ಶ್ರೀಕೃಷ್ಣದೇವರಾಯ ವಿವಿ 'ಗೌಡಾ' ಪ್ರದಾನ
ಕ.ಪ್ರ ವಾರ್ತೆ ಬಳ್ಳಾರಿ ಮಾ.20-
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಇತಿಹಾಸ ಸಂಶೋಧಕ ಕೆಳದಿ ಗುಂಡಾ ಜೋಯಿಸ್, ಹಿರಿಯ ರಂಗಭೂಮಿ ಕಲಾವಿದೆ ಮರಿಯಮ್ಮನಹಳ್ಳಿ ಕೆ. ನಾಗರತ್ನಮ್ಮ ಹಾಗೂ ಸಂಶೋಧಕ ಪ್ರೊ. ಸಿ. ನಾಗಣ್ಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಮತ್ತು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು. ಗೌರವ ಡಾಕ್ಟರೇಟ್ ಸ್ವೀಕರಿಸಬೇಕಿದ್ದ ಮೈಸೂರಿನ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಡಾ. ಇಬ್ರಾಹಿಂ ಬಿಜಲಿ ಸೈಯದ್ ಆಗಮಿಸಿರಲಿಲ್ಲ.
ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿ.ಆರ್. ಪಂಚಮುಖಿ ಘಟಿಕೋತ್ಸವ ಭಾಷಣ ಮಾಡಿ, ಅಭಿವೃದ್ಧಿ ನೆಲೆ ಹಾಗೂ ಮಾನದಂಡಗಳನ್ನು ಜಿಡಿಪಿ ಆಧಾರದ ಮೇಲೆ ಗುರುತಿಸುವುದು ಸರಿಯಲ್ಲ. ಜಿಡಿಪಿ ಆರ್ಥಿಕತೆ ಮೂಲಭೂತ ವಾದವನ್ನು ಪ್ರತಿಪಾದಿಸುತ್ತದೆ. ಆರ್ಥಿಕ ಪ್ರಗತಿಯಿಂದ ಬಡತನ ನಿರ್ಮೂಲನೆ ಸಾಧ್ಯ ಎಂಬ ವಾದವನ್ನು ಒಪ್ಪಿಕೊಳ್ಳಲಾಗದು. ದೇಸೀ ತಂತ್ರಜ್ಞಾನ ಅಭಿವೃದ್ಧಿಯಾಗಬೇಕು. ಕೌಶಲ್ಯಕ್ಕೆ ಒತ್ತು ನೀಡಬೇಕು. ವಿದೇಶಿ ವಸ್ತುಗಳ ಮೇಲೆ ಅವಲಂಬಿತರಾಗದೆ, ದೇಸೀಯತೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಜನ್ಮದಿನಾಂಕ ಫೋರ್ಜರಿ ನಿವೃತ್ತ ಬಿಷಪ್ಗೆ 5 ವರ್ಷ ಶಿಕ್ಷೆ
ಕ.ಪ್ರ ವಾರ್ತೆ ಮಂಗಳೂರು ಮಾ.20
ಜನ್ಮದಿನಾಂಕ ಫೋರ್ಜರಿ ಮಾಡಿದ ಸಿಎಸ್ಐ ನಿವೃತ್ತ ಬಿಷಪ್ ಸ್ಯಾಮುವೆಲ್ ದೇವರಾಜ ಬಂಗೇರ (64)ಎಂಬವರಿಗೆ 2ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯ 5 ವರ್ಷ ಸಜೆ ಮತ್ತು 15 ಸಾವಿರ ದಂಡ ವಿಧಿಸಿದೆ. ದೇವರಾಜ ಬಂಗೇರ ಹೆಚ್ಚುವರಿಯಾಗಿ ಬಿಷಪ್ ಆಗಿ ಅಧಿಕಾರದಲ್ಲಿ ಮುಂದುವರಿಯುವ ಉದ್ದೇಶದಿಂದ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ನಲ್ಲಿದ್ದ ಜನ್ಮದಿನಾಂಕ ಪ್ರಮಾಣ ಪತ್ರದಲ್ಲಿ ದಿನಾಂಕ 29-6-1944ರ ಬದಲು 29-6-1945 ಎಂದು ತಿದ್ದಿ ಪೋರ್ಜರಿ ಮಾಡಿದ್ದರು. ಆ ಬಗ್ಗೆ ಕದ್ರಿ ನಿವಾಸಿ ಉದಯರಾಜ್ ಕೌಂಡ್ಸ್ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಂಗನವಾಡಿ ಕಾರ್ಯಕರ್ತೆ ಮಾನಭಂಗಕ್ಕೆ ಯತ್ನ
ಕ.ಪ್ರ ವಾರ್ತೆ ಹೂವಿನಹಡಗಲಿ ಮಾ.20
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ತಾಲೂಕಿನ ಗಡಿಗ್ರಾಮ ಹರವಿ ಸಿದ್ದಾಪುರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಹರವಿ ಸಿದ್ದಾಪುರ ಗ್ರಾಮದ ವಿಧವೆಯೊಬ್ಬರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಾದ ಮಡಿವಾಳರ ಮಹಾಂತೇಶ, ಮಡಿವಾಳರ ಬಸವರಾಜ ಎಂಬವರನ್ನು ಬಂಧಿಸಲಾಗಿದೆ. ಮಹಾಂತೇಶ ಹಾಗೂ ಬಸವರಾಜ ಮಂಗಳವಾರ ಸಂಜೆ ತಮ್ಮ ಮನೆ ಮುಂದೆ ಬಂದು, ಮಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ದೈಹಿಕ ಹಲ್ಲೆ ಹಾಗೂ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.