಮಾರು 3-4 ತಿಂಗಳು ಕಾಲಕಳೆಯಬೇಕು. ನಂತರದಲ್ಲಿ ದೊಡ್ಡ ಪ್ರಮಾಣದ ಮಳೆ ಬಂದರೆ ಮಾತ್ರ ಈ ಎಲ್ಲ ಹೊಲಸು ಹೋಗಲು ಸಾಧ್ಯ ಎನ್ನುತ್ತಾರೆ ಮೈಲಾರ ಗ್ರಾಮಸ್ಥ ಜಗದೀಶಗೌಡ.
ಗ್ರಾಮದ ಎಲ್ಲಾ ಕಡೆಗಳಲ್ಲಿ ಹೊಲಸು ಹೆಚ್ಚಾಗಿರುವುದರಿಂದ ಸೊಳ್ಳೆ ಮತ್ತು ನೋಣಗಳ ಕಾಟ ಹೆಚ್ಚಾಗಿದ್ದು, ಮನೆಗಳಲ್ಲಿ ಸೊಳ್ಳೆ ಪರದೆಯಲ್ಲಿ ಕುಳಿತು ಊಟ ಮಾಡಬೇಕಾದ ಸ್ಥಿತಿ ಎದುರಾಗಿದೆ, ಇನ್ನು ಜಾನುವಾರುಗಳ ಸ್ಥಿತಿಯನ್ನು ನೋಡಲಾಗದೇ ರೈತರು ಸೊಳ್ಳೆ ಪರದೆಯನ್ನು ಕಟ್ಟಿದ್ದಾರೆ.
ಹೊಳಿದಂಡೆ ಹೊಲಸು: ಗಂಗಾಸ್ನಾನ ತುಂಗಾ ಪಾನ ಎಂಬ ಮಾತಿನಂತೆ ಪವಿತ್ರ ತುಂಗಾಭದ್ರೆ ಇಂದು ಅಕ್ಷರಶಃ ಮಲೀನವಾಗಿದ್ದಾಳೆ. ನದಿ ತೀರದ ತುಂಬೆಲ್ಲಾ ನಿರುಪಯುಕ್ತ ವಸ್ತುಗಳನ್ನು ನದಿಯಲ್ಲಿ ಬಿಸಾಡಿದ್ದು, ಇದರಿಂದ ನದಿ ನೀರು ಕುಡಿಯಲು ಯೋಗವಿಲ್ಲ, ನದಿ ತೀರದಲ್ಲೇ ಜಾತ್ರೆಗೆ ಬಂದ ಭಕ್ತರು ಬಯಲು ಶೌಚಕ್ಕೆ ಹೋಗಿರುವುದರಿಂದ ದುರ್ನಾತವಾಗಿದೆ. ನದಿ ತೀರವನ್ನು ಗ್ರಾಪಂ ಈವರೆಗೂ ಸ್ವಚ್ಛತೆ ಮಾಡಿಲ್ಲವೆಂದು ಗ್ರಾಮಸ್ಥರು ದೂರುತ್ತಾರೆ.
ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್: ಗ್ರಾಪಂನಿಂದ ಗ್ರಾಮ ಸೇರಿದಂತೆ ಮುತ್ತಮುತ್ತಲಿನ ಸ್ಥಳಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಸೊಳ್ಳೆಗಳನ್ನು ನಿಯಂತ್ರಿಸಲು 2 ಬಾರಿ ಫಾಗಿಂಗ್ ಸಿಂಪಡಿಸಿ, ಚರಂಡಿಗಳ ಸ್ವಚ್ಛತೆ ಮಾಡಲಾಗಿದೆ. ಕುಡಿಯುವ ನೀರಿಗೆ ಕ್ಲೋರಿನೇಷನ್ ಬಳಕೆ ಮಾಡಲಾಗುತ್ತಿದೆ ಎಂದು ಗ್ರಾಪಂ ಕಾರ್ಯದರ್ಶಿ ಚೌಡಪ್ಪ ಮಾಹಿತಿ ನೀಡಿದ್ದಾರೆ.
ಸರ್ಕಾರವು ಮುಂದಿನ ದಿನಗಳಲ್ಲಿ ಕೂಡಲಸಂಗಮ ಮತ್ತು ಕಾಗಿನೆಲೆ ಸುಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದಂತೆ ಮೈಲಾರ ಕ್ಷೇತ್ರಕ್ಕೆ ಹೆಚ್ಚಿನ ಗಮನ ಹರಿಸಿ ಮೈಲಾರಲಿಂಗೇಶ್ವರ ಪ್ರಾಧಿಕಾರವನ್ನು ರಚನೆ ಮಾಡಿ ಆ ಮೂಲಕ ಮೈಲಾರವನ್ನು ಪ್ರವಾಸಿ ತಾಣವನ್ನಾಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಾತ್ರೆಗೆಂದು ಮಾಡಲಿದ್ದ ತಾತ್ಕಾಲಿಕ ಶೌಚಗಳಿಗೆ ನೀರಿನ ಬಳಕೆ ಇಲ್ಲದೇ ಬಯಲು ಕಡೆ ಶೌಚಕ್ಕೆ ಹೋಗಿದ್ದರಿಂದ ದುರ್ನಾತ ವಾತವರಣವಿದೆ. ಮೈಲಾರ ಜನತೆ ಈ ಹೊಲಸು ವಾತಾವರಣದಿಂದ ಮುಕ್ತರಾಗಲು ಸುಮಾರು 3-4 ತಿಂಗಳು ಕಾಲಕಳೆಯಬೇಕು. ಹೊಲಸು ಹೆಚ್ಚಾಗಿರುವುದರಿಂದ ಸೊಳ್ಳೆ ಮತ್ತು ನೋಣಗಳ ಕಾಟ ಹೆಚ್ಚಿದೆ. ಮನೆಗಳಲ್ಲಿ ಸೊಳ್ಳೆ ಪರದೆಯಲ್ಲಿ ಕುಳಿತು ಊಟ ಮಾಡಬೇಕಾದ ಸ್ಥಿತಿ ಎದುರಾಗಿದೆ. ಜಾನುವಾರುಗಳ ಸ್ಥಿತಿಯನ್ನು ನೋಡಲಾಗದೇ ರೈತರು ಸೊಳ್ಳೆ ಪರದೆಯನ್ನು ಕಟ್ಟಿದ್ದಾರೆ.