ಬಹಿರಂಗ ಪ್ರಚಾರ ಮಾಡುವಂತಿಲ್ಲ
ಬಳ್ಳಾರಿ: ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಬಹಿರಂಗ ಪ್ರಚಾರ ಶುಕ್ರವಾರ ತೆರೆಬಿದ್ದಿದ್ದು, ಕೆಪಿ ಕಾಯ್ದೆಯ ಪ್ರಕಾರ ಅಭ್ಯರ್ಥಿ ಸೇರಿ ನಾಲ್ಕು ಜನ ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಒಟ್ಟು 27,690 ಪುರುಷರು, 28,607ರಷ್ಟು ಮಹಿಳಾ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ 118 ಪುರುಷರು, 9 ಮಹಿಳೆಯರು ಕಣದಲ್ಲಿದ್ದಾರೆ. ಅಂಚೆ ಪತ್ರದ ಮೂಲಕ ಶೇ. 86ರಷ್ಟು ಮತದಾನ ಮಾಡಲಾಗಿದೆ. ಅದರಲ್ಲಿ 9 ಸಾವಿರ ಚುನಾವಣಾ ಸಿಬ್ಬಂದಿ, 655 ಗೃಹರಕ್ಷಕ ದಳದವರು, 92 ಚಾಲಕರು, ನಿರ್ವಾಹಕರು ಹಾಗೂ 908 ಪೊಲೀಸ್ ಸಿಬ್ಬಂದಿಯಿದ್ದಾರೆ ಎಂದರು.
ಅಭ್ಯರ್ಥಿಗಳ ವೆಚ್ಚ: ಚುನಾವಣಾ ವೆಚ್ಚ ವೀಕ್ಷಕರ ಮಾಹಿತಿಯಂತೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ್ ಲಾಡ್ ರು. 1,13,975, ಬಿಜೆಪಿ ಅಭ್ಯರ್ಥಿ ಗುತ್ತಿಗನೂರು ವಿರೂಪಾಕ್ಷಗೌಡ ರು. 71,400, ಬಿಎಸ್ಸಾರ್ ಅಭ್ಯರ್ಥಿ ಎಸ್. ಮುರುಳಿಕೃಷ್ಣ ರು. 70,100, ಜೆಡಿಎಸ್ ಅಭ್ಯರ್ಥಿ ಮುನ್ನಾಭಾಯಿ ರು. 20 ಸಾವಿರ, ಎಸ್ಯುಸಿಐ(ಸಿ) ಅಭ್ಯರ್ಥಿ ಡಿ. ನಾಗಲಕ್ಷ್ಮಿ ರು. 4,91,400 ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳಲ್ಲಿ ಜೆಡಿಎಸ್ನ ಮೀನಳ್ಳಿ ತಾಯಣ್ಣ ರು. 2,70,190, ಬಿಎಸ್ಸಾರ್ನ ಬಿ. ಶ್ರೀರಾಮುಲು ರು. 2,67,967, ಕೆಜೆಪಿ ಅಭ್ಯರ್ಥಿ ಪಾಂಡು ಬ್ಯಾಲಚಿಂತೆ ರು. 63,292, ಕಾಂಗ್ರೆಸ್ ಅಭ್ಯರ್ಥಿ ಅಸುಂಡಿ ಹೊನ್ನೂರಪ್ಪ ರು. 53,806 ಖರ್ಚು ಮಾಡಿದ್ದಾರೆ. 35 ಕೆಪಿ ಕಾಯ್ದೆಯ ಪ್ರಕಾರ ಒಂದು ಕಡೆ 5ಕ್ಕೂ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಹಾಗೆ ಈ ಕ್ಷೇತ್ರಕ್ಕೆ ಸಂಬಂಧಪಡದ ರಾಜಕಾರಣಿಗಳು ಕ್ಷೇತ್ರದಲ್ಲಿರಬಾರದು ಎಂದು ಹೇಳಿದರು.
500 ಸಾವಿರ ಸಿಬ್ಬಂದಿ: ಮೇ 5ರಂದು ನಡೆಯುವ ಚುನಾವಣೆಗೆ ಭದ್ರತೆ ದೃಷ್ಟಿಯಿಂದ ಅರೆಸೇನಾಪಡೆ, ಕೆಎಸ್ಆರ್ಪಿ, ಡಿಎಆರ್ ಸೇರಿದಂತೆ ಸುಮಾರು 5000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ಡಾ. ಚಂದ್ರಗುಪ್ತಾ ಅವರು ತಿಳಿಸಿದ್ದಾರೆ.
880 ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಅರೆಸೇನಾಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಗೆ 30 ಅರೆಸೇನಾಪಡೆಗಳು ಅಂದರೆ 3000 ಸಿಬ್ಬಂದಿ ಬಂದಿದ್ದಾರೆ. ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. 5 ಕೆಎಸ್ಆರ್ಪಿ, 350 ಡಿಎಆರ್, 1400 ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಈಗಾಗಲೇ 42 ಪ್ರಕರಣಗಳನ್ನು ದಾಖಲಿಸಿ, 108 ಜನರನ್ನು ಬಂಧಿಸಲಾಗಿದೆ. ರು. 1.33 ಕೋಟಿ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಕೆಲ ಪಕ್ಷಗಳಿಗೆ ಸಂಬಂಧಿಸಿದಂತೆ ಇನ್ನುಳಿದ ಇತರ ಹಣವಾಗಿದೆ. ಸೀಜ್ ಮಾಡಿರುವುದನ್ನು ಕೋರ್ಟ್ಗೆ ಮಾಹಿತಿ ನೀಡಲಾಗಿದೆ. ಇನ್ನು ತನಿಖೆ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ 1150 ಜನರಿಂದ ಬಾಂಡ್ ಬರೆಸಿಕೊಳ್ಳಲಾಗಿದ್ದು, ಅದರಲ್ಲಿ 31 ಜನರನ್ನು ಬಂಧಿಸಲಾಗಿದೆ ಎಂದರು.