ಸಚಿವ ಆನಂದ್ಸಿಂಗ್ಗೆ ತೀವ್ರ ಹಿನ್ನಡೆ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 12
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದ್ ಸಿಂಗ್ ಅವರ ತವರು ಹೊಸಪೇಟೆ ನಗರಸಭೆಯಲ್ಲಿ ಆಡಳಿತಾರೂಢ ಬಿಜೆಪಿ 35 ವಾರ್ಡ್ಗಳಲ್ಲಿ ಕೇವಲ 2 ಸ್ಥಾನದಲ್ಲಿ ಗೆಲವು ಸಾಧಿಸುವ ಮೂಲಕ ಭಾರಿ ಮುಖಭಂಗ ಅನುಭವಿಸಿದೆ.
ಇಲ್ಲಿ ಕಾಂಗ್ರೆಸ್ ಪಕ್ಷ 20 ವಾರ್ಡ್ಗಳಲ್ಲಿ ಗೆಲವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡು ಬಿಜೆಪಿಯನ್ನು ಧೂಳೀಪಟ ಮಾಡಿ ನಗರಸಭೆ ಮೇಲೆ ಕಾಂಗ್ರೆಸ್ ಬಾವುಟ ಹಾರಿಸಿದೆ. ಇನ್ನೂ ಜೆಡಿಎಸ್ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಜಿಲ್ಲೆಯಿಂದಲೇ ಜನ್ಮ ತಾಳಿದ ಬಿಎಸ್ಸಾರ್ ಪಕ್ಷ ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎನ್ನುವ ರೀತಿ ಅಬ್ಬರದ ಪ್ರಚಾರ ನಡೆಸಿ ಅಂತಿಮವಾಗಿ 6 ಸ್ಥಾನಗಳಲ್ಲಿ ಗೆಲವು ಸಾಧಿಸಿತು. ಹೇಗಾದರೂ ಮಾಡಿ ನಗರಸಭೆ ಮೇಲೆ ಬಿಎಸ್ಸಾರ್ ಬಾವುಟ ಹಾರಡುವಂತೆ ಮಾಡಬೇಕು ಎಂದು ಸ್ಥಳೀಯ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಬಿಎಸ್ಸಾರ್ ರಾಜ್ಯಾಧ್ಯಕ್ಷ ಶ್ರೀರಾಮುಲುಸೂಚಿಸಿದ್ದರು. ಸ್ವತಃ ಶ್ರೀರಾಮುಲು ಹಾಗೂ ಸಂಸದೆ ಶಾಂತಾ ಪ್ರಚಾರಕ್ಕೂ ಬಂದಿದ್ದರು. ಆದರೆ ಇದು ಯಾವುದೂ ಅವರಿಗೆ ಫಲ ನೀಡಲಿಲ್ಲ.
ಸಚಿವ ಆನಂದ್ ಸಿಂಗ್ ಈ ಚುನಾವಣೆಯಲ್ಲಿ ಪಕ್ಷದ ಯಾವ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡದೇ, ತನ್ನ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ತಂಡವನ್ನು ಸಹ ರಚಿಸದೇ ಪ್ರತಿ ವರ್ಷದಂತೆ ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆ ನಡೆಸಿ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಚುನಾವಣೆ ಫಲಿತಾಂಶವನ್ನು ಮಾತ್ರ ಹೊಸಪೇಟೆಯಲ್ಲಿ ಕೇಳಿಸಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಮಿಂಚಿದ್ದು ಮಾತ್ರ ಕಾಂಗ್ರೆಸ್ ಮುಖಂಡ ದೀಪಕ್ಕುಮಾರ್ ಸಿಂಗ್. ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವೇ ಕಾಂಗ್ರೆಸ್ ಅಭ್ಯರ್ಥಿ ಎನ್ನುವಂತೆ ಬಿಂಬಿತರಾಗಿದ್ದಾರೆ. ಮಾಜಿ ಶಾಸಕ ಎಚ್. ಆರ್. ಗವಿಯಪ್ಪ ಚುನಾವಣೆಯಿಂದ ದೂರ ಉಳಿದಿದ್ದರು.
ಕಳೆದ ನಗರಸಭೆ ಚುನಾವಣೆಯಲ್ಲಿ ಗೆದ್ದಿದ್ದ ಬಹುತೇಕ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ನಗರಸಭೆ ಅಧ್ಯಕ್ಷ ಎಂ. ಅಮ್ಜದ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್. ಚಂದ್ರಬಾಬು, ಜೆಡಿಎಸ್ ಮುಖಂಡ ಕೆ. ಕೊಟ್ರೇಶ್, ಪೂಚಾರಿ ವೆಂಕಟೇಶ್, ಟಿ. ವೆಂಕಟೇಶ್ ಸೇರಿದಂತೆ ಕೆಲವರು ಸೋಲನ್ನು ಅನುಭವಿಸಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಸತತವಾಗಿ 5ನೇ ಬಾರಿಗೆ ನಗರಸಭೆ ಸದಸ್ಯರಾಗಿ ಟಿ. ಚಿದಾನಂದ ಅವರು ಆಯ್ಕೆಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ ಕೆ. ಬಡಾವಲಿ, ಧನಲಕ್ಷ್ಮಿ ಮಾತ್ರ ಕಳೆದ ಬಾರಿ ಗೆದ್ದು, ಈ ಬಾರಿಯೂ ವಿಜಯದ ನಗೆ ಬೀರಿದ್ದಾರೆ.